ಬಿಎಂಡಬ್ಲ್ಯು ಸಕತ್ ಪವರ್‌ಫುಲ್ ಗಾಡಿ ಭಾರತಕ್ಕೆ
ಪ್ರಮುಖವಾಗಿಯೂ ದೇಶದ ಶ್ರೀಮಂತ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿರುವ ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ನೂತನ 3 ಸಿರೀಸ್ ಜಿಟಿ ಕಾರನ್ನು ಸದ್ಯದಲ್ಲೇ ಭಾರತದಲ್ಲಿ ಲಾಂಚ್ ಮಾಡುವ ಯೋಜನೆ ಹೊಂದಿದೆ.
ಜಿಟಿ ಅಂದರೇನು?
ಅಷ್ಟಕ್ಕೂ ಜಿಟಿ ಅಂದರೇನು? ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತಿದೆ. ಜಿಟಿ ಅಂದರೆ ಐಷಾರಾಮಿ ನಿರ್ವಹಣಾ ಕಾರಾಗಿದ್ದು, ದೀರ್ಘ ದೂರದ ವರೆಗೂ ಗರಿಷ್ಠ ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಟು ಡೋರ್ ಕೂಪೆ ಅಥವಾ 2+2 ಸಿಟ್ಟಿಂಗ್ ವ್ಯವಸ್ಥೆಯೊಂದಿಗೆ ಆಗಮನವಾಗುತ್ತದೆ.
ಅಂದ ಹಾಗೆ ಇಟಲಿಯ 'ಗ್ರ್ಯಾನ್ ಟರಿಸ್ಮೊ' ಶಬ್ದ ಹುಟ್ಟಿರುವ ಜಿಟಿ ಪದವು 'ಗ್ರಾಂಡ್ ಟೂರರ್' ಎಂದರಿಯಲ್ಪಡುತ್ತದೆ. ಆಡಂಬರದ ಪಯಣ, ವಿನ್ಯಾಸ ಹಾಗೂ ಹೆಚ್ಚಿನ ವೇಗದಲ್ಲಿ ದೀರ್ಘ ದೂರ ಪ್ರಯಾಣ ಮಾಡಲು ಸಹಕಾರಿಯಾಗಿರುವುದು ಇದರ ಪ್ರಮುಖ ವಿಶೇಷತೆಯಾಗಿದೆ.
ಬಿಎಂಡಬ್ಲ್ಯು 3 ಸಿರೀಸ್ ಜಿಟಿ...
ಏತನ್ಮಧ್ಯೆ ಲಗ್ಷುರಿ ಪಯಣವನ್ನು ಇಷ್ಟಪಡುವ ದೇಶದ ಗ್ರಾಹಕರಿಗಾಗಿ ಬಿಎಂಡಬ್ಲ್ಯು 3 ಸಿರೀಸ್ ಜಿಟಿ ಕಾರನ್ನು ವರ್ಷಾಂತ್ಯದಲ್ಲಿ ಅಥವಾ 2014 ದೆಹಲಿ ಆಟೋ ಎಕ್ಸೋ ವಾಹನ ಪ್ರದರ್ಶನದ ಅಸುಪಾಸಿನಲ್ಲಿ ಲಾಂಚ್ ಮಾಡುವ ಇರದೆಯನ್ನು ಬಿಎಂಡಬ್ಲ್ಯು ಹೊಂದಿದೆ.
ನಿಮ್ಮ ಮಾಹಿತಿಗಾಗಿ ಭಾರತದಲ್ಲಿ ಈಗಾಗಲೇ ಬಿಎಂಡಬ್ಲ್ಯು 5 ಸಿರೀಸ್ ಜಿಟಿ ಕಾರು ಮಾರಾಟದಲ್ಲಿದೆ. ಆದರೆ ಈಗ ಆಗಮನವಾಗಲಿರುವ ಕಾರು ಆಕಾರದಲ್ಲಿ ಚಿಕ್ಕದಾಗಿರಲಿದ್ದು, ಒಂದೆಡೆ ಎಸ್‌ಯುವಿ ಕಾರಿನಲ್ಲಿರುವಷ್ಟು ಸ್ಥಳಾವಕಾಶವನ್ನು ಹೊಂದಿದ್ದರೆ ಇನ್ನೊಂದೆಡೆ ಸೆಡಾನ್ ಕಾರಿನ ಅನುಭವ ನೀಡಲಿದೆ. ಕಡಿಮೆ ದರದಲ್ಲೂ ಆಗಮನವಾಗಲಿರುವುದರಿಂದ ಭಾರತೀಯ ಗ್ರಾಹಕರಿಗೆ ಇದು ಹೆಚ್ಚು ಸೂಕ್ತವೆನಿಸಲಿದೆ.

ನೂತನ ಬಿಎಂಡಬ್ಲ್ಯು 3 ಸಿರೀಸ್ ಜಿಟಿ, 3 ಸಿರೀಸ್ ಸೆಡಾನ್ ಹಾಗೂ 5 ಸಿರೀಸ್ ಜಿಟಿ ಕಾರಿನ ನಡುವೆ ಗುರುತಿಸಿಕೊಳ್ಳಲಿದೆ. ಇದು ಖಂಡಿತವಾಗಿಯೂ ಭಾರತೀಯ ಗ್ರಾಹಕರನ್ನು ಆಕರ್ಷಿಸುವ ನಂಬಿಕೆಯನ್ನು ಬಿಎಂಡಬ್ಲ್ಯು ಹೊಂದಿದೆ.

ಹಾಗಿದ್ದರೂ ದರದ ಬಗ್ಗೆ ಯಾವುದೇ ನಿಖರ ಮಾಹಿತಿಗಳು ಬಂದಿಲ್ಲ. ಸ್ಥಳೀಯವಾಗಿ ಉತ್ಪಾದನೆಯಾದರೆ ದರದಲ್ಲಿ ಭಾರಿ ಇಳಿಕೆ ಕಂಡುಬರಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಜಾಗತಿಕವಾಗಿ ಬಿಎಂಡಬ್ಲ್ಯು 3 ಸಿರೀಸ್ ಐದು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಿರುತ್ತದೆ. ಆದರೆ ಭಾರತಕ್ಕೆ ಡೀಸೆಲ್ ಎಂಜಿನ್ ಮಾತ್ರ ಪರಿಚಯವಾಗುವ ಸಾಧ್ಯತೆಯಿದೆ. ಇದು 4 ಸಿಲಿಂಡರ್ ಟರ್ಬೊ 2 ಲೀಟರ್ (184 ಅಶ್ವಶಕ್ತಿ, 380 ಎನ್‌ಎಂ ಟಾರ್ಕ್) ಮತ್ತು ಸಿಕ್ಸ್ ಸಿಲಿಂಡರ್ 3 ಲೀಟರ್ (254 ಅಶ್ವಶಕ್ತಿ, 560 ಎನ್‌ಎಂ ಟಾರ್ಕ್) ಡೀಸೆಲ್ ಎಂಜಿನ್ ಹೊಂದಿರುವ ಸಾಧ್ಯತೆಗಳಿವೆ. ಹಾಗೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಿಂದ ನಿಯಂತ್ರಿಸಲ್ಪಡಲಿದೆ.

ಸೆಡಾನ್ ಕಾರುಗಳಿಗೆ ಹೋಲಿಸಿದರೆ ಬಿಎಂಡಬ್ಲ್ಯು 3 ಸಿರೀಸ್ ಜಿಟಿ, ಹೆಚ್ಚು ಎತ್ತರ ಹಾಗೂ ಅಗಲವನ್ನು ಹೊಂದಿರಲಿದೆ. ಇದರಲ್ಲಿ 200 ಎಂಎಂ ಉದ್ದ, 50 ಎಂಎಂ ಎತ್ತರ ಮತ್ತು 17 ಎಂಎಂ ಅಗಲದ ಆಯಾಮ ಇರಲಿದೆ. ಹಾಗೆಯೇ 110 ಎಂಎಂ ವೀಲ್ ಬೇಸ್ ಹೊಂದಿರಲಿದೆ. ಅಂದರೆ ಬಿಎಂಡಬ್ಲ್ಯು ಎಕ್ಸ್ ಕಾಂಪಾಕ್ಟ್ ಎಸ್‌ಯುವಿ ಕಾರಿಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಬಿಎಂಡಬ್ಲ್ಯು 3 ಸಿರೀಸ್ ಜಿಟಿ ಹೊಂದಿರಲಿದೆ.

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ಸ್ಕೋಡಾ ರಾಪಿಡ್ ಸ್ಪೇಸ್‌ಬೇಕ್ ಕಾರಿನಲ್ಲಿರುವಂತಹ ಬೂಟ್ ವಿನ್ಯಾಸವನ್ನು ಬಿಎಂಡಬ್ಲ್ಯು 3 ಸಿರೀಸ್ ಜಿಟಿ ಹೊಂದಿರಲಿದೆ. ಇಲ್ಲಿ ಹಿಂಭಾಗದ ಡೋರ್, ವಿಂಡ್ ಶೀಲ್ಡ್ ಭಾಗವಾಗಿರಲಿದೆ. ಆದರೆ ಇದು ಸ್ವಯಂಚಾಲಿತವಾಗಿ ನಿಯಂತ್ರಿಸಬಹುದಾದ ತಂತ್ರಜ್ಞಾನವನ್ನು ಹೊಂದಿದೆ.

ಒಟ್ಟಿನಲ್ಲಿ ಇತರ ಸೆಡಾನ್ ಕಾರುಗಳಿಗೆ ಹೋಲಿಸಿದರೆ ನೇರ ಹಾಗೂ ದಿಟ್ಟವಾದ ವಿನ್ಯಾಸವನ್ನು ಹೊಂದಿರುವ ಬಿಎಂಡಬ್ಲ್ಯು 3 ಸಿರೀಸ್ ಜಿಟಿ, ನಿರ್ವಹಣೆಯಲ್ಲಿ ಸೆಡಾನ್ ಕಾರುಗಳನ್ನು ಮೀರಿಸಲಿದೆ.

ಹಾಗಿದ್ದರೂ ಕಾರಿನ ಒಳಮೈಯಲ್ಲಿ ಲಭ್ಯವಾಗಲಿರುವ ವೈಶಿಷ್ಟ್ಯಗಳು 3 ಸಿರೀಸ್ ಸೆಡಾನ್ ಕಾರಿಗೆ ಸಮಾನವಾಗಿರಲಿದೆ. ಆದರೆ ಹೆಚ್ಚಿನ ಲೆಗ್ ರೂಂ ಇರಲಿದೆ ಎಂಬುದರಲ್ಲಿ ಸಂಶಯವೇ ಬೇಡ.


Click it and Unblock the Notifications