ಹೊಸ ವರ್ಷದಿ ಹರುಷವ ತಂದಿದೆ ಸುಜುಕಿ 'ಎಸ್ ಕ್ರಾಸ್'
ಜಗತ್ತಿನ ಮುಂಚೂಣಿಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ, ನೂತನ ಎಸ್-ಕ್ರಾಸ್ ಎಸ್‌ಯುವಿ ಕಾರನ್ನು ಹೊಸ ವರ್ಷದಲ್ಲಿ ಪರಿಚಯಿಸಲಿದೆ.
ಪ್ರಸ್ತುತ ಕಾರಿನ ದರ 13.2 ಲಕ್ಷ ರು.ಗಳಾಗಿರಲಿದೆ. ಆದರೆ ಭಾರತ ಮಾರುಕಟ್ಟೆಯನ್ನು ಈ ಐಷಾರಾಮಿ ಕಾರು ಯಾವಾಗ ತಲುಪಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 4. 3 ಮೀಟರ್ ಉದ್ದವಿರಲಿರುವ ನೂತನ ಎಸ್ ಕ್ರಾಸ್ ಸದ್ಯ ಇರುವ ಆವೃತ್ತಿಗಿಂತಲೂ ದೊಡ್ಡ ಸ್ವರೂಪವನ್ನು ಪಡೆದುಕೊಳ್ಳಲಿದೆ. ಹಾಗಿದ್ದರೂ ಕಾರಿನ ಭಾರ ಕಡಿಮೆಗೊಳಿಸುವಲ್ಲಿ ತಯಾರಕರು ಯಶಸ್ವಿಯಾಗಿದ್ದಾರೆ.

ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಇಂಧನ ಕ್ಷಮತೆಯನ್ನು ನೀಡಲಿದೆ. ಇದರ 1.6 ಲೀಟರ್ ಫೋರ್ ಸಿಲಿಂಡ್ ಪೆಟ್ರೋಲ್ ಎಂಜಿನ್ ಆಲ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ಆಗಮನವಾಗಲಿದೆ.

ಅಲ್ಲದೆ ಫೈವ್ ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಯ್ಕೆ ಕೂಡಾ ಇರಲಿದೆ. 2012 ಪ್ಯಾರಿಸ್ ಮೋಟಾರ್ ಶೋ ದಲ್ಲಿ ಮೊದಲ ಬಾರಿಗೆ ಪ್ರದರ್ಶನಕ್ಕಿಡಲಾಗಿತ್ತು. ಇದು ಎಲ್ಲ ಅರ್ಥದಲ್ಲೂ ವಿಮರ್ಶಕರ ಪ್ರೀತಿ ಪಾತ್ರವಾಗಿತ್ತು.

ಇದರಲ್ಲಿ 16 ಇಂಚು ಅಲಾಯ್ ವೀಲ್, ಕ್ರೂಸ್ ಕಂಟ್ರೋಲ್, ರೂಫ್ ರೈಲ್ ಮತ್ತು ಹೊಂದಾಣಿಸಬಹುದಾದ ಸ್ಟೀರಿಂಗ್ ವ್ಯವಸ್ಥೆಯಿದೆ. ಅಲ್ಲದೆ ಬ್ಲೂಟೂತ್ ಕನೆಕ್ಟಿವಿಟಿ, ಆಡಿಯೋ ಸ್ಟ್ರೀಮಿಂಗ್, ಫೋರ್ ಸ್ಪೀಕರ್ ಆಡಿಯೋ ಸಿಸ್ಟಂ ಮತ್ತು ಮನರಂಜನೆಗಾಗಿ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಇದೆ.

ಅಷ್ಟೇ ಯಾಕೆ ಯುರೋಪ್‌ನಲ್ಲಿ ನಡೆಸಿರುವ ಎನ್‌ಸಿಎಜಿ ಪರೀಕ್ಷೆಯಲ್ಲೂ ಫೈವ್ ಸ್ಟಾರ್ ಸುರಕ್ಷತೆಯನ್ನು ಗಿಟ್ಟಿಸಿಕೊಳ್ಳುವಲ್ಲಿಯೂ ಸುಜುಕಿ ಎಸ್ ಕ್ರಾಸ್ ಯಶಸ್ವಿಯಾಗಿದೆ. ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಏಳು ಏರ್ ಬ್ಯಾಕ್ ಜತೆಗೆ ಅನೇಕ ಸುರಕ್ಷತಾ ವೈಶಿಷ್ಟ್ಯ್ಗಳನ್ನು ಹೊಂದಿದೆ.

ಜಾಗತಿಕವಾಗಿ ಸುಬರು ಎಕ್ಸ್‌ವಿ ಮತ್ತು ನಿಸ್ಸಾನ್ ಡ್ಯುಲಿಸ್‌ಗೆ ಸುಜುಕಿ ಎಸ್ ಕ್ರಾಸ್ ಪ್ರತಿಸ್ಪರ್ಧಿಯಾಗಿರಲಿದೆ. ಇನ್ನು ಜನವರಿ 1ರಂದು ಆಸ್ಟ್ರೇಲಿಯಾ ಮಾರುಕಟ್ಟೆ ಪ್ರವೇಶಿಸಲಿರುವ ಪ್ರಸ್ತುತ ಕಾರು ಬಳಿಕ ಭಾರತದತ್ತ ಮುಖ ಮಾಡಲಿದೆ. ಹಾಗೆಯೇ ನಿಸ್ಸಾನ್ ಟೆರನೊ, ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್, ಸ್ಕೋಡಾ ಯೆಟಿ ಮತ್ತು ಮಹೀಂದ್ರ ಕ್ಸೈಲೋಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications








