Nissan: ಪ್ರೀಮಿಯಂ ಬೈಕ್ ದರಕ್ಕೆ ಹೊಸ ಎಂಪಿವಿ ಬರುತ್ತೆ! 7-ಸೀಟರ್.. ಜನವರಿ 21ಕ್ಕೆ ಪರಿಚಯ
ನಿಸ್ಸಾನ್ ಇಂಡಿಯಾ (Nissan India) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 'ಮ್ಯಾಗ್ನೈಟ್' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ರೂ.5.62 ಲಕ್ಷದಿಂದ ರೂ.10.76 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಸದ್ಯ, ಕಂಪನಿಯು ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದ್ದು, ಹೊಚ್ಚ ಹೊಸ ಕಾರೊಂದನ್ನು ಮಾರಾಟಕ್ಕೆ ತರಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇದೇ ಜನವರಿ 21 ರಂದು ನೂತನ ನಿಸ್ಸಾನ್ ಗ್ರಾವೈಟ್ (Nissan Gravite) ಕಾರನ್ನು ಪರಿಚಯಿಸಲಾಗುತ್ತದೆ. ಇದೊಂದು ಎಂಪಿವಿಯಾಗಿದ್ದು, ಅತ್ಯಂತ ಕೈಗೆಟುಕುವ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಕನಿಷ್ಠ ರೂ.6 ಲಕ್ಷ ಹಾಗೂ ಗರಿಷ್ಠ ರೂ.9 ಲಕ್ಷ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿರಲಿದೆ. ವಿಶೇಷವಾಗಿ ನಿಸ್ಸಾನ್ ಹಾಗೂ ರೆನಾಲ್ಟ್ ಕಂಪನಿಗಳು ವ್ಯಾಪಾರ ಪಾಲುದಾರಿಕೆ ಹೊಂದಿವೆ. ಹೀಗಾಗಿ, 'ಗ್ರಾವೈಟ್' ಕೂಡ 'ಟ್ರೈಬರ್'ನ್ನು ಆಧರಿಸಿರಲಿದ್ದು. ಸಿಎಂಎಫ್-ಎ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿದೆ. ಉತ್ತಮವಾದ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಪಡೆದಿರುವ ನಿರೀಕ್ಷೆಯಿದೆ.
ಹೊಸ 'ನಿಸ್ಸಾನ್ ಗ್ರಾವೈಟ್' ಹೆಚ್ಚು ವಿಶಾಲ ಗಾತ್ರದಲ್ಲಿರಲಿದೆ. 3,985 ಎಂಎಂ ಉದ್ದ, 1,739 ಎಂಎಂ ಅಗಲ ಹಾಗೂ 1,643 ಎಂಎಂ ಎತ್ತರವಿರಲಿದೆ. 182 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,636 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಇದು ಸಹ 'ರೆನಾಲ್ಟ್ ಟ್ರೈಬರ್'ನಂತೆ 7 ಆಸನ ಆಯ್ಕೆ ವ್ಯವಸ್ಥೆ ಹೊಂದಿರಲಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಸಾಗಿಸಲು ಸಾಧ್ಯವಾಗುವಂತೆ ಪುಟ್ಟ ಗಾತ್ರದ 84 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.
ಈ ಕಾರು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿರಲಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿರಲಿದೆ. 72 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 96 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ. 20 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ.
'ನಿಸ್ಸಾನ್ ಗ್ರಾವೈಟ್' ಕ್ಯಾಬಿನ್ ವಿನ್ಯಾಸವು ಚೆನ್ನಾಗಿರಲಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್-ಡ್ರೈವರ್ ಡಿಸ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮ್ಯಾನುವಲ್ ಎಸಿ, ರಿಮೋಟ್ ಕೀಲೆಸ್ ಎಂಟ್ರಿ, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ 6-ಸ್ಪೀಕರ್ ಸೌಂಡ್ ಸಿಸ್ಟಮ್ ಒಳಗೊಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್‌ಗಳನ್ನು ಪಡೆದಿರುವ ಸಾಧ್ಯತೆಯಿದೆ.
ಈ 'ನಿಸ್ಸಾನ್ ಗ್ರಾವೈಟ್'ಗೆ ಸಾಲು - ಸಾಲು ಪ್ರತಿಸ್ಪರ್ಧಿಗಳಿವೆ. ಬಹುಮುಖ್ಯವಾಗಿ ಟೊಯೊಟಾ ರೂಮಿಯನ್ (Toyota Rumion), ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis), ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಹಾಗೂ ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಕಾರುಗಳು ಪ್ರಬಲವಾದ ಎದುರಾಳಿಯಾಗಿವೆ.
Image Source Link: Twitter


Click it and Unblock the Notifications








