ಹೋಂಡಾ ಮೊಬಿಲಿಯೊ ಎಂಪಿವಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಭಾರತೀಯ ಗ್ರಾಹಕರು ಅತೀವ ಕುತೂಹಲದಿಂದ ಎದುರು ನೋಡುತ್ತಿರುವ ಹೋಂಡಾ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.
ಭಾರತಕ್ಕೂ ಮುಂಚಿತವಾಗಿ ಇಂಡೋನೇಷ್ಯಾದಲ್ಲಿ ಲಾಂಚ್ ಆಗಲಿರುವ ಮೊಬಿಲಿಯೊ ಬಿಡುಗಡೆ ಮುನ್ನವೇ 4,500ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಅಚ್ಚರಿ ಸೃಷ್ಟಿಸಿದೆ.
ಇದು ಭಾರತೀಯ ಗ್ರಾಹಕರಲ್ಲೂ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ. ಯಾಕೆಂದರೆ ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿಯ ಎರ್ಟಿಗಾಗೆ ಹೋಂಡಾದ ನೂತನ ಗಾಡಿ ನೇರ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.

2013 ಸೆಪ್ಟೆಂಬರ್ 19ರಂದು ನಡೆದ ಇಂಡೋನೇಷ್ಯಾ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಹೋಂಡಾ ಮೊಬಿಲಿಯೊ ಎಂಪಿವಿ ಅನಾವರಣಗೊಂಡಿತ್ತು.

ಅಂತೆಯೇ ಹೋಂಡಾ ಅಂಗಸಂಸ್ಥೆಯಾದ ಪಿಟಿ ಹೋಂಡಾ ಪ್ರೊಸ್ಪೆಕ್ಟ್ ಮೋಟಾರ್ ಮುಂಗಡ ಬುಕ್ಕಿಂಗ್‌ಗಳನ್ನು ಕಾಯ್ದಿದಿರಿಸಿಕೊಳ್ಳುತ್ತಿದ್ದು ಈಗಾಗಲೇ 4,500ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದೆ ಎಂದು ವಿವರಣೆ ನೀಡಿದೆ.

ಅಂದ ಹಾಗೆ ಹೋಂಡಾ ಮೊಬಿಲಿಯೊ ಎಂಪಿವಿ ಕಾರಿನ ವಿತರಣೆ ಕಾರ್ಯ 2014 ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿದೆ. ಹಾಗೆಯೇ ಮುಂದಿನ ವರ್ಷಾರಂಭದಲ್ಲಿ ಉತ್ಪಾದನೆ ಕಾರ್ಯ ನಡೆಯಲಿದೆ. ಇದು ಪಶ್ಚಿಮ ಜಾವಾದಲ್ಲಿರುವ ಹೋಂಡಾ ಪ್ರೊಸ್ಪೆಕ್ಟ್ ಮೋಟಾರ್ ಕರವಂಗ್ ಘಟಕದಲ್ಲಿ ಉತ್ಪಾದನೆಗೊಳ್ಳಲಿದೆ.

ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಸಿಂಗಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಇದು 1.5 ಲೀಟರ್ ಐ-ವಿಟೆಕ್ ಮೋಟಾರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 118 ಅಶ್ವಶಕ್ತಿ (144 ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೋಂಡಾ ಸಿಟಿ ಆವೃತ್ತಿಯಲ್ಲಿ ಕಂಡುಬಂದಿರುವುದಕ್ಕೆ ಸಮಾನವಾದ ಎಂಜಿನ್ ಇದರಲ್ಲೂ ಆಳವಡಿಸಲಾಗಿದೆ.

ಹಾಗೆಯೇ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ಇನ್ನು ವೆರಿಯಂಟ್ ಬಗ್ಗೆ ಮಾತನಾಡುವುದಾದ್ದಲ್ಲಿ ಒಟ್ಟು ಮೂರು ಮಾದರಿಗಳಲ್ಲಿ ಲಭ್ಯ. ಅವುಗಳೆಂದರೆ ಎಸ್, ಇ ಮತ್ತು ಇ ಸಿವಿಟಿ.

ದರ ಮಾಹಿತಿ
ಭಾರತೀಯ ರುಪಾಯಿಗೆ ಪರಿವರ್ತಿಸಿದರೆ ಇಂಡೋನೇಷ್ಯಾದಲ್ಲಿ ಹೋಂಡಾ ಮೊಬಲಿಯೊ ದರ 8.41 ಲಕ್ಷ ರು.ಗಳಿಂದ 10.09 ಲಕ್ಷ ರು.ಗಳ ವರೆಗಿದೆ. ಭಾರತದಲ್ಲಿರುವಂತೆಯೇ ಇಂಡೋನೇಷ್ಯಾದಲ್ಲಿ ಹೋಂಡಾ ಮೊಬಿಲಿಯೊ ಪ್ರಮುಖ ಪ್ರತಿಸ್ಪರ್ಧಿ ಸುಜುಕಿಯ ಎರ್ಟಿಗಾ ಆಗಿದೆ.

ಇನ್ನು ಭಾರತ ಮಾರುಕಟ್ಟೆಯನ್ನು ಪರಿಗಣಿಸಿದರೆ ಎರ್ಟಿಗಾ ಡೀಸೆಲ್ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿರುವ ಮೊಬಿಲಿಯೊಗೆ 1.5 ಲೀಟರ್ ಅರ್ಥ್ ಡ್ರೀಮ್ಸ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಇದು ಅಮೇಜ್ ಎಂಜಿನ್ ಮಾನದಂಡಕ್ಕೆ ಸಮಾನವಾಗಿದೆ. ಹಾಗೆಯೇ 2014 ಇಂಡಿಯನ್ ಆಟೋ ಎಕ್ಸ್‌ಪೋದಲ್ಲೂ ಪ್ರದರ್ಶನ ಕಾಣುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.


Click it and Unblock the Notifications








