VinFast: ಸೇಫ್ಟಿಯಲ್ಲಿ ಟಾಟಾಗೆ ಸವಾಲ್: ಹೊಸ ಬ್ರಾಂಡ್ SUV ನೋಡಿ ನಡುಗಿದ ಸ್ವದೇಶಿ ಕಂಪನಿಗಳು!
ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ಭಾರತ್ NCAP) ನಿಂದ ವಿನ್‌ಫಾಸ್ಟ್ ವಿಎಫ್7 (VinFast VF 7) ಎಲೆಕ್ಟ್ರಿಕ್ ಎಸ್‌ಯುವಿಗೆ ಅತ್ಯುನ್ನತ 5-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ. ಈ ವಿನ್‌ಫಾಸ್ಟ್ ಕಂಪನಿಯು ವಿಯೆಟ್ನಾಂ ಮೂಲದ ಕಾರು ತಯಾರಕ ಕಂಪನಿಯಾಗಿದ್ದು, ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. VF 7 ಎಸ್‌ಯುವಿ ವಯಸ್ಕ ಪ್ರಯಾಣಿಕರ ರಕ್ಷಣೆ (AOP)ಯಲ್ಲಿ 32 ಅಂಕಗಳಲ್ಲಿ 28.54 ಅಂಕಗಳು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆ (COP)ಯಲ್ಲಿ 49 ಅಂಕಗಳಲ್ಲಿ 45.25 ಅಂಕಗಳನ್ನು ಗಳಿಸಿದೆ. ಈ ಅಂಕಗಳು ವಯಸ್ಕರು ಮತ್ತು ಮಕ್ಕಳಿಗೆ ಉನ್ನತ ಮಟ್ಟದ ರಕ್ಷಣೆ ನೀಡುವುದನ್ನು ಖಚಿತಪಡಿಸಿದೆ.
ಏನಿದು ಭಾರತ್ NCAP?
ಭಾರತ್ NCAP ಎಂಬುದು ಭಾರತ ಸರ್ಕಾರವು ಜಾರಿಗೆ ತಂದ ವಾಹನ ಸುರಕ್ಷತಾ ಮೌಲ್ಯಮಾಪನ ಕಾರ್ಯಕ್ರಮವಾಗಿದ್ದು, ಗ್ಲೋಬಲ್ NCAP ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಹೊಂದಿಕೆಯಾಗುತ್ತದೆ. ಈ ಕಾರ್ಯಕ್ರಮವು ಕಾರುಗಳ ಕ್ರ್ಯಾಶ್ ಪರೀಕ್ಷೆಗಳ ಮೂಲಕ ಪ್ರಯಾಣಿಕರ ರಕ್ಷಣೆಯನ್ನು ಮೌಲ್ಯಮಾಪನ ಮಾಡುತ್ತದೆ. 3 ರಿಂದ 5 ಸ್ಟಾರ್‌ಗಳವರೆಗೆ ಸುರಕ್ಷತಾ ರೇಟಿಂಗ್‌ಗಳನ್ನು ನೀಡುತ್ತದೆ. 3 ಕ್ಕಿಂತ ಕಡಿಮೆ ನೀಡಿದರೆ ತೀರಾ ಕಳಪೆ ಗುಣಮಟ್ಟದ ಕಾರು ಎಂದು ಅರ್ಥ.

5 ಸ್ಟಾರ್ ರೇಂಟಿಂಗ್ ಪಡೆದ VF 7: ಕ್ರ್ಯಾಶ್ ಟೆಸ್ಟ್‌ನ ಮುಂಭಾಗದ ಇಂಪ್ಯಾಕ್ಟ್ ಪರೀಕ್ಷೆಗಳಲ್ಲಿ VF 7 ಎಸ್‌ಯುವಿಯು ಚಾಲಕ ಮತ್ತು ಪ್ರಯಾಣಿಕರಿಬ್ಬರ ತಲೆ, ಕುತ್ತಿಗೆ ಮತ್ತು ಕಾಲಿನ ರಕ್ಷಣೆಯಲ್ಲಿ 4 ಅಂಕಗಳನ್ನು ಪಡೆದಿದೆ, ಇದು ಭಾರತ್ NCAP ಮಾಪಕದಲ್ಲಿ ಗರಿಷ್ಠವಾಗಿದೆ. ಸೈಡ್ ಇಂಪ್ಯಾಕ್ಟ್ ಪರೀಕ್ಷೆಗಳಲ್ಲಿ, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 16 ಅಂಕಗಳಿಗೆ 16 ಅಂಕಗಳು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 8 ಅಂಕಗಳಿಗೆ 8 ಪೂರ್ಣ ಅಂಕಗಳನ್ನು ಗಳಿಸಿದೆ.
ಪೋಲ್ ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ VF 7 ಎಸ್‌ಯುವಿ ತಲೆ ಗಾಯದ ಮೌಲ್ಯಮಾಪನ ಮೌಲ್ಯಗಳನ್ನು ಕ್ರಮವಾಗಿ 109 ಮತ್ತು 131 ರಲ್ಲಿ ದಾಖಲಿಸಲಾಗಿದೆ, ಇದು ಭಾರತ್ NCAP ನಿರ್ಣಾಯಕ ಮಿತಿ 700 ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಫಲಿತಾಂಶಗಳು ಹೆಚ್ಚಿನ ಅಪಾಯದ ಅಪಘಾತ ಸನ್ನಿವೇಶಗಳಲ್ಲಿ ಪರಿಣಾಮಕಾರಿ ತಲೆ ರಕ್ಷಣೆಯನ್ನು ಒದಗಿಸುತ್ತವೆ.

ಹೊಸ VF 7 ಎಸ್‌ಯುವಿಯಲ್ಲಿ 7 ಏರ್‌ಬ್ಯಾಗ್‌ಗಳು ಮತ್ತು ಸ್ಮಾರ್ಟ್ ADAS ವೈಶಿಷ್ಟ್ಯಗಳನ್ನು ಹೊಂದಿದೆ. ಉದಾಹರಣೆಗೆ ಆಟೋ ಲೇನ್ ಚೇಂಜಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಮರ್ಜೆನ್ಸಿ ಲೇನ್ ಕೀಪಿಂಗ್ ಅಸಿಸ್ಟ್, ಫ್ರಂಟ್ ಮತ್ತು ರಿಯರ್ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನೊಂದಿಗೆ ವೈವಿಧ್ಯಮಯ ಸಂಚಾರ ಪರಿಸ್ಥಿತಿಗಳಲ್ಲಿ ಚಾಲನಾ ಬೆಂಬಲವನ್ನು ನೀಡುತ್ತದೆ.
ಕಂಪನಿಯ ಎಲೆಕ್ಟ್ರಿಕ್ SUV ಗಳು ಭಾರತದಲ್ಲಿ VinFast ನ ಸಮಗ್ರ EV ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿವೆ. ಸ್ಥಳೀಯ ಉತ್ಪಾದನೆ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಉತ್ತಮ ಮಾರಾಟದ ನಂತರದ ಸರ್ವಿಸ್‌ಗಳನ್ನು ಒಳಗೊಂಡಿದೆ. ಈ ಸಂಯೋಜಿತ ವಿಧಾನವು ಸ್ಥಳೀಯ ಪಾಲುದಾರರೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯ ಮೂಲಕ ತಡೆರಹಿತ ಗ್ರಾಹಕ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ವಿನ್‌ಫಾಸ್ಟ್ ಇಂಡಿಯಾದ ಸಿಇಒ ತಪನ್ ಘೋಷ್ ಮಾತನಾಡಿ "ಭಾರತ್ NCAP ನಿಂದ VF 6 ಮತ್ತು VF 7 ಎರಡೂ ಎಸ್‌ಯುವಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆವೆ. ಇದು ವಿಶ್ವದ ಅತಿದೊಡ್ಡ ಆಟೋಮೋಟಿವ್ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ವಿನ್‌ಫಾಸ್ಟ್‌ನ ಎಲೆಕ್ಟ್ರಿಕ್ ವಾಹನಗಳ ಗುಣಮಟ್ಟ ಮತ್ತು ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಒತ್ತಿಹೇಳುತ್ತದೆ.
ಈ ಫಲಿತಾಂಶಗಳು ವಿನ್‌ಫಾಸ್ಟ್ EV ಎಸ್‌ಯುವಿಗಳನ್ನು ದೃಢವಾದ ಎಂಜಿನಿಯರಿಂಗ್ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ ಮತ್ತು ಕಠಿಣ ಸುರಕ್ಷತಾ ಮೌಲ್ಯಮಾಪನ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂದು ತೋರಿಸುತ್ತದೆ. ಕಾರುಗಳ ಸುಧಾರಣೆಯಲ್ಲಿ ನಿರಂತರ ಹೂಡಿಕೆಗೆ ನಾವು ಬದ್ಧರಾಗಿದ್ದೇವೆ, ಪರಿಸರ ಸ್ನೇಹಿ ಮತ್ತು ತಾಂತ್ರಿಕವಾಗಿ ಮುಂದುವರಿದ ಎಲೆಕ್ಟ್ರಿಕ್ ವಾಹನಗಳನ್ನು ತಲುಪಿಸುತ್ತೇವೆ, ಗ್ರಾಹಕರಿಗೆ ವಿಶ್ವಾಸ ಮತ್ತು ಮನಸ್ಸಿನ ಶಾಂತಿಯನ್ನು ಒದಗಿಸುತ್ತೇವೆ" ಎಂದು ಭರವಸೆ ನೀಡಿದ್ದಾರೆ.


Click it and Unblock the Notifications








