ಟಾಟಾದಿಂದ ಬರುತ್ತಿದೆ ಆರಿಯಾ ಫೇಸ್‌ಲಿಫ್ಟ್, ಮೂವಸ್ ಎಂಪಿವಿ
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ಶೀಘ್ರದಲ್ಲೇ 2014 ಟಾಟಾ ಆರಿಯಾ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಲಿದೆ. ಇದೇ ಸಂದರ್ಭದಲ್ಲಿ ನೂತನ ಮೂವಸ್ (Movus) ಎಂಪಿವಿ ಕೂಡಾ ಬಿಡುಗಡೆಯಾಗಲಿದೆ ಎಂದು ಆಟೋ ಮೂಲಗಳು ತಿಳಿಸಿವೆ.
ಇಲ್ಲಿ ಮೂವಸ್ ಎಂಬ ಹೆಸರು ಕೇಳಿದಾಕ್ಷಣ ಇದ್ಯಾವ ಹೊಸ ಗಾಡಿ ಎಂದು ಗಾಬರಿಯಾಗದಿರಿ. ವಿಷಯ ಏನೆಂದರೆ ಟಾಟಾ ತನ್ನ ಗ್ರಾಂಡೆ ಆವೃತ್ತಿಗೆ ಮರು ನಾಮಕರಣಗೊಳಿಸಿದ್ದು, ಹೊಸ ವರ್ಷನ್ ಮೂವಸ್ ಎಂದೆನಿಸಿಕೊಳ್ಳಲಿದೆ. ವರದಿಗಳ ಪ್ರಕಾರ ಈ ಎರಡು ಮಾದರಿಗಳು ಮಾರ್ಚ್ 12ರಂದು ಮಾರುಕಟ್ಟೆ ಪ್ರವೇಶಿಸಲಿದೆ.

ಇನ್ನೋವಾ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಟಾಟಾ ಆರಿಯಾ ನಿರೀಕ್ಷಿಸಿದಷ್ಟು ಯಶ ಸಾಧಿಸಲು ವಿಫಲವಾಗಿತ್ತು. ಇದೀಗ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಲಗ್ಗೆಯಿಡುತ್ತಿದ್ದು, ಉತ್ತಮ ಮಾರಾಟದ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಪರಿಷ್ಕತ ಹೆಡ್ ಲ್ಯಾಂಪ್, ಸ್ಪೋಕ್ಡ್ ಟೈಲ್ ಲ್ಯಾಂಪ್ ಸೇರಿದಂತೆ ಕೆಲವೊಂದು ಮಹತ್ವಪೂರ್ಣ ಬದಲಾವಣೆಗಳು ಆರಿಯಾ ಫೇಸ್‌ಲಿಫ್ಟ್ ವರ್ಷನ್‌ನಲ್ಲಿ ಕಂಡುಬರುವ ಸಾಧ್ಯತೆಯಿದೆ.

ಇವೆದ್ದಕ್ಕಿಂತಲೂ ಮಿಗಿಲಾಗಿ 2014 ಆರಿಯಾ ವರ್ಷನ್, ಅಪ್‌ಗ್ರೇಡಡ್ ವೆರಿಕೊರ್ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ (148 ಅಶ್ವಶಕ್ತಿ) ಪಡೆದುಕೊಳ್ಳಲಿದೆ. ಇದು ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಸಕ್ಷಮವಾಗಿರಲಿದೆ.

ಇನ್ನು ಮೂವಸ್ ಎಂಪಿವಿ ಬಗ್ಗೆ ಮಾತನಾಡುವುದಾದ್ದಲ್ಲಿ ಪರಿಷ್ಕೃತ ಶೈಲಿ ಹಾಗೂ ವೆರಿಯಂಟ್‌ಗೆ ಅನುಸಾರವಾಗಿ ಕೆಲವೊಂದು ಬದಲಾವಣೆ ಕಂಡುಬರಲಿದೆ. ಉದಾಹರಣೆಗೆ ಟಾಪ್ ಎಂಡ್ ವೆರಿಯಂಟ್, ಕಾಪ್ಟನ್ ಸ್ಟೈಲ್ ಸೀಟು ಪಡೆದುಕೊಳ್ಳಲಿದೆ. ಇನ್ನುಳಿದಂತೆ ಡ್ಯಾಶ್‌ಬೋರ್ಡ್‌ನಲ್ಲೂ ಬದಲಾವಣೆ ನಿರೀಕ್ಷಿಸಲಾಗುತ್ತಿದೆ.

ಇನ್ನುಳಿದಂತೆ ಆರಿಯಾಗೆ ಸಮಾನವಾದ 2.2 ಲೀಟ್ ವ್ಯಾರಿಕೊರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಇದು 118 ಅಶ್ವಶಕ್ತಿ ಉತ್ಪಾದಿಸಲಿದೆ.


Click it and Unblock the Notifications








