ಮೋದಿ ತವರೂರಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು
ಭವಿಷ್ಯದ ಸಂಚಾರ ವಾಹಕ ಎಂದೇ ಕರೆಯಲ್ಪಡುವ ವಿದ್ಯುತ್ ಚಾಲಿತ ವಾಹನಗಳು ವಿಶ್ವದ್ಯಾಂತ ಹೆಚ್ಚಿನ ಜನಪ್ರಿಯತೆ ಗಿಟ್ಟಿಸತೊಡಗಿದೆ. ಇದರಿಂದಾಗಿ ಮುಂಚೂಣಿಯ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಾಣ ಮಾಡುವುದರಲ್ಲಿ ತಲ್ಲೀನವಾಗಿದೆ.
ಇವನ್ನೂ ಓದಿ: ಟಾಪ್ 10 ಸೂಪರ್ ಫಾಸ್ಟ್ ಎಲೆಕ್ಟ್ರಿಕ್ ಕಾರುಗಳು
ಅಷ್ಟಕ್ಕೂ ಭಾರತದಲ್ಲೂ ಚೊಚ್ಚಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ನಿರ್ಮಾಣವಾಗುತ್ತಿದೆ ಅಂದರೆ ನಂಬಲು ಸಾಧ್ಯವೇ? ಹೌದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ತವರೂರಾದ ಗುಜರಾತ್‌ನಲ್ಲಿ ನೀಲಿ ನಕ್ಷೆ ಸಿದ್ಧಗೊಳ್ಳುತ್ತಿದೆ. ಗೋಲ್ಡನ್ ಏರೋ ವೈರ್‌ಲೆಸ್ ಸಂಸ್ಥೆಯು ಶೂನ್ಯ ಹೊಗೆ ಹೊರಸೂಸುವ ಚೊಚ್ಚಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಇದಕ್ಕಾಗಿ ಗುಜರಾತ್‌ನಲ್ಲಿ 50 ಎಕ್ರೆ ಸ್ಥಳ ವಶಪಡಿಸಿಕೊಳ್ಳಲಿದೆ.

ಹೆಸರೇನು?
ದೇಶದ ಚೊಚ್ಚಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು 'ಸೂಪರ್ ನೋವಾ ಎಲೆಕ್ಟ್ರಿಕ್ ವೆಹಿಕಲ್' (ಎಸ್‌ಎನ್‌ಇವಿ) ಎಂದು ಹೆಸರಿಸಿಕೊಳ್ಳಲಿದೆ. 2014 ನವೆಂಬರ್ ತಿಂಗಳಾಂತ್ಯದಲ್ಲಿ ಸಾಗಿದ ಗುಜರಾತ್ ಆಟೋ ಶೋದಲ್ಲಿ ಈಗಾಗಲೇ ಮೊದಲ ಮಾದರಿ ಪ್ರದರ್ಶನ ಕಂಡಿರುವ ಎಲೆಕ್ಟ್ರಿಕ್ ಕ್ರೀಡಾ ಕಾರು ನಿಕಟ ಭವಿಷ್ಯದಲ್ಲೇ ನಿರ್ಮಾಣ ಹಂತವನ್ನು ತಲುಪುವ ತವಕದಲ್ಲಿದೆ.

ಮೂರು ಬ್ಯಾಟರಿಗಳು
ಭಾರತದಲ್ಲೇ ನಿರ್ಮಾಣಗೊಳ್ಳಲಿರುವ ಮೊದಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಮೂರು ಬ್ಯಾಟರಿ ಆಯ್ಕೆಗಳನ್ನು ಪಡೆಯಲಿದೆ. ಇದು ಲೀಡ್ ಆಸಿಡ್, ಲಿಥಿಯಂ ಇಯಾನ್ ಹಾಗೂ ಸೂಪರ್‌ಕ್ಯಾಪಿಸಿಟರ್ ಎಂದೆನಿಸಿಕೊಳ್ಳಲಿದೆ.

ವ್ಯಾಪ್ತಿ
ಅಷ್ಟೇ ಅಲ್ಲದೆ ಕೇವಲ ಒಂದೇ ಚಾರ್ಜ್‌ನಲ್ಲಿ 1000 ಕೀ.ಮೀ. ದೂರದ ವರೆಗೆ ಸಾಗುವ ಸಾಮರ್ಥ್ಯವನ್ನು ಈ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಹೊಂದಿರಲಿದೆ ಎಂದು ಗೋಲ್ಡನ್ ಏರ್ ವೈರ್ ಲೆಸ್ ಸಂಸ್ಥೆಯ ಸ್ಥಾಪಕರಾಗಿರುವ ಶಶಿ ವೈಸ್ ತಿಳಿಸಿದ್ದಾರೆ.

ಐದು ನಿಮಿಷದಲ್ಲೇ ಚಾರ್ಜಿಂಗ್
ಅದೇ ರೀತಿ ಇದರ ಲೀಡ್ ಆಸಿಡ್ ಬ್ಯಾಟರಿ ಜಾರ್ಜ್ ಮಾಡಿಸಲು ಎಂಟು ತಾಸು, ಅಂತೆಯೇ ಲಿಥಿಯಂ ಇಯಾನ್ ಬ್ಯಾಟರಿ ಮಾಡಿಸಲು ಎರಡು ತಾಸು ಹಾಗೂ ಸೂಪರ್ ಕ್ಯಾಪಿಸಿಟರ್ ಚಾರ್ಜ್ ಮಾಡಿಸಲು ಕೇವಲ ಐದು ನಿಮಿಷಗಳೇ ಸಾಕಾಗುವುದು. ಇನ್ನು ಈ ಎಲೆಕ್ಟ್ರಿಕ್ ಸೂಪರ್ ಕಾರು ಪ್ರತಿ ಗಂಟೆಗೆ ಗರಿಷ್ಠ 150 ಕೀ.ಮೀ. ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ.

500 ಕೋಟಿ ರು. ಹೂಡಿಕೆ
ಸದ್ಯ ಹೂಡಿಕೆದಾರರಲ್ಲಿ 500 ಕೋಟಿ ರು. ಬೃಹತ್ ಹೂಡಿಕೆಗೆ ವಿನಂತಿಸಿಕೊಂಡಿರುವ ಸಂಸ್ಥೆಯು ಸದ್ಯದಲ್ಲೇ ನಿರ್ಮಾಣ ಪ್ರಕ್ರಿಯೆ ಆರಂಭಿಸುವ ಯೋಜನೆ ಹೊಂದಿದೆ. ಗುಜರಾತ್ ಮಾತ್ರವಲ್ಲದೆ, ದೆಹಲಿ, ಮುಂಬೈ, ಬೆಂಗಳೂರು ಹಾಗೂ ರಾಯ್‌ಪುರದಲ್ಲೂ ನಿರ್ಮಾಣ ಘಟಕ ತೆರೆಯುವ ಯೋಜನೆ ಹೊಂದಿದೆ.

ಇನ್ನು ವಿಶೇಷವಾದ ಸಂಗತಿಯೆಂದರೆ ಸಂಸ್ಥೆಯು ಈಗಾಗಲೇ 250ರಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ. ಆದರೆ ಭಾರತ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ದೇಶದಲ್ಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರುಗಳಿಗೆ ಅನುಮೋದನೆ ನೀಡಲು ಯಾವುದೇ ಮಾರ್ಗಸೂಚಿಗಳಿಲ್ಲ. ಈ ಬಗ್ಗೆ ಸರಕಾರವು ಇನ್ನಷ್ಟೇ ರೂಪುರೇಷೆ ಮಾಡಬೇಕಾಗಿದೆ.


Click it and Unblock the Notifications








