ಅಬ್ಬಬ್ಬಾ, ಮಹೀಂದ್ರದಿಂದ ಚಾಲಕರಹಿತ ಕಾರು ಅಭಿವೃದ್ಧಿ!
ಭಾರಿ ಕುತೂಹಲದಾಯಕ ಅದೇ ಹೊತ್ತಿಗೆ ಅಷ್ಟೇ ಹೆಮ್ಮೆಪಡುವ ಸುದ್ದಿಯೊಂದರಲ್ಲಿ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಚಾಲಕರಹಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿದೆ.
ಭಾರತೀಯರಾದ ನಮಗೆಲ್ಲ ಇದು ಹೆಮ್ಮೆಯ ಸಂಗತಿಯಾಗಿದೆ. ಏಕೆಂದರೆ ವಿದೇಶದಲ್ಲಿ ಹಲವು ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಗಳು ಕಳೆದ ಹಲವಾರು ವರ್ಷಗಳಿಂದ ಡ್ರೈವರ್ ಲೆಸ್ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿದೆ. ಹಾಗಿರುವಾಗ ಭಾರತೀಯ ಮೂಲದ ಸಂಸ್ಥೆಯೊಂದು ದೇಶದಲ್ಲೇ ಇಂತಹದೊಂದು ನಾವೀನ್ಯತೆಯ ತಂತ್ರಗಾರಿಕೆಯ ಅಭಿವೃದ್ಧಿಯಲ್ಲಿ ತೊಡಗಿರುವುದು ನಿಜಕ್ಕೂ ನಮ್ಮ ವಾಹನೋದ್ಯಮಕ್ಕೆ ಅತ್ಯಂತ ಖುಷಿ ತರುವ ವಿಷಯವಾಗಿದೆ.

ಈ ಮೂಲಕ ಗೂಗಲ್, ಟೆಸ್ಲಾ, ಬಿಎಂಡಬ್ಲ್ಯು ಹಾಗೂ ಆಡಿ ಸಂಸ್ಥೆಗಳ ಸಾಲಿಗೆ ಮಹೀಂದ್ರ ಸಂಸ್ಥೆ ಕೂಡಾ ಸೇರ್ಪಡೆಯಾಗಲಿದೆ. ಮಹೀಂದ್ರ ಸಂಸ್ಥೆಯ ರೇವಾ ಎಲೆಕ್ಟ್ರಿಕ್ ಕಾರು ವಿಭಾಗವನ್ನು ಈ ಮಹತ್ತರ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮಹೀಂದ್ರ ಸಂಸ್ಥೆಯು ಡ್ರೈವರ್‌ಲೆಸ್ ಕಾರಿನ ಸಾಫ್ಟ್‌ವೇರ್ ಅಭಿವೃದ್ಧಿಯತ್ತ ಕಣ್ಣಾಯಿಸಿದ್ದು, ಈ ಸಂಬಂಧ ತನ್ನ ಕಾನ್ಸೆಪ್ಟ್ ನಕ್ಷೆಯನ್ನು ಬ್ರಿಟನ್ ಹಾಗೂ ಸಿಂಗಾಪುರದಲ್ಲಿ ಸಲ್ಲಿಸಿದೆ.

ಸಂಸ್ಥೆಯೇ ಹೇಳುವ ಪ್ರಕಾರ ಮಹೀಂದ್ರ ರೇವಾ ಈಗಾಗಲೇ ತನ್ನ ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ಅಧ್ಯಯನ ಹಾಗೂ ಅಭಿವೃದ್ಧಿ ಘಟಕದಲ್ಲಿ (ಆರ್ ಆಂಡ್ ಡಿ) ಚಾಲಕರಹಿತ ಸ್ವಯಂಚಾಲಿತ ಕಾರುಗಳ ಪ್ರಯೋಗವನ್ನು ಆರಂಭಿಸಿದೆ. ಅಲ್ಲದೆ ಒಮ್ಮೆ ಸರಕಾರದಿಂದ ಅನುಮತಿ ದೊರಕಿದ ಬಳಿಕ ನೈಜ ರಸ್ತೆ ಪರೀಕ್ಷೆಯನ್ನು ಆರಂಭಿಸಲಿದೆ.

ಈ ಎಲ್ಲ ಪ್ರಯೋಗಗಳು ಮುಗಿದ ಬಳಿಕ ನಿರ್ಮಾಣ ಮಾದರಿಯನ್ನು ತಯಾರಿಸಲು ಮಹೀಂದ್ರ ಸಂಸ್ಥೆಗೆ ಮೂರರಿಂದ ನಾಲ್ಕು ವರ್ಷಗಳು ಬೇಕಾಗುವುದು. ವರದಿಗಳ ಪ್ರಕಾರ ರಸ್ತೆ ಪರೀಕ್ಷೆಯು ಬ್ರಿಟನ್ ಹಾಗೂ ಸಿಂಗಾಪುರದಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಸಾಫ್ಟ್‌ವೇರ್ ಅಭಿವೃದ್ಧಿಯು ಭಾರತದಲ್ಲೇ ಪ್ರಗತಿಯಲ್ಲಿದೆ.

ಮಹೀಂದ್ರ ಡ್ರೈವರ್ ಲೆಸ್ ಕಾರಿನ ಸಾಫ್ಟ್‌ವೇರ್ ಅಭಿವೃದ್ಧಿಗೆ ಟೆಕ್ ಮಹೀಂದ್ರ ಕೂಡಾ ಸಾಥ್ ನೀಡಲಿದೆ. ಈ ಮೂಲಕ ಮಹೀಂದ್ರ ಸಂಸ್ಥೆಯು ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಡಲಿದ್ದು, ಸದಾ ನಾವೀನ್ಯತೆಯ ಸಂಸ್ಥೆ ಎಂದೆನಿಸಿಕೊಳ್ಳಲಿದೆ.

ಮಹೀಂದ್ರ ರೈಸ್ (ಏಳಿಗೆ) ಧ್ಯೇಯ ವಾಕ್ಯದೊಂದಿಗೆ ಮಹೀಂದ್ರ ಈ ಎಲ್ಲ ಕ್ರಾಂತಿಕಾರಿ ಬದಲಾವಣೆಗೆ ಚಾಲನೆ ನೀಡಿದೆ. ಆದರೆ ಪ್ರಾಯೋಗಿಕವಾಗಿಯೂ ಇದು ಎಷ್ಟರ ಮಟ್ಟಿಗೆ ಯಶ ಕಾಣಲಿದೆ? ಪ್ರಾರಂಭಿಕ ಹಂತದಲ್ಲೇ ಸಂಸ್ಥೆಗೆ ಎದುರಾಗುವ ತೊಡಕುಗಳೇನು? ಇದನ್ನೆಲ್ಲ ಸಂಸ್ಥೆ ಹೇಗೆ ನಿಭಾಯಿಸಲಿದೆ? ಇವೆಲ್ಲದಕ್ಕೂ ಮಿಗಿಲಾಗಿ ಗ್ರಾಹಕರ ಬೇಡಿಕೆಗಳನ್ನು ಹೇಗೆ ಪೂರೈಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ಪ್ರಸ್ತುತ ದೇಶದಲ್ಲಿ 2,000ದಷ್ಟು ಮಹೀಂದ್ರ ಎಲೆಕ್ಟ್ರಿಕ್ ಕಾರುಗಳು ಓಡಾಡುತ್ತಿದೆ. ಈ ಪೈಕಿ ನಮ್ಮ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯನ್ನು ಕಾಣಬಹುದಾಗಿದೆ. ಇವೆಲ್ಲದರಲ್ಲೂ ಸೆನ್ಸಾರ್ ಆಳವಡಿಸಲಾಗಿದ್ದು, ಇದರಿಂದ ಮಹೀಂದ್ರ ಮಾಹಿತಿ ಕಲೆ ಹಾಕುತ್ತಿದೆ. ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕವೆನಿಸಲಿದೆ.

ಈಗಿನ ಪರಿಸ್ಥಿತಿಯಲ್ಲಿ ಡ್ರೈವರ್ ಲೆಸ್ ಕಾರಿನ ಪ್ರಯೋಗ ಭಾರತದಲ್ಲಿ ನಡೆಸುವುದು ಕಷ್ಟಕರ. ಇದನ್ನು ಮಹೀಂದ್ರ ಕೂಡಾ ಒಪ್ಪಿಕೊಳ್ಳುತ್ತಿದೆ. ಹಾಗಾಗಿ ಸದ್ಯ ಅಮೆರಿಕ, ಯುರೋಪ್ ಹಾಗೂ ದಕ್ಷಿಣ ಪೂರ್ವ ಏಷ್ಯಾ ಮಾರುಕಟ್ಟೆಗಳನ್ನು ಗುರಿಯಾರಿಸಿಕೊಂಡಿದೆ. ಇವೆಲ್ಲವೂ ಯಶ ಕಂಡಲ್ಲಿ ಮುಂದೊಂದು ದಿನ ಭಾರತದಲ್ಲೂ ಪರೀಕ್ಷೆ ನಡೆಯಲಿದೆ.

ಇದಕ್ಕಾಗಿ ಮಹೀಂದ್ರವು ಉತ್ಸಾಹಿ ಎಂಜಿನಿಯರ್‌ಗಳಿಗೆ ಸವಾಲನ್ನು ನೀಡುತ್ತಿದ್ದು, ಡ್ರೈವರ್ ಲೆಸ್ ಕಾರು ಅಭಿವೃದ್ಧಿಪಡಿಸಿದರೆ ಏಳು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತ ನೀಡುವುದಾಗಿ ಘೋಷಿಸಿದೆ. ಈ ಬಗೆಗಿನ ನಿರಂತರ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ. ಈಗ ಡ್ರೈವರ್ ಲೆಸ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








