ಅತಿ ಹೆಚ್ಚು ಮಾರಾಟ ಸಾಧಿಸಿರುವ ಟಾಪ್ 10 ಕಾರುಗಳಿವು
ಸಮಕಾಲಿನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಅನೇಕ ನೂತನ ಕಾರುಗಳ ಪ್ರವೇಶವಾಗಿದೆ. ಇದು ಉತ್ತಮ ಬೆಳವಣಿಗೆಯಾದರೂ ಕೆಲವೊಂದು ನಿರ್ದಿಷ್ಟ ಮಾದರಿಗಳು ನೆಲಕಚ್ಚಿ ಹೋಗಿರುವುದು ಆತಂಕದ ವಾತಾವರಣ ಸೃಷ್ಟಿ ಮಾಡುತ್ತದೆ.
ಇವನ್ನೂ ಓದಿ: ಬೆಂಗಳೂರಿನಲ್ಲಿ ಬಿಡುಗಡೆಯಾದ ಎಲೈಟ್ ಐ20 ಬೆಲೆ ಎಷ್ಟು?
ಎಂದಿನಂತೆಯೇ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಓಟವನ್ನು ಮುಂದುವರಿಸಿದರೆ ಹ್ಯುಂಡೈ, ಹೋಂಡಾಗಳಂತಹ ಸಂಸ್ಥೆಗಳು ತನ್ನ ಆವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇಂದಿನ ಈ ಲೇಖನದಲ್ಲಿ 2014 ಮೊದಲ ತ್ರೈಮಾಸಿಕ ಅವಧಿಯಲ್ಲಿ (ಎಪ್ರಿಲ್‌ನಿಂದ ಜೂನ್ ತಿಂಗಳ ವರೆಗೆ) ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಟಾಪ್ 10 ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಇದಕ್ಕಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ಭಾರತ ವಾಹನೋದ್ಯಮದ ಒಕ್ಕೂಟವು (ಸಿಯಾಮ್) ಈ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದೆ. ಇದೀಗ ಟಾಪ್ 10 ಪಟ್ಟಿ ತಿಳಿದುಕೊಳ್ಳಲು ಮುಂದಿನ ಪುಟಗಳನ್ನು ಒಂದೊಂದಾಗಿ ಕ್ಲಿಕ್ ಮಾಡಿರಿ...

10. ಹೋಂಡಾ ಅಮೇಜ್
10ನೇ ಸ್ಥಾನದಲ್ಲಿ ಜಪಾನ್‌ನ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾದ ಜನಪ್ರಿಯ ಅಮೇಜ್ ಕಾರು ಕಾಣಿಸಿಕೊಂಡಿದೆ. ಕಳೆದೊಂದು ವರ್ಷದಲ್ಲಿ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಅಮೇಜ್ ಮೊದಲ ತ್ರೈಮಾಸಿಕ ಅವಧಿಯಲ್ಲಿ 15,182 ಯುನಿಟ್ ಮಾರಾಟ ಕಂಡುಬಂದಿದೆ. ಕಳೆದ ವರ್ಷ 15,853 ಯುನಿಟ್ ಮಾರಾಟ ಕಂಡುಕೊಂಡಿದ್ದ ಅಮೇಜ್ 7ನೇ ಸ್ಥಾನ ಗಿಟ್ಟಿಸಿಕೊಂಡಿತ್ತು.

9. ಮಾರುತಿ ಸುಜುಕಿ ಸೆಲೆರಿಯೊ
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸೆಲೆರಿಯೊ ನಿರೀಕ್ಷೆಯಂತೆಯೇ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಎಪ್ರಿಲ್‌ನಿಂದ ಜೂನ್ ಅವಧಿಯಲ್ಲಿ 16,541 ಯುನಿಟ್‌ಗಳಷ್ಟು ಸೆಲೆರಿಯೊ ಮಾರಾಟ ಕಂಡಿದೆ.

8. ಹ್ಯುಂಡೈ ಇಯಾನ್
ಎಂಟನೇ ಸ್ಥಾನದಲ್ಲಿರುವ ಹ್ಯುಂಡೈ ಇಯಾನ್ ಎಂಟ್ರಿ ಲೆವೆಲ್ ಕಾರು ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 19,379 ಯುನಿಟ್ ಮಾರಾಟ ಕಂಡಿದೆ. ಕಳೆದ ವರ್ಷ ಆರನೇ ಸ್ಥಾನದಲ್ಲಿದ್ದ ಇಯಾನ್ 24,526 ಯುನಿಟ್ ಮಾರಾಟ ದಾಖಲಿಸಿತ್ತು. ಇದು ಮಾರುಕಟ್ಟೆಯಲ್ಲಿ ಇಯಾನ್ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

7. ಹ್ಯುಂಡೈ ಎಕ್ಸ್‌ಸೆಂಟ್
ಸಮಕಾಲೀನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕಾರುಗಳಲ್ಲಿ ಒಂದಾಗಿರುವ ಹ್ಯುಂಡೈ ಎಕ್ಸ್‌ಸೆಂಟ್ ಸಹ 21,524 ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವ ಮೂಲಕ ಟಾಪ್ 10 ಪಟ್ಟಿಗೆ ಪ್ರವೇಶ ಪಡೆದಿದೆ.

6. ಹೋಂಡಾ ಸಿಟಿ
ಹೋಂಡಾದ ಮಿಡ್ ಸೈಜ್ ಸೆಡಾನ್ ಕಾರಾಗಿರುವ ಸಿಟಿ ಇತ್ತೀಚೇಗಷ್ಟೇ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿತ್ತು. ಇದರ ಫಲಿತಾಂಶ ಮಾರಾಟದಲ್ಲೂ ಪ್ರತಿಬಂಬಿಸಿದೆ. 2014ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಿಟಿ ಬರೋಬ್ಬರಿ 21,985 ಯುನಿಟ್ ಮಾರಾಟ ಗಿಟ್ಟಿಸಿಕೊಂಡಿದೆ. ಕಳೆದ ವರ್ಷವಿದು 6,949 ಯುನಿಟ್‌ಗಳು ಮಾತ್ರವಾಗಿತ್ತು.

5. ಹ್ಯುಂಡೈ ಗ್ರಾಂಡ್ ಐ10
ಹ್ಯುಂಡೈನ ಮಗದೊಂದು ಜನಪ್ರಿಯ ಆವೃತ್ತಿಗಳಲ್ಲಿ ಒಂದಾಗಿರುವ ಗ್ರಾಂಡ್ ಐ10 ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ ಸಂಸ್ಥೆಯು 26,830 ಯುನಿಟ್ ಮಾರಾಟ ಮಾಡುವಲ್ಲಿ ಯಶ ಕಂಡಿತ್ತು.

4. ಮಾರುತಿ ಸುಜುಕಿ ವ್ಯಾಗನಾರ್
ನಾಲ್ಕನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ವ್ಯಾಗನಾರ್ ಮೊದಲ ತ್ರೈಮಾಸಿಕ ಅವಧಿಯಲ್ಲಿ 38,156 ಯುನಿಟ್ ಮಾರಾಟ ಕಂಡುಕೊಂಡಿದೆ. ಕಳೆದ ವರ್ಷವಿದು 35,141 ಯುನಿಟ್‌ಗಳಾಗಿದ್ದು, ಸ್ಥಿರತೆಯ ಪ್ರದರ್ಶನ ಕಾಪಾಡುವಲ್ಲಿ ಯಶಸ್ವಿಯಾಗಿದೆ.

3. ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರಾಗಿರುವ ಸ್ವಿಫ್ಟ್, 47,442 ಯುನಿಟ್ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಸಂಖ್ಯೆ 48,120 ಯುನಿಟ್‌ಗಳಾಗಿತ್ತು.

2. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ಕಳೆದ ವರ್ಷದಂತೆ ಸ್ಥಿರತೆಯ ಮಾರಾಟ ಕಾಪಾಡಿಕೊಂಡಿರವು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 50,951 ಯುನಿಟ್ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷವಿದು 49,259 ಯುನಟ್ ಮಾರಾಟ ಕಂಡುಕೊಂಡಿತ್ತು.

1. ಮಾರುತಿ ಸುಜುಕಿ ಆಲ್ಟೊ
ಸದ್ಯಕ್ಕಂತೂ ಆಲ್ಟೊ ಭದ್ರಕೋಟೆ ಭೇದಿಸುವುದು ಕಷ್ಟಕರ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಅಲ್ಲದೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಾರಾಟ ಸಾಧಿಸಿರುವ ಮಾರುತಿ ಆಲ್ಟೊ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬರೋಬ್ಬರಿ 64,573 ಯುನಿಟ್‌ಗಳ ಮಾರಾಟ ಸಾಧಿಸಿದೆ. ಕಳೆದ ವರ್ಷವಿದು 56,335 ಯುನಿಟ್‌ಗಳಾಗಿತ್ತು.


Click it and Unblock the Notifications








