ಟೊಯೊಟಾ ಇನ್ನೋವಾ ಸ್ಥಾನಪಲ್ಲಟಕ್ಕೆ ಹೋಂಡಾ ಹೊಂಚು?
ಕಳೆದ ಕೆಲವು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಗಟ್ಟಿಮಾಡಿರುವ ಟೊಯೊಟಾ ಇನ್ನೋವಾ ನೆಚ್ಚಿನ ಕಾರನ್ನು ಸ್ಥಾನಪಲ್ಲಟ ಮಾಡಲು ಜಪಾನ್ ಮೂಲದವರೇ ಆದ ವಾಹನ ತಯಾರಕ ಸಂಸ್ಥೆಯೊಂದು ಹೊಂಚು ಹಾಕುತ್ತಿದೆ.
ಹೌದು, ಪ್ರಸ್ತುತ ಮುಟ್ಟಿದ್ದೆಲ್ಲ ಚಿನ್ನವೆಂಬಂತೆ ಭಾರತ ಮಾರುಕಟ್ಟೆಗೆ ಅಮೇಜ್ ಹಾಗೂ ಸಿಟಿ ರೂಪದಲ್ಲಿ ಎರಡು ಯಶಸ್ವಿ ಕಾರುಗಳನ್ನು ನೀಡಿರುವ ಹೋಂಡಾ ಸಂಸ್ಥೆಯು ಮಗದೊಂದು ಆಕರ್ಷಕ ಕಾರನ್ನು ದೇಶದಲ್ಲಿ ಲಾಂಚ್ ಮಾಡುವ ಇರಾದೆ ಹೊಂದಿದೆ. ಈ ಬಾರಿ ಕಾಂಪಾಕ್ಟ್ ಸೆಗ್ಮೆಂಟ್‌ಗಿಂತಲೂ ಒಂದು ಹೆಜ್ಜೆ ಮುಂದಿಡಲಿರುವ ಹೋಂಡಾ, ಮಲ್ಟಿ ಪರ್ಪಸ್ ವೆಹಿಕಲ್‌ವೊಂದನ್ನು ಲಾಂಚ್ ಮಾಡಲಿದೆ. ಇದು ಪ್ರಮುಖವಾಗಿಯೂ ಟೊಯೊಟಾದ ಅತ್ಯಂತ ಜನಪ್ರಿಯ ಇನ್ನೋವಾ ಕಾರಿಗೆ ಪ್ರತಿಸ್ಪರ್ಧೆ ಎನಿಸಲಿದೆ.

ಅಷ್ಟಕ್ಕೂ ಯುಟಿಲಿಟಿ ವಿಭಾಗದಲ್ಲಿ ಇನ್ನೋವಾ ಪಾರುಪತ್ಯವನ್ನು ಎದುರಿಸುವುದು ಅಷ್ಟು ಸುಲಭದ ವಿಷಯವಲ್ಲ. ಯಾಕೆಂದರೆ ಗುಣಮಟ್ಟದ ಉತ್ಪನ್ನ ಒದಗಿಸುವುದರಲ್ಲಿ ಇನ್ನೋವಾ ಯಶಸ್ವಿಯಾಗಿದೆ. ಅಷ್ಟೇ ಯಾಕೆ ದೇಶದ ರಾಜಕಾರಣಿಗಳಲ್ಲಿ ಇನ್ನೋವಾ ಫೇವರಿಟ್ ಎನಿಸಿಕೊಂಡಿದೆ.

2005ನೇ ಇಸವಿಯಲ್ಲಿ ಲಾಂಚ್ ಕಂಡಿದ್ದ ಇನ್ನೋವಾ, ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರಿತುಕೊಂಡಿತ್ತು. ಇನ್ನೊಂದೆಡೆ ಹೋಂಡಾ ರೀತಿಯಲ್ಲೇ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕೂಡಾ ಇನ್ನೋವಾ ಪ್ರತಿಸ್ಪರ್ಧಿಯೊಂದನ್ನು ಸಿದ್ಧಗೊಳಿಸುತ್ತಿದೆ.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಹೋಂಡಾ ಫ್ರೀಡ್ ಎಂಪಿವಿ ಭಾರತದತ್ತ ಮುಖ ಮಾಡಿದೆ. ಆದರೆ ನಿರೀಕ್ಷಿದಷ್ಟು ಬೇಗನೇ ಇದು ಮಾರುಕಟ್ಟೆ ತಲುಪುವ ಸಂಭವವಲ್ಲ. ಏಷಿಯಾ ಮಾರುಕಟ್ಟೆಯಲ್ಲಿ ಇನ್ನೋವಾ ಸವಾಲು ಎದುರಿಸಲಿರುವ ಹೋಂಡಾ, 2016ರ ಅಸುಪಾಸಿನಲ್ಲಿ ಹೊಸ ಎಂಪಿವಿ ಪರಿಚಯಿಸಲಿದೆ.

ಹಾಗಿದ್ದರೂ ಈ ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಆದರೂ ಭಾರತದಲ್ಲಿ ಮಲ್ಟಿ ಪರ್ಪಸ್ ವೆಹಿಕಲ್ ಲಾಂಚ್ ಮಾಡುವ ಇರಾದೆ ಹೊಂದಿರುವುದಾಗಿ ಹೋಂಡಾ ಪ್ರತಿನಿಧಿಗಳು ತಿಳಿಸಿದ್ದಾರೆ.

ನಿಮ್ಮ ಮಾಹಿತಿಗಾಗಿ, 2014 ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಆಟೋ ಎಕ್ಸ್‌ಪೋದಲ್ಲಿ ಬ್ರಿಯೊ ಫ್ಲ್ಯಾಟ್‌ಫಾರ್ಮ್‌ನಲ್ಲಿ ರೂಪುಗೊಂಡಿರುವ ಮೊಬಿಲಿಯೊ ಎಂಪಿವಿ ಕಾರನ್ನು ಹೋಂಡಾ ಲಾಂಚ್ ಮಾಡಲಿದೆ. ಪ್ರಸ್ತುತ ಎಂಪಿವಿ ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಪ್ರತಿಸ್ಫರ್ಧಿಯಾಗಿರಲಿದೆ. ಹಾಗಿದ್ದರಿಂದ ಟೊಯೊಟಾ ಇನ್ನೋವಾಗೆ ಮಾರಾಟಕ್ಕೆ ಯಾವುದೇ ಧಕ್ಕೆಯುಂಟಾಗುವುದಿಲ್ಲ.

ಒಟ್ಟಿನಲ್ಲಿ ಮುಂದಿನ ತಲೆಮಾರಿನ ಫ್ರೀಡ್ ಮತ್ತು ಇನ್ನೋವಾ ಅಭಿವೃದ್ಧಿಯಲ್ಲಿರುವ ತೊಡಗಿರುವ ಹೋಂಡಾ ಮತ್ತು ಟೊಯೊಟಾ ಬಹುಶ: ಒಂದೇ ವೇಳೆಯಲ್ಲಿ ಹೊಸ ಎಂಪಿವಿ ಕಾರು ಲಾಂಚ್ ಮಾಡುವ ಸಾಧ್ಯತೆಯಿದೆ.


Click it and Unblock the Notifications








