Tesla: ಬೆಂಗಳೂರಿಗೆ ಟೆಸ್ಲಾ ಲಗ್ಗೆ.. ಅತಿ ಶೀಘ್ರದಲ್ಲೇ ಹೊಸ ಶೋರೂಂ ಆರಂಭ
ವಿಶ್ವದ ನಂಬರ್ 1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾಡೆಲ್ ವೈ, ಮಾಡೆಲ್ 3 ಹಾಗೂ ಮಾಡೆಲ್ ಎಸ್ ಸೇರಿದಂತೆ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. 2025ರ ಜುಲೈನಲ್ಲಿ ಭಾರತದ ವಾಹನ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತ್ತು. ವಾಣಿಜ್ಯ ನಗರಿ ಮುಂಬೈನಲ್ಲಿ ಮೊದಲ ಶೋರೂಂನ್ನು ತೆರೆದಿತ್ತು. ಆ ಬಳಿಕ, ನವದೆಹಲಿ ಹಾಗೂ ಗುರುಗ್ರಾಮಕ್ಕೂ ಲಗ್ಗೆ ಇಟ್ಟಿತ್ತು.
ಸದ್ಯ, ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಶೋರೂಂ ಆರಂಭಿಸಲು ಟೆಸ್ಲಾ ಸಿದ್ದವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸ ಶೋರೂಂ ತೆರೆಯುವುದಾಗಿ ಶನಿವಾರ ಘೋಷಣೆ ಮಾಡಿದೆ. ಈ ಬಗ್ಗೆ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿಯೂ ಪೋಸ್ಟ್ ಮಾಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಟೆಸ್ಲಾ ಕಾರಿದು:
ಭಾರತದಲ್ಲಿ ಟೆಸ್ಲಾ ಮಾಡೆಲ್ ವೈ (Tesla Model Y) ಯಶಸ್ವಿಯಾಗಿ ಮಾರಾಟವಾಗುತ್ತಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಕನಿಷ್ಠ ರೂ.59.89 ಲಕ್ಷ ಹಾಗೂ ಗರಿಷ್ಠ ರೂ.73.89 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಮತ್ತು ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಎಂಬ 2 ರೂಪಾಂತರಗಳೊಂದಿಗೂ ಸಿಗುತ್ತದೆ.
ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಕನೆಕ್ಟ್ ಎಲ್ಇಡಿ ಡಿಆರ್‌ಎಲ್‌ಗಳು, ಟೈಲ್‌ಲ್ಯಾಂಪ್‌ಗಳು, ಫ್ಲಶ್-ಡೋರ್ ಹ್ಯಾಂಡಲ್‌ಗಳು ಹಾಗೂ 19-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಪರ್ಲ್ ವೈಟ್, ಡೀಪ್ ಬ್ಲೂ ಮೆಟಾಲಿಕ್, ಅಲ್ಟ್ರಾ ರೆಡ್ ಮತ್ತು ಡೈಮಂಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಕಾರು ಹೆಚ್ಚು ವಿಶಾಲವಾಗಿದೆ. 4,797 ಮಿ.ಮೀ ಉದ್ದ, 1,982 ಮಿ.ಮೀ ಅಗಲ ಮತ್ತು 1,624 ಮಿ.ಮೀ ಎತ್ತರವಿದೆ. 167 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,890 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 2,003 ಕೆಜಿ ವರೆಗೆ ತೂಕವಿದೆ.
ನೂತನ 'ಟೆಸ್ಲಾ ಮಾಡೆಲ್ ವೈ' ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 60 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 500 ರಿಂದ 622 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ.
ಇದು 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 854 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 6.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 15.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಓವರ್-ದಿ-ಏರ್ ಅಪ್ಡೇಟ್, ವೆಂಟಿಲೇಟೆಡ್ ಹೀಟೆಡ್ ಫ್ರಂಟ್ ಸೀಟ್‌ಗಳು, 9-ಸ್ಪೀಕರ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಕನೆಕ್ಟ್ಡ್ ಕಾರ್ ಟೆಕ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಹೊಸ 'ಟೆಸ್ಲಾ ಮಾಡೆಲ್ ವೈ' ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಇದಕ್ಕೆ ಹ್ಯುಂಡೈ ಐಯೋನಿಕ್ 5, ಮರ್ಸಿಡಿಸ್ ಇಕ್ಯೂಇ ಹಾಗೂ ಕಿಯಾ ಇವಿ6ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








