ಭಾರತೀಯ ರಸ್ತೆಗಳ ರಾಜ ಅಂಬಿ ಯುಗಾಂತ್ಯ
ದಶಕಗಳಷ್ಟು ಕಾಲ 'ಭಾರತೀಯ ರಸ್ತೆಗಳ ರಾಜ' ಎಂಬ ಹೆಸರು ಗಳಿಸಿದ್ದ ಐಕಾನಿಕ್ ಅಂಬಾಸಿಡರ್ ಉತ್ಪಾದನೆಯನ್ನು ನಿಲುಗಡೆಗೊಳಿಸಲು ಹಿಂದೂಸ್ತಾನ್ ಮೋಟಾರ್ಸ್ ನಿರ್ಧರಿಸಿದೆ. ಇದರೊಂದಿಗೆ ದೇಶದ ಕ್ಲಾಸಿಕ್ ಕಾರಿನ ಯುಂಗಾತ್ಯವಾಗಿದೆ.
ಅಂಬಾಸಿಡರ್ ವಿಶ್ವದ ಅತ್ಯುತ್ತಮ ಟ್ಯಾಕ್ಸಿ
ದೇಶದೆಲ್ಲೆಡೆ 'ಅಂಬಿ' ಎಂಬ ಅಕ್ಕರೆಯ ಹೆಸರಿನಿಂದ ಜನಪ್ರಿಯವಾಗಿದ್ದ ಅಂಬಾಸಿಡರ್, ಒಂದು ಕಾಲದಲ್ಲಿ ರಾಜಕಾರಣಿಗಳಿಂದ ಹಿಡಿದು ತಾರ ಪ್ರಮುಖರ ನೆಚ್ಚಿನ ಕಾರೆನಿಸಿಕೊಂಡಿತ್ತು. ಆದರೆ ಬೇಡಿಕೆ ಕುಸಿತ ಹಾಗೂ ಸಾಲದ ಹಿನ್ನಲೆಯಲ್ಲಿ ವಿಶ್ವಪ್ರಸಿದ್ಧ ಅಂಬಾಸಿಡರ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಹಿಂದೂಸ್ತಾನ್ ಮೋಟಾರ್ಸ್ ನಿರ್ಧರಿಸಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಹಿಂದೂಸ್ತಾನ್ ಮೋಟಾರ್ಸ್, ಪಶ್ಚಿಮ ಬಂಗಾಳದಲ್ಲಿರುವ ಉತ್ತರ್‌ಪಾರಾದಲ್ಲಿರುವ ಘಟಕದಲ್ಲಿ ಅಂಬಾಸಿಡರ್ ಕಾರು ಉತ್ಪಾದನೆಯನ್ನು ನಿಲುಗಡೆಗೊಳಿಸಲಾಗಿದೆ ಎಂದಿದೆ.

ಈ ಸಂಬಂಧ ಮುಂಬೈ ಶೇರು ಮಂಡಳಿಗೆ ಪತ್ರ ಬರೆದಿರುವ ಸಂಸ್ಥೆಯು, ಅತ್ಯಂತ ಕಡಿಮೆ ಉತ್ಪಾದಕತೆ, ಬೆಳೆಯುತ್ತಿರುವ ಅಶಿಸ್ತು, ಮೂಲ ನಿಧಿಯ ಕೊರತೆ, ಬೇಡಿಕೆ ಕುಸಿತ ಇವೆಲ್ಲದರಿಂದಾಗಿ ಉತ್ಪಾದನೆ ಸ್ಥಗಿತಗೊಳಿಸಲಾಗುತ್ತಿದೆ ಎಂದಿದೆ.

ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮಾದರಿಯನ್ನು ಹೋಲುವ ಅಂಬಾಸಿಡರ್ 1958ರ ಇಸವಿಯಿಂದಲೇ ದೇಶದಲ್ಲಿ ಮಾರಾಟದಲ್ಲಿದೆ. ಅಲ್ಲದೆ ಕಳೆದ ಹಲವಾರು ವರ್ಷಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಕಾರೆಂದು ಗುರುತಿಸಿಕೊಂಡಿತ್ತು.

ಸೇನಾ ಮುಖ್ಯಸ್ಥರು, ಪ್ರಧಾನಿ, ಪೊಲೀಸ್ ಇಲಾಖೆ, ರಾಜಕಾರಣಿ, ತಾರೆಯರು ಹಾಗೂ ಹಿರಿಯ ಸರಕಾರಿ ಅಧಿಕಾರಿಗಳ ನೆಚ್ಚಿನ ಕಾರೆನಿಸಿಕೊಂಡಿದ್ದ ಅಂಬಾಸಿಡರ್, ಮಾರಾಟಕ್ಕೆ ಮಾರುತಿ 800 ಪ್ರವೇಶದ ಬಳಿಕ ನಿಧಾನವಾಗಿ ಅವನತಿಯತ್ತ ಮುಖ ಮಾಡಿತ್ತು.

ಇಂದಿಗೂ ದೇಶದ ಅತ್ಯಂತ ಸುರಕ್ಷಿತ ಕಾರೆಂಬ ಪಟ್ಟ ಉಳಿಸಿಕೊಂಡಿರುವ ಅಂಬಾಸಿಡರ್ ಕಾರನ್ನು 2003ನೇ ಇಸವಿಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು ಮೊರೆ ಹೋಗಿರುವುದು ದೊಡ್ಡ ಹೊಡೆತ ನೀಡುವಲ್ಲಿ ಕಾರಣವಾಗಿತ್ತು.

ಬಾಗಿದ ವಿನ್ಯಾಸ ಪಡೆದುಕೊಂಡಿರುವ ಮೂಲ ವಿನ್ಯಾಸದಲ್ಲಿ ಕಳೆದ 60 ಹೆಚ್ಚಿನ ಬದಲಾವಣೆ ಕಂಡುಬರದಿರುವುದು ಮಗದೊಂದು ಪ್ರಮುಖ ಅಂಶವಾಗಿದೆ. ಅಂಬಾಸಿಡರ್ ಇಂದಿಗೂ ಟ್ಯಾಕ್ಸಿ ಚಾಲಕರು ಹಾಗೂ ಕೆಲವು ಹಿರಿಯ ರಾಜಕಾರಣಿಗಳ ಪಾಲಿಗೆ ನೆಚ್ಚಿನ ಕಾರೆನಿಸಿಕೊಂಡಿದೆ.

1980ರ ದಶಕದಲ್ಲಿ 24,000 ಯುನಿಟ್‌ಗಳ ಮಾರಾಟವನ್ನು ಹೊಂದಿದ್ದ ಅಂಬಾಸಿಡರ್ 2000ನೇ ಇಸವಿಯ ವೇಳೆಗೆ 6,000 ಯುನಿಟ್‌ಗಳಿಗೆ ಇಳಿಕೆ ಕಂಡಿತ್ತು.

ಈ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿರುವ ದೇಶದ ಪ್ರಖ್ಯಾತ ವಾಹನ ವಿನ್ಯಾಸಗಾರ ಹಾಗೂ ಡಿಸಿ ಡಿಸೈನ್ ಮಾಲಿಕರಾಗಿರುವ ದಿಲೀಪ್ ಚಾಬ್ರಿಯಾ, ಕಳೆದ 60 ವರ್ಷಗಳಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದೆ ದೇಶದ ರಸ್ತೆಯನ್ನು ಆಳಿಯಿರುವ ಅಂಬಾಸಿಡರ್, ಭಾರತದ ರೋಲ್ಸ್ ರಾಯ್ಸ್ ಕಾರಾಗಿದೆ ಎಂದು ಶ್ಲಾಘಿಸಿದ್ದಾರೆ.


Click it and Unblock the Notifications








