ಕಾರ್ ಕೇರ್: ನಿಮ್ಮ ಪ್ರೀತಿಯ ಕಾರಿಗೆ ಜಳಕ ಮಾಡಿಸಿ

ಒಮ್ಮೆ ಕಣ್ಣು ತೆರೆದು ನೋಡಿ. ನಿಮ್ಮ ಕಾರು ಹೇಗಿದೆ ಅಂತ ನೋಡಿ. ಛೀ.. ಥೂ.. ಧೂಳು, ಕೊಳೆಯಿಂದ ತುಂಬಿದೆ ಅಲ್ವೇ. ಕಾರ್ ವಾಷ್ ಮಾಡದೇ ಎಷ್ಟು ದಿನಾ ಆಗಿದೆ? ನಿಮ್ಮ ಪ್ರಿಯತಮೆ/ಪ್ರಿಯಕರ, ಹೆಂಡತಿ/ಗಂಡ ಹೀಗಿದ್ದರೆ ನಿಮಗೆ ಇಷ್ಟವಾದೀತೆ?
ಮದುವೆಯಾಗೋದು ಸುಲಭ. ಆದರೆ ಸಂಸಾರ ಸಾಗಿಸೋದು ತುಂಬಾ ಕಷ್ಟ ಅಂತೆ! ಅದೇ ರೀತಿ, ಕಾರು ಖರೀದಿಸೋದು ಸುಲಭ. ಆದರೆ ಅದನ್ನು ಸೂಕ್ತವಾಗಿ ನಿರ್ವಹಿಸೋದು ನಿಜಕ್ಕೂ ಕಷ್ಟ. ಕಾರ್ ಗೆ ಕೇರ್ ಅತ್ಯಂತ ಅಗತ್ಯ. ಹಾಗಾಗಿ ಈಗ ಜಳಕದಿಂದ ಸುರು ಮಾಡೋಣ.
ಕಾರು ಶ್ಯಾಂಪೂ: ನಿಮ್ಮ ಪ್ರೀತಿಯ ಹುಡುಗಿ ಕೊಂಚ ಹೊತ್ತು ಬಿಸಿಲಲ್ಲಿದ್ದರೆ ನಿಮಗೆ ನೋವಾಗುತ್ತದೆ. ಆದರೆ ನಿಮ್ಮ ಕಾರು ದಿನನಿತ್ಯ ನಿಮಗಾಗಿ ಬಿಸಿಲು, ಮಳೆ, ಗಾಳಿ, ಧೂಳಿಗೆ ಮೈಯೊಡ್ಡುತ್ತದೆ. ಅದಕ್ಕೂ ನಿಮ್ಮಂತೆ ಶ್ಯಾಂಪೂ ಹಾಕಿ ಸ್ನಾನ ಮಾಡಿಸಲೇ ಬೇಕು.
ಈಗ ಮಾರುಕಟ್ಟೆಯಲ್ಲಿ ಮೆಟಾಲಿಕ್, ಡೆಕೊ ಇತ್ಯಾದಿ ವಾಹನ ಶ್ಯಾಂಪೂಗಳು ದೊರಕುತ್ತವೆ. ನಿಮ್ಮ ಕಾರು ಡೀಲರ್ ಸೂಚಿಸಿದ ಕಾರು ಶ್ಯಾಂಪೂ ಬಳಸಬಹುದು. ಕಾರು ಶ್ಯಾಂಪೂ ಕಾರನ್ನು ಶುಚಿಯಾಗಿಡಲು, ಧೂಳು, ಕೊಳೆ ತೊಳಗಿಸಲು, ಹಕ್ಕಿ ಹಿಕ್ಕೆ ಗುರುತು ಅಳಿಸಲು ಸಹಕರಿಸುತ್ತದೆ. ಆದಷ್ಟು ಅತ್ಯುತ್ತಮ ದರ್ಜೆಯ ಕಾರು ಶಾಂಪೂ ಬಳಸಿರಿ.
ಕ್ರೀಮ್ ಪಾಲೀಷ್: ಕಾರು ತೊಳೆದ ನಂತರ ಕಾರಿಗೆ ಪಾಲೀಷ್ ಮಾಡಿ. ಕಾರಿನ ಪೇಂಟ್ ಗೆ ಹಾನಿಯಾಗದಂತೆ ಕ್ರೀಮ್ ಪಾಲೀಷ್ ವ್ಯಾಕ್ಸ್ ತಡೆಗಟ್ಟುತ್ತದೆ. ಕಾರು ಖರೀದಿಸಿದಾಗ ಯಾವ ಕ್ರೀಮ್ ಪಾಲೀಷ್ ಬಳಸಬಹುದೆಂದು ಕೇಳಿ ನೋಡಿ.
ಡ್ಯಾಷ್ ಬೋರ್ಡ್ ಪಾಲೀಷ್: ಕಾರಿನ ಒಳಭಾಗದ ಸೌಂದರ್ಯ ಹೆಚ್ಚಿಸುವಲ್ಲಿ ಡ್ಯಾಷ್ ಬೋರ್ಡ್ ಪಾತ್ರ ಹಿರಿದು. ಅದಕ್ಕಾಗಿ ಡ್ಯಾಷ್ ಬೋರ್ಡ್ ನೀಟಾಗಿರಲಿ. ಕಾರಿನ ಡ್ಯಾಷ್ ಬೋರ್ಡ್ ಗೆ ಸೂಕ್ತವಾದ ವ್ಯಾಕ್ಸ್ ಪಾಲೀಷ್ ಮಾಡಿ.
ಸೀಟು ಮತ್ತು ಕಾರ್ಪೆಟ್: ಕಾರಿನ ಸೀಟು ಮತ್ತು ಕಾರ್ಪೆಟ್ ಗಳಲ್ಲಿರುವ ಕೊಳೆ ತೊಳಗಿಸಲು ಮಾರುಕಟ್ಟೆಯಲ್ಲಿ ಸ್ಟೈನ್, ಒಡೊರ್ ರಿಮೂವರ್ ಉತ್ಪನ್ನಗಳು ದೊರಕುತ್ತವೆ.
ಕಾರು ತೊಳೆಯಲು ಬಿಟ್ಟಿ ಸಲಹೆ
* ಕಾರನ್ನು ಹೆಚ್ಚು ಬಿಸಿಲಿನಲ್ಲಿ ತೊಳೆಯದಿರಿ. ರಾಸಾಯನಿಕ ಅಂಶಗಳು ಇರುವ ಪರಿಸರದಲ್ಲಿ, ಹಕ್ಕಿ ಹಿಕ್ಕೆ ಬೀಳುವ ಸ್ಥಳಗಳಲ್ಲಿ ಕಾರು ತೊಳೆಯದಿರಿ. ಹಕ್ಕಿ ಹಿಕ್ಕೆ, ಕೆಮಿಕಲ್ ಇರುವ ಪರಿಸರ ಕಾರಿನ ಪೇಂಟ್ ಮೇಲೆ ಹಾನಿ ಮಾಡುತ್ತದೆ. ನೆರಳಿರುವ ಪ್ರದೇಶದಲ್ಲಿ, ಸಮತಟ್ಟಾದ ಪ್ರದೇಶದಲ್ಲಿ ಕಾರು ತೊಳೆಯಿರಿ.
* ಮನೆಬಳಕೆಯ ಸೋಪ್, ಡಿಟರ್ಜೆಂಟ್ ಇತ್ಯಾದಿಗಳನ್ನು ಬಳಸದಿರಿ. ಕಾರು ತೊಳೆಯಲೆಂದೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಬಳಸಿರಿ. ವಾಹನಗಳ ಪೇಂಟಿಗೆ ಅನುಕೂಲವಾಗಿರುವಂತೆ ಇದನ್ನು ಉತ್ಪಾದಿಸಲಾಗಿರುತ್ತದೆ.
* ಟೈರ್, ರಿಮ್ ಇತ್ಯಾದಿಗಳನ್ನು ತೊಳೆಯಲು ಪ್ರತ್ಯೇಕ ಸ್ಪಾಂಜ್ ಬಳಸಿ. ಸಾಬೂನು ನೀರಿನಲ್ಲಿ ಈ ಸ್ಥಳಗಳನ್ನು ತೊಳೆಯಬಹುದು. ಉಳಿದ ಭಾಗಗಳನ್ನು ಸ್ಮೂತಾಗಿರುವ ಸ್ಮಾಂಜ್ ಮೂಲಕ ತೊಳೆಯಿರಿ.
* ರಬ್ಬರ್, ರಸ್ತೆಯ ಡಾಮರ್ ಇತ್ಯಾದಿಗಳು ಟೈರ್ ನಲ್ಲಿ ಹಿಡಿದಿದ್ದರೆ ಗಟ್ಟಿಯಾದ ಬ್ರಷ್ ನಿಂದ ಉಜ್ಜಬಹುದು. ಇದಕ್ಕಾಗಿ ವಿಶೇಷ ಟಾರ್ ರಿಮೂವರ್ ಕೂಡ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಕಾರಿನ ಬಾಡಿ ಸ್ಥಳದಲ್ಲಿ ಗಟ್ಟಿ ವಸ್ತುವಿನಿಂದ ಉಜ್ಜದಿರಿ.
* ಕಾರಿನ ಮೇಲ್ಮೈ ಬಿಸಿಯಾಗಿರುವಾಗ ತೊಳೆಯದಿರಿ. ದೂರಪ್ರಯಾಣ ಮಾಡಿ ಬಂದ ಕೂಡಲೇ ಕಾರು ತೊಳೆಯದಿರಿ. ಕಾರು ಬಿಸಿಯಾಗಿದ್ದಾಗ ನೀರು ಮತ್ತು ಸೋಪ್ ಒಣಗುತ್ತದೆ. ಇದರಿಂದ ಕಲೆ ಮೂಡುವ ಸಾಧ್ಯತೆಯೂ ಇರುತ್ತದೆ. ಜರ್ನಿ ಮಾಡಿ ಕಾರು ತಣಿದ ಮೇಲೆ ಕಾರಿಗೆ ಬಾತ್ ಮಾಡಿಸಿ.
* ಸ್ಮಾಂಜ್ ನ್ನು ವೃತ್ತಾಕಾರವಾಗಿ ತಿರುಗಿಸದಿರಿ. ಇದರಿಂದ ಗೀರುಗಳಾಗುವ ಸಾಧ್ಯತೆಯಿದೆ. ನೆಲಕ್ಕೆ, ಮರಳಿಗೆ ಬಿದ್ದ ಸ್ಮಾಂಜ್ ನಿಂದ ಕಾರು ತೊಳೆಯದಿರಿ. ಸ್ಮಾಂಜನ್ನು ಸಾಬೂನು ನೀರಿನಲ್ಲಿ ಚೆನ್ನಾಗಿ ಜಾಲಾಡಿಸಿ ನಂತರ ಜತನದಿಂದ ಬಾಡಿ ಮೇಲೆ ಉಜ್ಜಿರಿ. ಒಟ್ಟಾರೆ ಕಾರಿನ ಮೇಲೆ ಗಾಯಗಳಾಗದಂತೆ ಉಜ್ಜಿ ತೊಳೆಯಿರಿ.
* ಏರ್ ಡ್ರೈ(ಬಿಸಿಗಾಳಿ) ಮೂಲಕ ಕಾರು ಒಣಗಿಸದಿರಿ. ನಾಲ್ಕು ಸುತ್ತು ಡ್ರೈವಿಂಗ್ ಮಾಡಿ ಕೂಡ ಕಾರು ಒಣಗಿಸಲು ಪ್ರಯತ್ನಿಸದಿರಿ. ಯಾಕೆಂದರೆ ನೀರಿನ ಲವಣಗಳು ಕಾರಿನ ಪ್ರಮುಖ ಭಾಗಗಳಲ್ಲಿ ಉಳಿಯುವ ಸಾಧ್ಯತೆಗಳಿವೆ. ದೊರಗು ಟವಲ್ ನಲ್ಲೂ ಉಜ್ಜದಿರಿ. ಕಾಟನ್, ಮೃದು ಬಟ್ಟೆ ಮೂಲಕ ಒರೆಸಿರಿ.


Click it and Unblock the Notifications








