Duster: ಶೋರೂಂ ಮುಂದೆ ಜನ ಸೇರೋದು ಪಕ್ಕಾ! ಹೊಸ ಡಸ್ಟರ್ ಬಿಡುಗಡೆಗೆ ದಿನಾಂಕ ಘೋಷಣೆ.. ಬೆಲೆ ಎಷ್ಟು?
ಜನವರಿ 26ರಂದು ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಈ ಕಾರು ನೋಡುವುದಕ್ಕೆ ಸ್ಟೈಲಿಶ್ ಆಗಿದ್ದು, ಹತ್ತಾರು ನವೀನತೆಗಳಿಗೂ ಸಾಕ್ಷಿಯಾಗಿದೆ. ಇದೇ 'ಡಸ್ಟರ್'ನ್ನು ಖರೀದಿಸಲು ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ, ಕಂಪನಿಯು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಕೆಲವೇ ದಿನಗಳಲ್ಲಿ ಈ ನೂತನ ಎಸ್‌ಯುವಿಯು ಗ್ರಾಹಕರ ಮನೆಗಳನ್ನು ತಲುಪಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೊಚ್ಚ ಹೊಸ 'ರೆನಾಲ್ಟ್ ಡಸ್ಟರ್' ಎಸ್‌ಯುವಿಯು ಮಾರ್ಚ್ 17ರಂದು ಮಾರಾಟಕ್ಕೆ ಬರಲಿದೆ. ಈಗಾಗಲೇ ಪ್ರಿ-ಬುಕ್ಕಿಂಗ್‌ನ್ನು ಶುರು ಮಾಡಲಾಗಿದೆ. ಆಸಕ್ತ ಗ್ರಾಹಕರು, ಸಮೀಪದ ಶೋರೂಂ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು. ಈ ಕಾರು ರೂ.9.50 ಲಕ್ಷದಿಂದ ರೂ.19 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಇದು ಅತ್ಯಾಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ನೋಡುಗರ ಕಣ್ಮನ ಸೆಳೆಯಬಲ್ಲ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು & 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್, ಮೂನ್‌ಲೈಟ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್, ರಿವರ್ ಬ್ಲೂ ಮತ್ತು ಸನ್‌ಸೆಟ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ಈ ಎಸ್‌ಯುವಿಯು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ದೊಡ್ಡ ಗಾತ್ರದ 700 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ 'ಡಸ್ಟರ್' ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.8-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್, 160 ಪಿಎಸ್ ಹಾರ್ಸ್ ಪವರ್ ಹಾಗೂ 172 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 160 ಪಿಎಸ್ ಹಾರ್ಸ್ ಪವರ್ ಮತ್ತು 280 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಇನ್ನೊಂದು 1.0-ಲೀಟರ್ ಪೆಟ್ರೋಲ್ ಎಂಜಿನ್, 100 ಪಿಎಸ್ ಹಾರ್ಸ್ ಪವರ್ ಹಾಗೂ 160 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ರೂಪಾಂತರಗಳಿಗೆ ತಕ್ಕಂತೆ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಮತ್ತು 8-ಸ್ಪೀಡ್ ಡಿಹೆಚ್‌ಟಿ (ಡೆಡಿಕೇಟೆಡ್ ಹೈಬ್ರಿಡ್ ಟ್ರಾನ್ಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 13.9 ರಿಂದ 19.87 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎನ್ನಲಾಗಿದೆ.

ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಡುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಹೊಸ 'ರೆನಾಲ್ಟ್ ಡಸ್ಟರ್' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ 6-ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ, ಮಾರುತಿ ಸುಜುಕಿ ವಿಕ್ಟೋರಿಸ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಟಾಟಾ ಸಿಯೆರಾ, ಹೋಂಡಾ ಎಲಿವೇಟ್ ಹಾಗೂ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








