2014 ಮೇ ತಿಂಗಳ ಮಾರಾಟ; ಟಾಪ್ 5 ಪಟ್ಟಿ ಯಾವುವು?
ಭಾರತ ವಾಹನೋದ್ಯಮ ಈಗಲೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದೆ. ಕೆಲವೊಂದು ನೂತನ ಮಾದರಿಗಳು ಮಾರುಕಟ್ಟೆಗೆ ಉತ್ತೇಜನ ನೀಡಿದರೂ ಒಟ್ಟಾರೆಯಾಗಿ ಮಾರಾಟ ಕ್ಷೀಣಿಸುತ್ತಲೇ ಇದೆ.
ಈ ನಡುವೆ ದೇಶದ ಜನಪ್ರಿಯ ಸಂಸ್ಥೆಗಳು ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಸ್ವಲ್ಪ ನಿರಾಳತೆ ತಂದಿದೆ. ಇದರಂತೆ ಇಂದಿನ ಈ ಲೇಖನದಲ್ಲಿ 2014 ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ದಾಖಲಿಸಿದೆ ದೇಶದ ಟಾಪ್ ಫೈವ್ ವಾಹನ ತಯಾರಕ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿರುವ ಸಂಸ್ಥೆಗಳೇ ಟಾಪ್ 5 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅವು ಯಾವುದು ಅಂತೀರಾ? ಮುಂದಿನ ಪುಟಗಳತ್ತ ಭೇಟಿಕೊಡಿರಿ...

5. ಟೊಯೊಟಾ
ಇತ್ತೀಚೆಗಷ್ಟೇ ದೇಶದ ಮಾರುಕಟ್ಟೆಗೆ ಇಟಿಯೋಸ್ ಕ್ರಾಸ್ ಹಾಗೂ 11ನೇ ತಲೆಮಾರಿನ ಕರೊಲ್ಲಾ ಆಲ್ಟೀಸ್ ಬಿಡುಗಡೆ ಮಾಡಿದ್ದ ಟೊಯೊಟಾ ಮೇ ತಿಂಗಳಲ್ಲಿ ಒಟ್ಟು 11,833 ಯುನಿಟ್‌ಗಳ ಮಾರಾಟವನ್ನು ಸಾಧಿಸಿದೆ. ಕಳೆದ ವರ್ಷವಿದು 10,023 ಯುನಿಟ್‌ಗಳಾಗಿದ್ದವು. ಈ ಮೂಲಕ ಶೇಕಡಾ 18ರಷ್ಟು ವೃದ್ಧಿ ದಾಖಲಿಸಿದೆ.

4. ಹೋಂಡಾ
ಹೋಂಡಾ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದಾಗಿರುವ ಸಿಟಿ ಈಗಲೂ ಸೆಡಾನ್ ಪ್ರಿಯರ ಮನಗೆಲ್ಲುವಲ್ಲಿ ಯಶ ಕಂಡಿದೆ. ಇದು ಅಮೇಜ್ ಮಾರಾಟದಲ್ಲಿ ಸ್ವಲ್ಪ ಇಳಿಕೆಗೆ ಕಾರಣವಾಗಿದ್ದರೂ ಹೋಂಡಾ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 2014ನೇ ಸಾಲಿನಲ್ಲಿ ಹೋಂಡಾ ಒಟ್ಟು 13,362 ಯುನಿಟ್‌ಗಳ ಮಾರಾಟವನ್ನು ಕಂಡಿದೆ. ಕಳೆದ ಬಾರಿಯಿದು 11,342 ಯುನಿಟ್‌ಗಳಾಗಿದ್ದವು. ಈ ಮೂಲಕ ಶೇಕಡಾ 18ರಷ್ಟು ವೃದ್ಧಿ ದಾಖಲಿಸಿದೆ. ಅಲ್ಲದೆ ಇನ್ನಷ್ಟೇ ಲಾಂಚ್ ಆಗಲಿರುವ ಮೊಬಿಲಿಯೊ ಇನ್ನಷ್ಟು ಉತ್ತೇಜನ ನೀಡುವ ಸಾಧ್ಯತೆಯಿದೆ.

3. ಮಹೀಂದ್ರ
ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ, ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಹಿನ್ನಡೆ ದಾಖಲಿಸಿರಬಹುದು. 2014 ಮೇ ತಿಂಗಳಲ್ಲಿ 18,085 ಯುನಿಟ್ ಮಾರಾಟ ದಾಖಲಿಸಿರುವ ಮಹೀಂದ್ರ ಶೇಕಡಾ 19ರಷ್ಟು ಕುಸಿತ ದಾಖಲಿಸಿತ್ತಲ್ಲದೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 22,244 ಯುನಿಟ್ ಮಾರಾಟ ದಾಖಲಿಸಿತ್ತು. ಈ ನಡುವೆ ಸಬ್ ಫೋರ್ ಮೀಟರ್ ಎಸ್‌ಯುವಿ ಲಾಂಚ್ ಮಾಡುವ ಇರಾದೆಯಲ್ಲಿರುವ ಮಹೀಂದ್ರ, ಮಾರಾಟಕ್ಕೆ ಉತ್ಸಾಹ ತುಂಬುವ ನಿರೀಕ್ಷೆಯಲ್ಲಿದೆ.

2. ಹ್ಯುಂಡೈ
ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರಿನ ಪ್ರವೇಶವು ಈ ದಕ್ಷಿಣ ಕೊರಿಯಾ ವಾಹನ ತಯಾರಿಕ ಸಂಸ್ಥೆಯ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿದೆ. 2014 ಮೇ ತಿಂಗಳಲ್ಲಿ ಮಾತ್ರವಾಗಿ ಹ್ಯುಂಡೈ ಒಟ್ಟು 36,205 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷವಿದು 32,102 ಯುನಿಟ್‌ಗಳಾಗಿದ್ದವು. ಈ ಮೂಲಕ ಶೇಕಡಾ 12.8ರಷ್ಟು ವೃದ್ಧಿ ದಾಖಲಿಸಿದೆ. ಮುಂಬರುವ ಹಬ್ಬದ ಆವೃತ್ತಿಯಲ್ಲಿ ಫೇಸ್‌ಲಿಫ್ಟ್ ಐ20 ಆಗಮನದೊಂದಿಗೆ ಮಾರಾಟ ಇನ್ನಷ್ಟು ವೃದ್ಧಿಯಾಗುವ ಸಾಧ್ಯತೆಯಿದೆ.

1. ಮಾರುತಿ ಸುಜುಕಿ
ಸದ್ಯಕ್ಕಂತೂ ಮಾರುತಿ ಸುಜುಕಿ ಪಾರುಪತ್ಯಕ್ಕೆ ಯಾರು ಸಹ ಕುತ್ತು ತರುವ ಸಂಭವವಿಲ್ಲ. ಗ್ರಾಹಕ ನಿಷ್ಠೆಯಲ್ಲಿ ಸದಾ ಮುಂದಿರುವ ದೇಶದ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ, ಸೆಲೆರಿಯೊ ಜನಪ್ರಿಯತೆಯ ಬೆಂಬಲದಲ್ಲಿ ಮಾರುತಿ 2014 ಮೇ ತಿಂಗಳಲ್ಲಿ ಒಟ್ಟು 90,560 ಯುನಿಟ್‌ಗಳ ಮಾರಾಟ ದಾಖಲಿಸಿದೆ. 2013ನೇ ಸಾಲಿನಲ್ಲಿ ಮಾರಾಟ ಸಂಖ್ಯೆ 77,821 ಯುನಿಟ್‌ಗಳಾಗಿದ್ದವು. ಈ ಮೂಲಕ 16.4ರಷ್ಟು ಏರಿಕೆ ದಾಖಲಿಸಿದೆ. ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆವೃತ್ತಿಗಳು ಮಾರುತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ.


Click it and Unblock the Notifications








