MG: ನಾಳೆ ಹೊಸ ಎಂಜಿ ಕಾರು ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ನಾಳೆ (ಫೆಬ್ರವರಿ 12) ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India) ಹೊಚ್ಚ ಹೊಸ ಕಾರೊಂದನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ದೊಡ್ಡ ಗಾತ್ರದ ಫ್ಯಾಮಿಲಿ ಎಸ್‌ಯುವಿ 'ಮೆಜೆಸ್ಟರ್'ನ್ನು ಮಾರಾಟಕ್ಕೆ ತರಲಿದೆ. ಬನ್ನಿ, ನೂತನ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ (Price):
ನೂತನ ಎಂಜಿ ಮೆಜೆಸ್ಟರ್ (MG Majestor) ಎಸ್‌ಯುವಿ, ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ. ಕನಿಷ್ಠ ರೂ.37 ಲಕ್ಷ ಹಾಗೂ ಗರಿಷ್ಠ ರೂ.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ 'ಟೊಯೊಟಾ ಫಾರ್ಚೂನರ್' ನೇರವಾದ ಎದುರಾಳಿಯಾಗಲಿದೆ.

ವಿನ್ಯಾಸ & ಬಣ್ಣಗಳು (Design & Colours):
ಈ ಕಾರಿನ ವಿನ್ಯಾಸದ ಕುರಿತು ಹಲವು ಅಂಶಗಳು ಬಹಿರಂಗಗೊಂಡಿವೆ. ಇದು ನೋಡುದರ ಕಣ್ಣು ಕುಕ್ಕುವಂತಿದೆ. ಮುಂಭಾಗ (ಫ್ರಂಟ್) ಅತ್ಯುತ್ತಮವಾದ ಗ್ರಿಲ್ & ಬಂಪರ್‌ನ್ನು ಪಡೆದಿದ್ದು, ಉತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಎಲ್ಇಡಿ ಟೈಲ್ ಲೈಟ್‌ಗಳನ್ನು ಪಡೆದಿದೆ. ಡೀಪ್ ಗೋಲ್ಡನ್, ಮೆಟಲ್ ಬ್ಲ್ಯಾಕ್, ಮೆಟಲ್ ಆಶ್, ವಾರ್ಮ್ ವೈಟ್ ಹಾಗೂ ಪರ್ಲ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುವ ಸಾಧ್ಯತೆಯಿದೆ.
ಸುತ್ತಳತೆ (Dimension):
ಹೊಸ 'ಎಂಜಿ ಮೆಜೆಸ್ಟರ್' ಹೆಚ್ಚು ವಿಶಾಲವಾಗಿದೆ. 5,046 ಮಿ.ಮೀ ಉದ್ದ, 2,016 ಮಿ.ಮೀ ಅಗಲ ಹಾಗೂ 1,876 ಮಿ.ಮೀ ಎತ್ತರವಿರಲಿದೆ. 230 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,950 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):
ಇದು 6/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು ಸಾಧ್ಯವಾಗುವಂತೆ 343 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿರುವ ನಿರೀಕ್ಷೆಯಿದೆ.
ಕಾರ್ಯಕ್ಷಮತೆ (Performance):
ಈ ಕಾರು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿರಲಿದೆ. 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದೆ. 216 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 479 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್‌ನ್ನು ಹೊರಹಾಕಬಹುದು. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದೆ. 15.34 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎನ್ನಲಾಗಿದೆ.
ವೈಶಿಷ್ಟ್ಯಗಳು (Features):
ನೂತನ 'ಎಂಜಿ ಮೆಜೆಸ್ಟರ್' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿರಲಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 64-ಕಲರ್ ಆಂಬಿಯೆಂಟ್ ಲೈಟಿಂಗ್, 12-ಸ್ಪೀಕರ್ ಜೆಬಿಎಲ್ ಪ್ರೀಮಿಯಂ ಆಡಿಯೊ ಸಿಸ್ಟಮ್ ಹಾಗೂ ಟ್ರಿಪಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.
ಸುರಕ್ಷತಾ ವೈಶಿಷ್ಟ್ಯಗಳು (Safety Features):
ಇದು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ.


Click it and Unblock the Notifications








