ದೃಷ್ಟಿ ಪರೀಕ್ಷೆ: ಚಾಲನೆ ಮಾಡುವಾಗ ನಿಮ್ಗೆ ಕಣ್ ಕಾಣುತ್ತ?
ಡ್ರೈವಿಂಗ್ ಮಾಡುವಾಗ ನಮ್ಮ ದೃಷ್ಟಿ ಸ್ಪಷ್ಟವಾಗಿ, ನಿಖರವಾಗಿ ಇರುವುದು ಅಗತ್ಯ. ಲೈಸನ್ಸ್ ಪಡೆಯುವ ಸಮಯದಲ್ಲಿ ಕಣ್ಣು ಸರಿಯಾಗಿ ಕಾಣುತ್ತಿದ್ದಿರಬಹುದು. ಆದೆರೆ ಕೆಲವು ವರ್ಷಗಳ ನಂತರ ನಂತರ ದೃಷ್ಟಿ ಮಸುಕಾಗಬಹುದು. ಚಾಲನೆ ಮಾಡುವಾಗ ಸಮರ್ಪಕವಾಗಿ ಕಾಣುತ್ತಿಲ್ಲವೆಂದು ಅರಿವಾದರೆ, ಮಸುಕು ಮಸುಕು ಅನುಭವವಾದರೆ ಕಣ್ಣಿನ ಡಾಕ್ಟರನ್ನು ಭೇಟಿಯಾಗಲು ಮರೆಯದಿರಿ. ಅವರ ಸಲಹೆ ಮೇರೆಗೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಬಳಸಿರಿ.
ಕೆಲವೊಮ್ಮೆ ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಕಾಣಬಹುದು. ಆದರೆ ದೂರದಲ್ಲಿ ಬರುತ್ತಿರುವ ವಾಹನ ಮಸುಕಾಗಿ ಕಾಣಬಹುದು. ವಾಹನ ಅಪಘಾತಗಳು 0.4 ಸೆಕೆಂಡಿನಲ್ಲಿ ಸಂಭವಿಸುವ ಸಾಧ್ಯತೆ ಇರುವುದರಿಂದ ನಿಮ್ಮ ದೃಷ್ಟಿ ಸಮರ್ಪಕವಾಗಿರುವುದು ಮುಖ್ಯ.
ದೃಷ್ಟಿದೋಷವಿದ್ದರೆ ರಸ್ತೆಯಲ್ಲಿ ತಕ್ಷಣ ಅಡ್ಡಬರುವ ಪಾದಚಾರಿಗಳು, ಪ್ರಾಣಿಗಳು ನಿಮಗೆ ಅರಿವಾಗದು. ಅರಿವಾದರೂ ನಿಮ್ಮ ಪ್ರತಿಕ್ರಿಯೆ(ಬ್ರೇಕ್ ಹಾಕುವುದು, ಸ್ಟಿಯರಿಂಗ್ ತಿರುಗಿಸುವುದು) ತಡವಾಗಬಹುದು. ದೃಷ್ಟಿದೋಷವಿದ್ದರೆ ಸೈಡ್ ಮಿರರಿನಲ್ಲಿ ಹಿಂಭಾಗದಲ್ಲಿ ಬರುವ ವಾಹನಗಳ ಕುರಿತು ಸ್ಪಷ್ಟವಾಗಿ ಅರಿವಾಗದು.
ಲೇನ್ ಬದಲಾಯಿಸುವುದು, ಇತರ ವಾಹನ ಓವರ್ ಟೇಕ್ ಮಾಡುವುದು ಇತ್ಯಾದಿ ಸಮಯದಲ್ಲಿ ನಮ್ಮ ಕಣ್ಣಿನ ದೃಷ್ಟಿ ಸಮರ್ಕವಾಗಿರುವುದು ಮುಖ್ಯ. ಅದರಲ್ಲೂ ಸಂಚಾರಿ ದಟ್ಟಣೆ ಇರುವ ಸಂದರ್ಭದಲ್ಲಿ ಮೈಯೆಲ್ಲ ಕಣ್ಣಾಗಿರಬೇಕು. ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಹೀಗಾಗಿ ನಿಮ್ಮ ಕಣ್ಣು ನಿಮಗೆ ಸಹಕರಿಸುವಂತೆ ಇರಲಿ. ನಿಯಮಿತವಾಗಿ ಕಣ್ಣಿನ ಡಾಕ್ಟರನ್ನು ಭೇಟಿಯಾಗುತ್ತ ಇರಿ.
ಹೆಚ್ಚಿನ ಜನರಿಗೆ ಸುಮಾರು 45ರ ಆಸುಪಾಸಿನ ವಯಸಿನಲ್ಲಿ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಕಾರಿನ ಡ್ಯಾಷ್ ಬೋರ್ಡಿನಲ್ಲಿರುವ ವಸ್ತುಗಳು ಸ್ಪಷ್ಟವಾಗಿ ಕಾಣದೇ ಇರಬಹುದು. ಇಂತಹ ಸಮಯದಲ್ಲಿ ಕನ್ನಡಕ ಬಳಸಿರಿ.
ಇರುಳು ಕುರುಡುತನ ಕೆಲವರ ಸಮಸ್ಯೆ. ರಾತ್ರಿಯಲ್ಲಿ ವಿವಿಧ ಲೈಟ್ ಬೆಳಕಿನಲ್ಲಿ ರಸ್ತೆ ಸ್ಪಷ್ಟವಾಗಿ ಕಾಣದು. ರಾತ್ರಿ ಕುರುಡುತನವಿದ್ದರೆ ನಿಧಾನವಾಗಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ.
ವಾಹನ ಚಾಲನೆಯಲ್ಲಿ ಬಣ್ಣಗಳನ್ನು ಗುರುತು ಹಿಡಿಯುವ ಸಾಮರ್ಥ್ಯ ಇರಬೇಕು. ಟ್ರಾಫಿಕ್ ಲೈಟ್, ಇಂಡಿಕೇಟರ್ ಸೈನ್, ಅಪಾಯದ ಸಂದರ್ಭದಲ್ಲಿ ಎಚ್ಚರಿಸುವ ಲೈಟ್ ಗಳು ಇವೆಲ್ಲವು ಬಣ್ಣಗಳ ಸೂಚನೆಯಾಗಿದೆ. ದೃಷ್ಟಿದೋಷವಿದ್ದು ಬಣ್ಣಗಳನ್ನು ಗುರುತಿಸಲು ಕಣ್ಣು ವಿಫಲವಾದರೆ ಸುರಕ್ಷತೆಗೆ ಅಪಾಯ.
ವಾಹನ ಪ್ರಯಾಣ ಸುರಕ್ಷಿತವಾಗಿರಬೇಕಾದರೆ ವೈಂಡ್ ಸ್ಕ್ರೀನ್, ಕನ್ನಡಿಗಳನ್ನು, ಸನ್ ಗ್ಲಾಸ್ ಗಳನ್ನು, ಲೈಟ್ ಗಳನ್ನು ಶುಭ್ರವಾಗಿಡಿ. ರಿಯರ್ ಮಿರರನ್ನು ಆಗಾಗ ನೋಡುತ್ತಿರಿ. ರಸ್ತೆಯನ್ನು ಎಚ್ಚರಿಕೆಯಿಂದ ನೋಡುತ್ತ ಡ್ರೈವಿಂಗ್ ಮಾಡಿ. ರಸ್ತೆ ಸ್ಪಷ್ಟವಾಗಿ ಕಾಣದ ಸಂದರ್ಭದಲ್ಲಿ ನಿಧಾನವಾಗಿ ವಾಹನ ಚಾಲನೆ ಮಾಡಿ. ರಾತ್ರಿ ಪ್ರಯಾಣದಲ್ಲಿ ಸನ್ ಗ್ಲಾಸ್ ಬಳಸದಿರಿ. ಆಲ್ಕೋ ಹಾಲ್ ಅಥವಾ ಡ್ರಗ್ ಸೇವಿಸಿ ಡ್ರೈವಿಂಗ್ ಮಾಡದಿರಿ. ಕಣ್ಣಿನ ಡಾಕ್ಟರನ್ನು ಆಗಾಗ ಭೇಟಿಯಾಗುತ್ತ ಇರಿ.


Click it and Unblock the Notifications









