ಕಾರನ್ನು ದುರ್ವಾಸನೆ ಮುಕ್ತ ಮಾಡಲು 5 ಸಲಹೆಗಳು
ಸುವಾಸನೆ ಇದ್ದರೆ ಪ್ರಯಾಣ ಸುಮಧುರ. ಸುವಾಸನೆಯುಕ್ತ ಮಾಡುವ ಮೊದಲ ಹೆಜ್ಜೆಯೇ ದುರ್ವಾಸನೆ ಮುಕ್ತ ಮಾಡುವುದು. ದುರ್ವಾಸನೆ ಮುಕ್ತ ಮಾಡಲು ವಾಸನೆಯ ಮೂಲಗಳನ್ನು ಕಂಡುಹಿಡಿಯಬೇಕು. ಇದು ಋಷಿಮೂಲ, ನದಿಮೂಲ ಕಂಡುಹಿಡಿಯುವಷ್ಟು ಕಷ್ಟದ ಕೆಲಸವೇನಲ್ಲ!
ಫ್ರೆಷ್ನರ್ ಬಳಸಿ ಬಳಸಿ ಸಾಕಾಯ್ತು, ಕಾರಿನೊಳಗಿನ ಗಾಟು, ಕೆಟ್ಟವಾಸನೆ ಕಡಿಮೆಯಾಗ್ತಾ ಇಲ್ಲವೆಂದು ಹೇಳುತ್ತೀದ್ದೀರಾ. ಇದಕ್ಕೆ ಪರಿಹಾರ ಕನ್ನಡ ಡ್ರೈವ್ ಸ್ಪಾರ್ಕ್ ಬಳಿಯಿದೆ. ಮುಂದಿನ ಒಂದೊಂದು ಸಲಹೆಗಳನ್ನೂ ಚಾಚುತಪ್ಪದೇ ಪಾಲಿಸಿದರೆ ನಿಮ್ಮ ಕಾರು ಆನಂದಮಯ, ಸುಗಂಧಮಯ.
* ನಿಯಮಿತವಾಗಿ ಕಾರನ್ನು ಸ್ವಚ್ಛಗೊಳಿಸಿ. ವಾಕ್ಯೂಂ ಕ್ಲೀನರ್ ಬಳಸಿ ಸೀಟುಗಳು ಮತ್ತು ಫ್ಲೋರ್ ಬೋರ್ಡ್ ಸ್ವಚ್ಛಗೊಳಿಸಿರಿ. ಕಿಟಕಿ, ಬಾಗಿಲು, ಸಂದುಗೊಂಡು ಶುಭ್ರವಾಗಿರಲಿ. ಕಾರು ವಾಷ್ ಮಾಡಲು ನಮ್ಮಲ್ಲಿ ಡಿಫರೆಂಟ್ ಡಿಫರೆಂಟ್ ಟಿಪ್ಸ್ ಇವೆ. ಪಾಲಿಸಬಹುದು.
* ನೀವು ಧೂಮಪಾನ ಮಾಡುವಿರಾ? ಕೂಡಲೇ ಬಿಟ್ಟುಬಿಡಿ. ಕಾರಿನೊಳಗೆ ಸ್ಮೋಕ್ ಮಾಡುವ ಅಭ್ಯಾಸವಿದ್ದರಂತೂ ಕಾರಿಗೆ ಬೇರೆ ಫ್ರೆಷ್ನರ್ ಅಗತ್ಯವೇ ಇಲ್ಲ. ಏರ್ ಕಂಡಿಷನ್ ಇರೋ ಕಾರುಗಳಿಗಂತೂ ಸ್ಮೋಕಿಂಗ್ ಅಸಹನೀಯ. ಯಾವುದೇ ತಂಬಾಕು ಉತ್ಪನ್ನಗಳು ಕಾರಿನೊಳಗೆ ದುರ್ವಾಸನೆ ಉಂಟುಮಾಡುತ್ತವೆ. ಇದನ್ನು ಬಿಟ್ಟುಬಿಡಿ, ಇದರಿಂದ ಕಾರು ಮತ್ತು ನಿಮ್ಮ ಆರೋಗ್ಯಕ್ಕೆ ಶುಭವಾಗಲಿದೆ.
* ಕಾರಿನೊಳಗೆ ತಿಂಡಿತಿನಿಸು ತಿನ್ನುವಾಗ ಜಾಗ್ರತೆ, ಚೆಲ್ಲಬೇಡಿ. ಕಾರಿನೊಳಗೆ ಬಿದ್ದ ಆಹಾರದ ತುಣುಕುಗಳು ಕೊಂಚ ಸಮಯದಲ್ಲಿ ಕೊಳೆಯಲು ಆರಂಭವಾಗುತ್ತದೆ. ಮಕ್ಕಳಿಗೆ ಕಾರಿನೊಳಗೆ ಆಹಾರ ಕೊಡುವುದನ್ನು ಅವಾಯ್ಡ್ ಮಾಡಿ. ಒಟ್ಟಾರೆ ಕಾರಿನೊಳಗೆ ಉಪಹಾರ, ಫಲಹಾರ, ಬಾಡೂಟ, ತಿಂಡಿತೀರ್ಥ ಸಮಾರಾಧನೆ ಸಲ್ಲದು. ಕಾರಿನೊಳಗೆ ಆಹಾರ ಚೆಲ್ಲಿದರೆ ತಕ್ಷಣ ಕ್ಲೀನ್ ಮಾಡಲು ಮರೆಯದಿರಿ.
* ಕಾರನ್ನು ಸ್ವಚ್ಛಗೊಳಿಸಿದ ನಂತರ ಯಾವುದೇ ಅನಗತ್ಯ ವಸ್ತುಗಳು ಒಳಗೆ ಉಳಿದಿಲ್ಲವೆಂದು ಖಚಿತಪಡಿಸಿಕೊಳ್ಳಿರಿ. ಉದಾಹರಣೆಗೆ ಡ್ರೈವರ್ ಸೀಟಿನಲ್ಲಿ ಏನೆಲ್ಲ ಇರುತ್ತದೆ ಎಂದು ಬಹುಶಃ ಡ್ರೈವರಿಗೆ ಗೊತ್ತಿರಲಿಕ್ಕಿಲ್ಲ. ಅದನ್ನೆಲ್ಲ ತೆಗೆದು ಡ್ರಾಯರೊಳಗೆ ಹಾಕಿಬಿಡಿ.
* ಕಾರಿನಲ್ಲಿ ದುರ್ವಾಸನೆ ಉಂಟು ಮಾಡುವ ಯಾವುದೇ ವಸ್ತುಗಳು ಇಲ್ಲವೆಂದು ನಿತ್ಯ ಖಚಿತಪಡಿಸಿಕೊಳ್ಳಿ. ತದನಂತರ ನಿಮಗೆ ಇಷ್ಟವಾದ ಬ್ರಾಂಡಿನ ಫ್ರೆಷ್ನರ್ ಬಳಸಿ. ತಲೆನೋವು ಉಂಟುಮಾಡುವಂತಹ ಅಗ್ಗದ ಫ್ರೆಷ್ನರ್ ಬಳಸದಿರಿ. ಅದ್ಯಾವುದೂ ಬಳಸಲು ಇಷ್ಟವಿಲ್ಲದಿದ್ದರೆ ಒಂದು ಮೊಳ ಮಲ್ಲಿಗೆಯನ್ನು ಡ್ಯಾಷ್ ಬೋರ್ಡ್ ಮುಂದೆ ನೇತಾಡಿಸಿ(ಅದು ಕೊಳೆಯೋ ಮುನ್ನ ಬಿಸಾಕಲು ಮರೆಯದಿರಿ). ನಿಮ್ಮ ಕಾರು ಸುವಾಸನೆಯಿಂದ ಕೂಡಿರುತ್ತದೆ.
ಕಾರಿನೊಳಗಿನ ಮಧುರ ಪರಿಮಳ ಪ್ರಯಾಣವನ್ನು ಅಹ್ಲಾದಗೊಳಿಸಲಿದೆ.


Click it and Unblock the Notifications









