Monsoon Car Care: ಮಳೆಗಾಲದಲ್ಲಿ ವಿಂಡ್‌ಶೀಲ್ಡ್ ವೈಪರ್‌ಗಳ ರಕ್ಷಣೆಗೆ ಪ್ರಮುಖ ಸಲಹೆಗಳು
ಓದುಗರೇ ಮಾನ್‌ಸೂನ್ ಬಂದೇ ಬಿಟ್ಟಿದೆ, ನಿತ್ಯ ಯಾವ ಸಮಯದಲ್ಲಿ ಮಳೆ ಬರುತ್ತದೆಯೋ ತಿಳಿದೇ ಇಲ್ಲ. ವರ್ಷದಲ್ಲಿ ಎದುರಾಗುವ ಮೂರು ಸೀಸನ್‌ಗಳಲ್ಲೂ ಎಲ್ಲಾ ರೀತಿಯ ವಾತಾವರಣಗಳನ್ನು ನಮ್ಮ ಕಾರುಗಳು ಎದುರಿಸಬೇಕಾದರೆ ನಾವು ಕೂಡ ಮುನ್ನೆಚ್ಚರಿಕೆ ವಹಿಸಬೇಕು. ಪ್ರಮುಖವಾಗಿ ವಿಂಡ್‌ಶೀಲ್ಡ್ ಬಗ್ಗೆ ಜಾಗರೂಕರಾಗಿರಬೇಕು.
ಮಳೆಗಾಲದಲ್ಲಿ ವಿಂಡ್‌ಶೀಲ್ಡ್‌ಗೆ ಪ್ರಮುಖ ರಕ್ಷಣೆಯಾಗಿರುವ ವೈಪರ್‌ಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಏಕೆಂದರೆ ವಿಂಡ್‌ಶೀಲ್ಡ್ ವೈಪರ್‌ಗಳು ಅತ್ಯಂತ ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಿಂದ ಸುರಕ್ಷಿತವಾಗಿರಲು ನಮಗೆ ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹಾಗಾಗಿ ಕಾರಿನ ವಿಂಡ್‌ಶೀಲ್ಡ್ ವೈಪರ್‌ಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುವ ಪ್ರಮುಖ ಸಲಹೆಗಳು ಇಲ್ಲಿವೆ.

ವೈಪರ್ ಬ್ಲೇಡ್‌ಗಳನ್ನು ಸ್ವಚ್ಛವಾಗಿಡಿ: ನಿಮ್ಮ ಕಾರಿನ ವೈಪರ್‌ಗಳನ್ನು ಮಳೆಗಾಲಕ್ಕೂ ಮುನ್ನ ಅತಿಯಾಗಿ ಬಳಸುವುದಿಲ್ಲ ಅಲ್ಲವೇ? ಹಾಗಾಗಿ ವೈಪರ್ ಬ್ಲೇಡ್‌ಗಳನ್ನು ಮಾನ್ಸೂನ್ ಆರಂಭವಾಗುವ ಸಮಯದಲ್ಲಿ ಬಳಸಲು ಮುಂದಾದಾಗ ಅವು ಶಬ್ದ ಮಾಡುವುದನ್ನು ನೀವು ಗಮನಿಸಿರಬಹುದು. ಈ ಶಬ್ದವು ವೈಪರ್ ಬ್ಲೇಡ್‌ಗಳು ಮತ್ತು ವಿಂಡ್ ಷೀಲ್ಡ್ ನಡುವಿನ ಘರ್ಷಣೆಯಿಂದ ಬರುತ್ತದೆ. ಹೀಗಿದ್ದಾಗ ಒಮ್ಮೆ ಅವನ್ನು ಪರಿಶೀಲಿಸಿ ಬದಲಿಸುವ ಅವಶ್ಯಕತೆ ಇದ್ದರೆ ಕೂಡಲೇ ಬದಲಿಸಿ.
ಒಂದು ವೇಳೆ ಅವುಗಳನ್ನು ಬದಲಿಸಲಾಗದಿದ್ದರೇ ನಿಮ್ಮ ಬ್ಲೇಡ್‌ಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರ್ ಬಟ್ಟೆ ಮತ್ತು ನೀರನ್ನು ಬಳಸಿಕೊಂಡು ಸ್ವಚ್ಚಗೊಳಿಸಿ. ಆದರೂ ಕೂಡ ಈ ಸ್ಕ್ರೀಚಿಂಗ್ ಶಬ್ದವು ಮುಂದುವರಿದರೆ, ರಬ್ಬರ್ ಅನ್ನು ಮೃದುಗೊಳಿಸಲು ನೀವು ವ್ಯಾಸಲೀನ್ ಅನ್ನು ಬಳಸಬಹುದು. ಆದ್ರೂ ವೈಪರ್ ಕಳಪೆಯಾಗಿ ವ್ಯವಹರಿಸಿದರೆ ಕೂಡಲೇ ಬದಲಿಸುವುದು ಉತ್ತಮ ಎಂಬುದು ನಮ್ಮ ಸಲಹೆ.

ವಿಂಡ್‌ಶೀಲ್ಡ್ ಸ್ವಚ್ಛವಾಗಿಡಿ: ನೀವು ಕೊಳಕು ವಿಂಡ್‌ಶೀಲ್ಡ್‌ನಲ್ಲಿ ನಿಮ್ಮ ವೈಪರ್‌ಗಳನ್ನು ಆನ್ ಮಾಡಿದರೆ, ವೈಪರ್ ಬ್ಲೇಡ್‌ಗಳನ್ನು ಹಾನಿಗೊಳಿಸುವುದಲ್ಲದೆ ವಿಂಡ್‌ಶೀಲ್ಡ್‌ನಲ್ಲಿ ಗೀರುಗಳಿಗೆ ಕಾರಣವಾಗಬಹುದು. ನಿಮ್ಮ ವಿಂಡ್‌ಶೀಲ್ಡ್ ಅನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮಾರ್ಗವೆಂದರೆ ಮೈಕ್ರೋಫೈಬರ್ ಬಟ್ಟೆ ಮತ್ತು ಗಾಜಿನ ಕ್ಲೀನರ್ ಅನ್ನು ಬಳಸುವುದು. ಬೇರೆ ಯಾವುದೇ ಬಟ್ಟೆಯನ್ನು ಬಳಸುವುದರಿಂದ ನಿಮ್ಮ ವಿಂಡ್‌ಶೀಲ್ಡ್‌ಗೆ ಹಾನಿಯಾಗಬಹುದು.
ವೈಪರ್ ಬ್ಲೇಡ್‌ಗಳನ್ನು ಯಾವಾಗ ಬದಲಾಯಿಸಬೇಕು: ಮೇಲಿನ ಎಲ್ಲಾ ಸಲಹೆಗಳು ನಿಮ್ಮ ವೈಪರ್ ಬ್ಲೇಡ್‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತವೆಯಾದರೂ, ಅವು ಅಂತಿಮವಾಗಿ ಸವೆಯುತ್ತವೆ. ನಿಮ್ಮ ವಿಂಡ್‌ಶೀಲ್ಡ್‌ಗೆ ಯಾವುದೇ ಹಾನಿಯಾಗದಂತೆ ತಡೆಯಲು ನಿಮ್ಮ ವೈಪರ್ ಬ್ಲೇಡ್‌ಗಳನ್ನು ಸಮಯಕ್ಕೆ ಬದಲಾಯಿಸುವುದು ಬಹಳ ಮುಖ್ಯ. ಹಾಗಾದ್ರೆ ವೈಪರ್‌ಗಳನ್ನು ಬದಲಿಸುವ ಸಮಯ ಬಂದಿದೆ ಎಂದು ತಿಳಿಯುವುದೇಗೆ?
ವೈಪರ್‌ನಲ್ಲಿನ ರಬ್ಬರ್ ಹರಿದಿದ್ದರೆ, ಒಡೆದು ಅಥವಾ ಬಿರುಕು ಬಿಟ್ಟರೆ, ಬ್ಲೇಡ್‌ನಿಂದ ನೀರಿನ ತೇಪೆಗಳನ್ನು ನೀವು ನಿರಂತರವಾಗಿ ನೋಡಿದರೆ ಅಥವಾ ನೀವು ಚೌಕಟ್ಟುಗಳಲ್ಲಿ ತುಕ್ಕು ಅಥವಾ ಲೋಹದ ತುಕ್ಕು ನೋಡಿದರೆ ನಿಮ್ಮ ವಿಂಡ್‌ಶೀಲ್ಡ್ ವೈಪರ್ ಬ್ಲೇಡ್‌ಗಳನ್ನು ತಕ್ಷಣವೇ ಬದಲಾಯಿಸಬೇಕು. ಇಲ್ಲದಿದ್ದರೇ ಕಳಪೆ ವೈಪರ್‌ಗಳಿಂದ ವಿಂಡ್‌ಶೀಲ್ಡ್ ಹಾಳಾಗುತ್ತದೆ. ಜೊತೆಗೆ ವಿಂಡ್‌ಶೀಲ್ಡ್ ಅನ್ನೇ ಬದಲಿಸಬೇಕಾಗುತ್ತದೆ.
ಒಣ ವಿಂಡ್‌ಶೀಲ್ಡ್‌ನಲ್ಲಿ ವೈಪರ್ ಓಡಿಸಬೇಡಿ: ವೈಪರ್ ಬ್ಲೇಡ್‌ಗಳನ್ನು ಮಳೆಯಲ್ಲಿ ಬಳಸಲು ಉದ್ದೇಶಿಸಲಾಗಿದೆ. ಆದ್ದರಿಂದ ವಿಂಡ್‌ಶೀಲ್ಡ್ ಒಣಗಿದಾಗ ನೀವು ಅವುಗಳನ್ನು ಆನ್ ಮಾಡಿದರೆ, ಅದು ಘರ್ಷಣೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ನೀವು ಚಾಲನೆ ಮಾಡುವಾಗ ಅವುಗಳನ್ನು ಆನ್ ಮಾಡಬೇಕಾದರೆ, ವಾಷರ್ ಫ್ಲೂಯಿಡ್ ಸ್ಪ್ರೇ ಮೋಡ್ ಅನ್ನು ಬಳಸಿ. ಬಿಡುಗಡೆಯಾದ ಸಾಬೂನು ನೀರು ಘರ್ಷಣೆಯನ್ನು ಕಡಿಮೆ ಮಾಡುತ್ತದೆ.
ಸ್ಕ್ರೂಗಳನ್ನು ಆಗಾಗ್ಗೆ ಬಿಗಿಗೊಳಿಸಿ: ಹವಾಮಾನ ಮತ್ತು ನಿಯಮಿತವಾಗಿ ವೈಪರ್‌ಗಳನ್ನು ಬಳಸುವಾಗ ನಮಗೆ ತಿಳಿಯದಂತೆ ಅವುಗಳ ಸ್ಕ್ರೂಗಳು ದುರ್ಬಲಗೊಳಿಸಬಹುದು. ನಿಯಮಿತ ಮಧ್ಯಂತರದಲ್ಲಿ ವೈಪರ್ ಬ್ಲೇಡ್‌ಗಳಲ್ಲಿನ ಸ್ಕ್ರೂಗಳನ್ನು ಪರಿಶೀಲಿಸುವುದು ಮತ್ತು ಯಾವುದೇ ಸಮಸ್ಯೆಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.


Click it and Unblock the Notifications








