ಹ್ಯುಂಡೈ ಮೈಲುಗಲ್ಲು; 50 ಲಕ್ಷ ಕಾರುಗಳ ಮಾರಾಟ
ದೇಶದ ಎರಡನೇ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿರುವ ಹ್ಯುಂಡೈ, ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದು 50 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಸಾಧನೆ ಮಾಡಿದೆ.
ಚೆನ್ನೈನ ಘಟಕದಲ್ಲಿ ಬಾಲಿವುಡ್ ಸ್ಟಾರ್ ಶಾರೂಕ್ ಖಾನ್ ಈ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು. ಈ ಮೂಲಕ ಹ್ಯುಂಡೈ ದೇಶದಲ್ಲಿ ತನ್ನ 15 ವಸಂತಗಳನ್ನು ಪೂರ್ಣಗೊಳಿಸಿದೆ.
1998ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಹ್ಯುಂಡೈ ಭಾರತದಲ್ಲಿ 16,568.55 ಕೋಟಿ ರು.ಗಳ ಬೃಹತ್ ಹೂಡಿಕೆ ಹೊಂದಿದ್ದು, ವರ್ಷಂಪ್ರತಿ 6.8 ಲಕ್ಷ ಕಾರುಗಳನ್ನು ಉತ್ಪಾದಿಸುತ್ತಿದೆ.

ಹ್ಯುಂಡೈ ಭಾರತಕ್ಕೆ ಲಗ್ಗೆಯಿಟ್ಟಿದ್ದ ಸಂದರ್ಭದಲ್ಲಿ ಐದು ಕಾರು ತಯಾರಕ ಸಂಸ್ಥೆಗಳು ಹೆಚ್ಚಿನ ಪ್ರಾಬಲ್ಯ ಮೆರೆದಿದ್ದವು. ಅವುಗಳೆಂದರೆ ಮಾರುತಿ, ಹಿಂದೂಸ್ತಾನ್, ಪ್ರೀಮಿಯರ್, ಟಾಟಾ ಹಾಗೂ ಮಹೀಂದ್ರ.

ಹ್ಯುಂಡೈ ಎಂಟ್ರಿ ಆಗುವ ವರೆಗೆ ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಮಾರುತಿ ಪ್ರಾಬಲ್ಯ ಮುಂದುವರಿದಿತ್ತು.

1998ರಲ್ಲಿ ಬಿಡುಗಡೆಗೊಂಡ ಸ್ಯಾಂಟ್ರೊ ಹ್ಯುಂಡೈನಿಂದ ದೇಶದಲ್ಲಿ ಬಿಡುಗಡೆಗೊಂಡು ಮೊದಲ ಕಾರಾಗಿದೆ. ಇದು ಭಾರಿ ಯಶ ಸಾಧಿಸಲುವಲ್ಲಿ ಯಶಸ್ವಿಯಾಗಿತ್ತು.

ಬರ ಬರುತ್ತಾ ಕೆಲವೇ ವರ್ಷಗಳ ಅಂತರದಲ್ಲಿ ದೇಶದ ಎರಡನೇ ಅತಿದೊಡ್ಡ ಕಾರು ತಯಾರಕವೆಂಬ ಪಟ್ಟವನ್ನು ಹ್ಯುಂಡೈ ಆಲಂಕರಿಸಿತ್ತು. ಅಲ್ಲದೆ ದೇಶದ ನಂ.1 ಕಾರು ರಫ್ತುದಾರವೆಂಬ ಹೆಮ್ಮೆಗೆ ಪಾತ್ರವಾಗಿದೆ.

ಪ್ರಸ್ತುತ ಭಾರತದಲ್ಲಿ ಹಲವು ಹ್ಯುಂಡೈ ಮಾದರಿಗಳು ಲಭ್ಯವಿದೆ. ಈ ಪೈಕಿ ಎ2 ವಿಭಾಗದಲ್ಲಿ ಸ್ಯಾಂಟ್ರೊ, ಐ10, ಇಯಾನ್ ಮತ್ತು ಐ20, ಎ3 ಸೆಗ್ಮೆಂಟ್‌ನಲ್ಲಿ ಆಸೆಂಟ್, ಫ್ಯೂಯಿಡಿಕ್ ವರ್ನಾ ಹಾಗೂ ಫ್ಯೂಯಿಡಿಕ್ ಎಲಂಟ್ರಾ, ಎ5 ಸೆಗ್ಮೆಂಟ್‌ನಲ್ಲಿ ಸೊನಟಾ ಟ್ರಾನ್ಸ್‌ಫಾರ್ಮ್ ಮತ್ತು ಎಸ್‌ಯುವಿ ವಿಭಾಗದಲ್ಲಿ ಸಾಂಟಾ ಫೆ ಕಾರುಗಳಿವೆ.

ಹ್ಯುಂಡೈನ ಅತಿದೊಡ್ಡ ಕಾರು ಘಟಕ ಚೆನ್ನೈನಲ್ಲಿ ಸ್ಥಿತಗೊಂಡಿದ್ದು, ವಾರ್ಷಿಕವಾಗಿ 3,00,000 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ದೇಶದಲ್ಲಿ 307 ವಿತರಕ ಜಾಲವನ್ನು ಹೊಂದಿರುವ ಹ್ಯುಂಡೈ 627 ಸರ್ವೀಸ್ ಪಾಯಿಂಟ್‌ಗಳನ್ನು ಹೊಂದಿದೆ. ಅಲ್ಲದೆ 120 ರಾಷ್ಟ್ರಗಳಿಗೆ ಕಾರು ರಫ್ತು ಮಾಡುತ್ತಿದೆ.

ಒಟ್ಟಾರೆಯಾಗಿ ದೇಶದಲ್ಲಿ ಮಾರುತಿಗೆ ಸೆಡ್ಡು ನಿಂತಿದ್ದ ಹ್ಯುಂಡೈ ಗುಣಮಟ್ಟದ ಕಾರುಗಳನ್ನು ಗ್ರಾಹಕರಿಗೆ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿರುವುದಂತೂ ಅಷ್ಟೇ ಸತ್ಯ.


Click it and Unblock the Notifications








