ಥೂ...! ನೀ ಹಿಂಗ ಡ್ರೈವ್ ಮಾಡಬೇಡ ನನ್ನ...

ಫೂ....ಫ್!! ಯಾವನಯ್ಯ ನಿಂಗೆ ಡ್ರೈವಿಂಗ್ ಕಲಿಸಿದ್ದು. ಅವನಿಗಾದರೂ ಚೂರು ಬುದ್ದಿ ಬೇಡ್ವಾ? ನನ್ನ ಹೇಗೆ ನೋಡಿಕೊಳ್ಳಬೇಕು ಅಂತ ಅವ ಹೇಳಿಕೊಟ್ಟಿಲ್ವ. ಅದು ಹೋಗ್ಲಿ, ನನ್ನ ಕಾರು ಕಂಪನಿ ನೀಡಿದ ಪುಸ್ತಕ ಆದ್ರೂ ಓದೋಕೆ ನಿಂಗೆ ಏನೂ ರೋಗ. ನನ್ನ ಹೇಗೆ ನೋಡಿಕೊಳ್ಳಬೇಕು ಅಂತ ಅದರಲ್ಲಿ ಹೇಳಿಕೊಟ್ಟಿಲ್ವ?
ಪ್ರೀತಿಯ ಚಾಲಕ. ಒಮ್ಮೊಮ್ಮೆ ಹೀಗೆ ನಿನ್ನ ಮೇಲೆ ನಂಗೆ ವಿಪರೀತ ಕೋಪ ಬರುತ್ತದೆ. ಆದರೆ ನೀನೇ ನನ್ನ ಚಾಲಕ. ನಾನು ಬರೀ ಯಾಂತ್ರಿಕ ಆಗಿರೋ ಕಾರಣ ಇಷ್ಟುದಿನ ಮೌನವಾಗಿದ್ದೆ. ಆದರೆ ನಿನಗೆ ಒಂಚೂರು ಪಾಠ ಹೇಳುವ ಮನಸ್ಸು ನನಗಿದೆ. ನೀನು ಪಾಲಿಸ್ತಿ ಅನ್ನೋ ದೃಢ ವಿಶ್ವಾಸ ನನಗಿದೆ.
ಲೋ... ನೆನಪಿಟ್ಟುಕೋ.. ನಾನು ಹೇಳಿಕೊಡುವುದನ್ನು ಗಮನವಿಟ್ಟು ಕೇಳು. ಒಂದು ಕಿವಿಯಲ್ಲಿ ಹೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟರೆ ನಂಗೇನಿಲ್ಲ. ನಷ್ಟ ನಿನಗೆ. ನಾನೇನೂ ಎಲ್ಲಾ ಪಾಠ ಈಗ ಹೇಳಿಕೊಡೊಲ್ಲ. ದಿನನಿತ್ಯ ನನ್ನ ಹೇಗೆ ಡ್ರೈವಿಂಗ್ ಮಾಡ್ಬೇಕು ಅಂತ ಮಾತ್ರ ಹೇಳ್ತಿನಿ. ತಿಳ್ಕೋ...
ಸರಿ ಜಗಳ ಸಾಕು ಅಂತೀಯಾ. ವಿಷ್ಯಕ್ಕೆ ಬಾ ಅಂತ ನನ್ನ ಗುರಾಯಿಸಿ ನೋಡ್ತಿಯಾ? ಅಥವಾ ಅದೇನೂ ಹೇಳಬೇಕು ಬೇಗ ಹೇಳಿಬಿಡು ಅಂತೀಯಾ. ಸರಿಯಪ್ಪ. ಅವಸರವೇ ಅಪಾಯಕ್ಕೆ ಕಾರಣ ಅನ್ನೋದನ್ನು ಹೇಳಲು ಇಷ್ಟು ತಡಾ ಮಾಡಿದೆ. ಮುಂದೆ ಇರೋ ಟಿಪ್ಸ್ ಪಾಲಿಸು. ದಯವಿಟ್ಟು ನನ್ನ ಬಗ್ಗೆ ಕಾಳಜಿ ವಹಿಸು. ಅನ್ನೋದು ನನ್ನ ಬೇಡಿಕೆ.
ಯಾರಪ್ಪ ನಿಂಗೆ ಕಲಿಸಿಕೊಟ್ಟದ್ದು, ಗಾಡಿ ಸ್ಟಾರ್ಟ್ ಮಾಡಿ ಸ್ವಲ್ಪ ಹೊತ್ತು ರೇಸ್ ಮಾಡ್ಬೆಕು. ನೀನು ಹಾಗೆ ಮಾಡಿದರೆ ನನ್ನ ಹೃದಯ ಢವ ಢವ ಅನ್ನುತ್ತೆ ಗೆಳೆಯಾ. ಸ್ಟಾರ್ಟ್ ಮಾಡುವಾಗ ಕಾರು ಎಂಜಿನ್ ರೇಸ್ ಮಾಡಬೇಡ. ಮುಖ್ಯವಾಗಿ ಹೊರಗೆ ತಂಪು ಜಾಸ್ತಿ ಇದ್ದಾಗ. ಇದರಿಂದ ಕಾರಿನ ಎಂಜಿನ್ ಆಯಸ್ಸು ಹೆಚ್ಚುತ್ತದೆ.
ಡ್ರೈವ್ ಆರಂಭಿಸುವಾಗ ನಿಧಾನವಾಗಿ ಆಕ್ಸಿಲರೇಟ್ ಕೊಡು. ಸ್ಟಾರ್ಟ್ ಮಾಡಿ ವಿಮಾನದ ಹಾಗೇ ಹೋಗುವ ದುರ್ಬುದ್ದಿ ಬಿಟ್ಟುಬಿಡು. ಕಾರು ಚಾಲನೆ ಸುರು ಮಾಡಿದ ಒಂದುತ್ತು ನಿಮಿಷ ನಿಧಾನವಾಗಿ ಡ್ರೈವ್ ಮಾಡು. ನಮ್ಮ ಎಂಜಿನ್ ಟ್ರೈನ್ ಸರಿಯಾಗಿ ಕಾರ್ಯನಿರ್ವಹಿಸಲು ಅಷ್ಟು ಸಮಯ ಬೇಕು.
ಎಂಜಿನ್ ಮೇಲೆ ಜಾಸ್ತಿ ಒತ್ತಡ ಹಾಕಬ್ಯಾಡ. ಅಂದ್ರೆ ಗಾಡಿ ನಿಂತಿದ್ದರೂ ಎಂಜಿನ್ ಆನ್ ಮಾಡಿ ಇಡಬೇಡ. ಇದರಿಂದ ಎಂಜಿನ್ ಮೇಲೆ ಹೆಚ್ಚು ಒತ್ತಡ ಬೀಳುತ್ತೆ.
ಯಪ್ಪಾ... ಅಷ್ಟೋಂದು ವೇಗದಲ್ಲಿ ನನ್ನ ಚಾಲನೆ ಮಾಡಬೇಡ. ನಾನೇನು ಎಫ್1 ಕಾರಲ್ಲ. ಕ್ವಿಕ್ ಆಗಿ ಆಕ್ಸಿಲರೇಟರ್ ಕೊಡಬೇಡ. ಹೀಗೆ ಮಾಡಿದ್ರೆ ಆಗಾಗ ನನ್ನ ರಿಪೇರಿ ಮಾಡಿಸಬೇಕಾಗುತ್ತದೆ. ನಿನ್ನ ದುಡ್ಡು ಸುಮ್ಮನೆ ವ್ಯರ್ಥವಾದೀತು.
ನನ್ನ ಕಾಲು ಕುರಿತು ಸ್ವಲ್ಪ ಆಲೋಚನೆ ಮಾಡು. ನೀನು ಡ್ರೈವಿಂಗ್ ಮಾಡುವ ಮುನ್ನ ಟೈರ್ ಪರಿಶೀಲನೆ ಮಾಡು. ರಸ್ತೆಯ ಮೇಲೆ ಎಚ್ಚರಿಕೆಯಿಂದ ಚಾಲನೆ ಮಾಡು. ಗುಂಡಿಗಳಿಗೆ ಹಾಕುತ್ತ ಹೋಗಬ್ಯಾಡ. ಅಗತ್ಯವಿಲ್ಲದೇ ಬ್ರೇಕ್ ಹಾಕುತ್ತ ಟೈರ್ ರಬ್ಬರ್ ಸವೆಸದಿರು.
ಸ್ಟಿಯರಿಂಗ್ ವೀಲ್ ತಿರುಗಿಸುವಾಗ ಸಂಪೂರ್ಣವಾಗಿ ಎಡ ಅಥವಾ ಬಲದಲ್ಲಿ ತುಂಬಾ ಹೊತ್ತು ಇಟ್ಟುಕೊಳ್ಳಬೇಡ. ಇದರಿಂದ ಪವರ್ ಸ್ಟಿಯರಿಂಗ್ ಪಂಪ್ ಗೆ ಹಾನಿಯಾಗುತ್ತದೆ. ಒಮ್ಮೆ ಸಂಪೂರ್ಣವಾಗಿ ಸ್ಟಿಯರಿಂಗ್ ತಿರುಗಿಸಿ ಬಿಟ್ಟುಬಿಡು.
ಓಹ್... ನನ್ನ ಚಾಲಕ. ದಯವಿಟ್ಟು ಬೆಳಗ್ಗೆ, ಸಂಜೆ ಟ್ರಾಫಿಕ್ ಹೆಚ್ಚಿರುವ ಸಮಯದಲ್ಲಿ ನಾವು ಪ್ರಯಾಣಿಸುವುದು ಬೇಡ. ಆ ಟ್ರಾಫಿಕ್ ನಲ್ಲಿ ಸಿಲುಕಿ ಉಸಿರುಕಟ್ಟಿಕೊಳ್ಳುವಂತೆ ಆಗುತ್ತದೆ. ಬೇಕಾದ್ರೆ ಆಫೀಸಿಗೆ ಅರ್ಧಗಂಟೆ ಬೇಗ ಹೋಗೋಣ. ಆದಷ್ಟು ಟ್ರಾಫಿಕ್ ಟೈಮ್ ತಪ್ಪಿಸಿಕೊಂಡು ಹೋಗೋಣ.
ಇವತ್ತಿಗೆ ಇಷ್ಟು ನನ್ನ ಸಲಹೆ ಸಾಕು ಕಣೋ... ಇನ್ನೊಮ್ಮೆ ನಿನ್ನ ವಿಚಾರಿಸಿಕೊಳ್ತಿನಿ


Click it and Unblock the Notifications








