ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಅಗ್ಗದ ಪುಟ್ಟ SUV ಬಿಡುಗಡೆಗೆ ಸಜ್ಜು: ವಿಶೇಷತೆಗಳೇನು?
ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಯ ಕಾನ್ಸೆಪ್ಟ್ ಮಾಡಲ್‌ನ್ನು ರೆನಾಲ್ಟ್ (Renault) ಅನಾವರಣಗೊಳಿಸಿದೆ. ಈ ಹೊಸ ಎಸ್‌ಯುವಿಗೆ ಕಂಪನಿಯು ಬ್ರಿಡ್ಜರ್ (Renault Bridger) ಎಂದು ಹೆಸರಿಟ್ಟಿದೆ. ಮುಂಬರಲಿರುವ ಈ ಸಬ್ - 4 ಮೀಟರ್ ಎಸ್‌ಯುವಿಯನ್ನು ಭಾರತದಲ್ಲಿ ಉತ್ಪಾದಿಸಲಾಗುವುದು, ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಇಲ್ಲಿಂದ ರಫ್ತು ಮಾಡಲಾಗುವುದು ಎಂದು ವರದಿಯಾಗಿದೆ. ಇದನ್ನು ರೆನಾಲ್ಟ್‌ನ ಮುಂಬರುವ 'ಮಿನಿ-ಡಸ್ಟರ್' ಎಂದು ಸಹ ಹೇಳಲಾಗುತ್ತಿದೆ. ಈ ಕಾರು ಹೇಗಿರಲಿದೆ, ಬಿಡುಗಡೆ ಯಾವಾಗ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದರ ಬಗ್ಗೆ ತಿಳಿಯೋಣ.
ಹೊಸ ಕಾರನ್ನು ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗುವುದು ಮತ್ತು ಚೆನ್ನೈನಲ್ಲಿರುವ ರೆನಾಲ್ಟ್‌ನ ಕಾರ್ಖಾನೆಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಡಸ್ಟರ್‌ನ ಫ್ಲಾಟ್ ಮತ್ತು ಬಾಕ್ಸಿ ಡಿಸೈನ್‌ನಿಂದ ಸ್ಫೂರ್ತಿ ಪಡೆದಿರುವ ಬ್ರಿಡ್ಜರ್ ಕಾರು, SUV ನಂತಹ ಸರಿಯಾದ 'ರಗಡ್' ಲುಕ್‌ದೊಂದಿಗೆ ಡಿಸೈನ್ ವಿಷಯದಲ್ಲಿ ರಾಜಿಯಾಗದೇ ರೆನಾಲ್ಟ್ ಡಸ್ಟರ್‌ಗೆ ಸರಿಯಾದ ಸಹೋದರ ಎನ್ನಿಸಿಕೊಂಡಿದೆ ಎಂದು ಹೇಳಬಹುದು.

ಹೊಸ ಬ್ರಿಡ್ಜರ್ ಹಿಂಭಾಗದಲ್ಲಿ ಜೋಡಿಸಲಾದ ವೀಲ್‌ನೊಂದಿಗೆ ಬಾಕ್ಸಿ ಡಿಸೈನ್‌ನೊಂದಿಗೆ ರಗಡ್ ಲುಕ್ ಪಡೆದುಕೊಂಡಿದೆ. ಈ ಕಾನ್ಸೆಪ್ಟ್ ಮಾಡಲ್ ನಾಲ್ಕು ಮೀಟರ್‌ಗಳಿಗಿಂತ ಕಡಿಮೆ ಉದ್ದವನ್ನು ಹೊಂದಿರಲಿದ್ದು, ಡಸ್ಟರ್‌ನ ಹೊಸ R-GMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಆಫ್ - ರೋಡ್ ಕೇಂದ್ರಿತ ಕ್ರಾಸ್‌ಒವರ್ ಎಸ್‌ಯುವಿ ಹೇಗಿರಬಹುದು ಎಂಬುದರ ಬಗ್ಗೆ ನಮಗೊಂದು ನೋಟವನ್ನು ನೀಡುತ್ತದೆ.
ರೆನಾಲ್ಟ್ ಬ್ರಿಡ್ಜರ್ ಎಸ್‌ಯುವಿ 18 - ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದಿದೆ. ಇದು ವಿಶಿಷ್ಟ ಕ್ರಾಸ್‌ಒವರ್‌ಗಳಿಗೆ ಹೋಲಿಸಿದರೆ ಗಮನಾರ್ಹವಾದ ಎತ್ತರ ಮತ್ತು ಹೆಚ್ಚು ದೃಢವಾದ ರೋಡ್ ಪ್ರೆಸೆನ್ಸ್ ಹೊಂದಿದೆ. ಚೌಕಾಕಾರದ ಮುಂಭಾಗದ ಗ್ರಿಲ್, ಮಸ್ಕುಲರ್ ಫ್ರಂಟ್ ಲೈನ್‌ಗಳು ಮತ್ತು ಗ್ರಿಲ್ ಕಡೆಗೆ ಚಾಚಿಕೊಂಡಿರುವ ಸ್ಲಿಮ್ ಹೆಡ್‌ಲ್ಯಾಂಪ್‌ಗಳು ಕಾರನ್ನು ಸ್ಪೋರ್ಟಿಯಾಗಿ ಕಾಣುವಂತೆ ಮಾಡಿವೆ.

ಇದರ ಸಣ್ಣ ಗಾತ್ರದ ಹೊರತಾಗಿಯೂ, ಬ್ರಿಡ್ಜರ್ ಒಳಭಾಗದಲ್ಲಿ ವಿಶಾಲವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಇದು 400 ಲೀಟರ್ ಬೂಟ್ ಸ್ಪೇಸ್ ಮತ್ತು 200 ಎಂಎಂ ಹಿಂಭಾಗದ ಲೆಗ್ ರೂಮ್ ಅನ್ನು ನೀಡುತ್ತದೆ. ಈ ಕಾರು ತನ್ನ ವಿಭಾಗದ ಇತರ ಪ್ರತಿಸ್ಪರ್ಧಿ ಕಾರುಗಳಿಗಿಂತ ಉತ್ತಮವಾಗಿ ಇರಲಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.
ಹೊಸ ರೆನಾಲ್ಟ್ ಬ್ರಿಡ್ಜರ್ ಉತ್ಪಾದನೆಯು 2027 ರ ಅಂತ್ಯದಲ್ಲಿ ಪ್ರಾರಂಭವಾಗಲಿದೆ, ಮೊದಲು ಭಾರತದಲ್ಲಿ ಮಾರಾಟವಾಗಲಿದೆ. ನಂತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಂತಹ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಇದು ಪೆಟ್ರೋಲ್, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಾಗುವ ನಿರೀಕ್ಷೆಗಳಿವೆ. ಮಾರುಕಟ್ಟೆ ಅವಶ್ಯಕತೆಗಳನ್ನು ಅವಲಂಬಿಸಿ ಬಹು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಬಹುದು.

ಉದ್ಯಮ ಮೂಲಗಳು ತಿಳಿಸಿರುವ ಪ್ರಕಾರ, ಆರಂಭಿಕವಾಗಿ ಬಿಡುಗಡೆಯಾಗುವ ಮಾಡಲ್ ಹೊಸ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗಲಿದೆ. ನಂತರ ನಿಧಾನವಾಗಿ ಎಲೆಕ್ಟ್ರಿಕ್ ಮಾಡಲ್ ಪರಿಚಯಿಸಲಿದ್ದು, ಇದನ್ನು 35kWh ಮತ್ತು 55kWh ಬ್ಯಾಟರಿ ಪ್ಯಾಕ್‌ಗಳೊಂದಿಗೆ ನೀಡಲಾಗುವುದು. ಇನ್ನೊಂದು ಪವರ್‌ಟ್ರೇನ್ ರೆನಾಲ್ಟ್ ಡಸ್ಟರ್ ನೀಡುವಂತೆಯೇ 158bhp ಪವರ್ ಹೊರಹಾಕುವ ಹೈಬ್ರಿಡ್ ಎಂಜಿನ್ ಆಗಿರುತ್ತದೆ.
2030ರ ವೇಳೆಗೆ ವಾರ್ಷಿಕವಾಗಿ 20 ಲಕ್ಷಕ್ಕಿಂತ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮೈಲಿಗಲ್ಲಿನತ್ತ ಕೆಲಸ ಮಾಡುತ್ತಿರುವುದರಿಂದ ಮುಂದಿನ ನಾಲ್ಕು ವರ್ಷಗಳಲ್ಲಿ ಜಾಗತಿಕವಾಗಿ 26 ಹೊಸ ಕಾರುಗಳನ್ನು ಪರಿಚಯಿಸಲು ರೆನಾಲ್ಟ್ ಪ್ಲಾನ್ ಮಾಡಿಕೊಂಡಿದೆ. ದಶಕದ ಅಂತ್ಯದ ವೇಳೆಗೆ EV ಮತ್ತು ಹೈಬ್ರಿಡ್ ಮಾಡಲ್‌ಗಳು ಜಾಗತಿಕ ಮಾರಾಟದ ಸರಿಸುಮಾರು ಅರ್ಧದಷ್ಟು ಪಾಲನ್ನು ಹೊಂದಿರುವಂತೆ ಮಾಡುವ ಗುರಿಯೊಂದಿಗೆ ರೆನಾಲ್ಟ್ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದೆ.


Click it and Unblock the Notifications








