ಕಾರು ಖರೀದಿ ಗೊಂದಲಕ್ಕೆ ಟೆಕ್ಕಿ ಅರವಿಂದನ ಟ್ರಿಕ್
ಬೆಂಗಳೂರಿನ ಲಿಂಬರ್ಲಿಂಕ್ ಟೆಕ್ನಾಲಜಿಸ್‌ನಲ್ಲಿ ಪ್ರಿನ್ಸಿಪಲ್ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಕನ್ನಡಿಗ ಹಳ್ಳಿಮನೆ ಅರವಿಂದ್‌ಗೂ ಇದೇ ತರಹದ ಗೊಂದಲ ಮೂಡಿತ್ತಂತೆ.
"ನಾನು ಕಾರ್ ಕೊಳ್ಳುವ ಸಮಯದಲ್ಲಿ ಬಹಳಷ್ಟು ಜನರನ್ನ/ಸ್ನೇಹಿತರನ್ನ ಯಾವ ಕಾರು ತಗೊಂಡರೆ ಒಳ್ಳೆಯದು ಪೆಟ್ರೋಲ್ ಅಥವಾ ಡೀಸಲ್ ಅಂತ ಕೇಳಿದಾಗ, ಈಗಿನ ದರವನ್ನು ಮಾತ್ರ ನೋಡಿಕೊಂಡು ಡೀಸಲ್ ಕಾರೇ ಒಳ್ಳೇದು ಅಂತಾ ಇದ್ರು.."
"ಇನ್ನು ಕೆಲವರು ಪ್ರತೀ ತಿಂಗಳು 1 ಸಾವಿರ ಕಿ.ಮೀ. ಓಡಿಸೋದಾದ್ರೆ ಡೀಸೆಲ್ ಕಾರ್ ತಗೋ ಇಲ್ಲಾ ಅಂದ್ರೆ ಪೆಟ್ರೋಲ್ ಕಾರ್ ತಗೋ ಅಂದ್ರು, ಆದರೆ 1 ಸಾವಿರ ಕಿ.ಮೀ. ಅಂತ ತೀರ್ಮಾನಿಸಿದ್ದು ಹೇಗೆ? 500 ಯಾಕಲ್ಲ ಅನ್ನೋ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ"
ಎಷ್ಟಾದರೂ ಸಾಫ್ಟ್‌ವೇರ್ ಮೈಂಡ್ ಅಲ್ವೆ? ಈಗಿನ ದರ ಮಾತ್ರವಲ್ಲದೇ ಬೇರೆ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕಾರು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರಿಗೆ ಅನಿಸಿತ್ತಂತೆ. "ಮೊದಲಿಗೆ ಲಿಬ್ರೆ ಆಫೀಸ್ ತಂತ್ರಾಂಶ ಬಳಸಿ ಲೆಕ್ಕ ಮಾಡಿ ನೋಡಿದೆ, ನಂತರ ಅಂಕೆಗಳನ್ನು ಬದಲಾಯಿಸಿಕೊಂಡು ನೋಡಿದೆ. ನನ್ನ ಕಾರ್ ಆಯ್ಕೆಗೆ ಉಪಯೋಗ ಆಯ್ತು" ಎನ್ನುತ್ತಾರೆ.
ಈ ಲೆಕ್ಕಾಚಾರದ ನೆರವಿನಿಂದ ಅರವಿಂದ್ ಫಿಯೆಟ್ ಪುಂಟೊ ಡೀಸೆಲ್ ಕಾರು ಖರೀದಿಸಿದ್ರು. ನಾನೇನೋ ಈ ಸಮಸ್ಯೆಯಿಂದ ಪಾರಾದೆ. ಬೇರೆಯವರು ಕೂಡ ಇದೇ ರೀತಿಯ ದ್ವಂದ್ವದಲ್ಲಿ ಇರುತ್ತಾರಲ್ವ ಎಂದು ಅರವಿಂದ್ ಗೆ ಅನ್ನಿಸಿತು. ಪರಿಣಾಮವಾಗಿ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ಆಯ್ಕೆಯ ಗೊಂದಲದಲ್ಲಿರುವ ಸಮಸ್ತರಿಗೂ ನೆರವಾಗುವ ಅಪ್ಲಿಕೇಷನೊಂದನ್ನು ಅವರು ರೂಪಿಸಿದ್ದಾರೆ.
ಸಾಲದ ಅವಧಿ, ಮೊತ್ತ, ಬಡ್ಡಿದರ ಮತ್ತು ಪ್ರತಿತಿಂಗಳಿಗೆ ಅಂದಾಜು ಪ್ರಯಾಣಿಸುವ ಕಿ.ಮೀ. ಮಾಹಿತಿಯನ್ನು ಈ ತಾಣದಲ್ಲಿ ನೀಡಬೇಕು. ಆಮೇಲೆ ಖರೀದಿಸಲು ಆಯ್ದುಕೊಂಡ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬೆಲೆ, ಮೈಲೇಜ್ ಮತ್ತು ಪ್ರಸಕ್ತ ಇಂಧನ ದರ ನೀಡಬೇಕು.
ಈ ಅಪ್ಲಿಕೇಷನ್ ಈಗ ಸಾಕಷ್ಟು ಅಪ್‌ಡೇಟ್ ಆಗಿದೆ. ಈಗ ಅದರಲ್ಲಿ ಕಾರಿನ ವಾರ್ಷಿಕ ನಿರ್ವಹಣೆ ವೆಚ್ಚವನ್ನೂ ತಿಳಿದುಕೊಳ್ಳಬಹುದು. ಈ ಮಾಹಿತಿಯ ಆಧಾರದಲ್ಲಿ ಮುಂದಿನ ಹದಿನೈದು ವರ್ಷಗಳಲ್ಲಿ ಈ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಲ್ಲಿ ಯಾವುದು ಸೂಕ್ತ ಎಂಬ ಸ್ಪಷ್ಟ ಮಾಹಿತಿ ನೀಡುತ್ತದೆ. ಇಎಂಐ ಮಾಹಿತಿಯೂ ದೊರಕುತ್ತದೆ.
"ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳಲ್ಲಿ ಯಾವುದು ಒಳ್ಳೆಯದು ಎಂದು ಈ ಸಾಧನ ಹೇಳೋದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಲೆಕ್ಕಹಾಕಲು ಇದು ಸಹಾಯ ಮಾಡುತ್ತೆ" ಎಂದು ಅರವಿಂದ್ ಹೇಳುತ್ತಾರೆ. ಈ ಅಪ್ಲಿಕೇಷನ್ ಸೋರ್ಸ್ ಕೂಡ ಲಭ್ಯವಿದೆ.
ಕಾರು ಖರೀದಿ ಕುರಿತಾದ ಗೊಂದಲವಿರುವರು ಈ ತಾಣಕ್ಕೆ ಭೇಟಿ ನೀಡಬಹುದು. ಅಂದಹಾಗೆ ಅರವಿಂದ್ ಬತ್ತಳಿಕೆಯಲ್ಲಿ ಇದೊಂದೇ ಅಪ್ಲಿಕೇಷನ್ ಇರುವುದಲ್ಲ. ಕನ್ನಡ ಫಾಂಟುಗಳನ್ನು ಯೂನಿಕೋಡಿಗೆ ಪರಿವರ್ತಿಸುವ ಅಪ್ಲಿಕೇಷನ್ ಕೂಡ ರೂಪಿಸಿದ್ದಾರೆ. ಗುಬ್ಬಿ ಮತ್ತು ನವಿಲು ಕನ್ನಡ ಫಾಂಟ್ ಸೇರಿದಂತೆ ಅವರ ಇನ್ನಷ್ಟು ಕೊಡುಗೆಗಳನ್ನುಮತ್ತು ಆಸಕ್ತಿಗಳನ್ನು ತಿಳಿಯಲು ಅವರ ಬ್ಲಾಗಿಗೆ ಭೇಟಿ ನೀಡಬಹುದು.
ಮುಕ್ತ ತಂತ್ರಾಂಶ ರಚಿಸಿ ಕಾರು ಖರೀದಿ ಗೊಂದಲ ಪರಿಹರಿಸುವ ಅಪ್ಲಿಕೇಷನ್ ರಚಿಸಿದ ಅರವಿಂದ್‌ಗೆ ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಅಭಿನಂದನೆ. ಅವರಿಂದ ಇನ್ನಷ್ಟು ಅನ್ವೇಷಣೆಗಳನ್ನು ನಾವು ನಿರೀಕ್ಷಿಸೋಣ.
ಕಾರು ಖರೀದಿದಾರರಿಗೆ ನೆರವಾಗುವ ಡ್ರೈವ್‌ಸ್ಪಾರ್ಕ್ ಮ್ಯಾಜಿಕ್ ಟೂಲ್


Click it and Unblock the Notifications









