ಲಾರಿ ಡ್ರೈವರ್‍ಗಳು ಬಿಚ್ಚಿಟ್ಟ ಭಯಾನಕ ಸತ್ಯ..!
ಪ್ರಪಂಚದಲ್ಲಿರುವ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ಪ್ರತಿದಿನ ಅಪಘಾತಗಳು ಸಂಭವಿಸುತ್ತವೆಯಾದರೂ, ಭಾರತದ ಪರಿಸ್ಥಿತಿ ಉಳಿದ ದೇಶಗಳಿಗಿಂತ ಹದಗೆಟ್ಟಿದೆ. ಪ್ರತಿ ವರ್ಷ ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ 1.50 ಲಕ್ಷಕ್ಕೂ ಹೆಚ್ಚು ಜನರು ಮೃತಪಡುತ್ತಾರೆ.

ಸಂಚಾರಿ ನಿಯಮಗಳ ಉಲ್ಲಂಘನೆ ಬಹುತೇಕ ಎಲ್ಲಾ ವಾಹನ ಸವಾರರಿಂದ ನಡೆಯುತ್ತಲೇ ಇರುತ್ತದೆ. ರಸ್ತೆ ಅಪಘಾತಗಳಿಗೆ ಇದೇ ಪ್ರಮುಖ ಕಾರಣವಾಗಿದೆ. ದ್ವಿ ಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳ ಸವಾರರಂತೆ ಲಾರಿ ಚಾಲಕರೂ ಸಹ ಅಪಘಾತಗಳಿಗೆ ಪ್ರಮುಖ ಕಾರಣರಾಗುತ್ತಾರೆ. ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ಲಾರಿಗಳು ಮೂರನೇ ಸ್ಥಾನದಲ್ಲಿವೆ.

2018ರಲ್ಲಿ ಲಾರಿ, ಟ್ರಕ್‍ಗಳಿಂದ 57,441 ಅಪಘಾತಗಳು ಸಂಭವಿಸಿದ್ದವು. ಈ ಪೈಕಿ 23,668 ಜನರು ದಾರುಣವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನವದೆಹಲಿಯ ಸೇವ್ ಲೈಫ್ ಫೌಂಡೇಷನ್ ಲಾರಿ ಡ್ರೈವರ್‍ಗಳಿಗೆ ಸಂಬಂಧಪಟ್ಟ ಸಮೀಕ್ಷೆಯನ್ನು ಕೈಗೊಂಡಿತ್ತು.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಸಹಭಾಗಿತ್ವದಲ್ಲಿ 1,200 ಕ್ಕೂ ಅಧಿಕ ಟ್ರಕ್, ಲಾರಿ ಡ್ರೈವರ್‍ಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಜೈಪುರ್, ಅಹಮದಾಬಾದ್, ಗುವಾಹಟಿ, ಕಾನ್ಪುರ್ ಹಾಗೂ ವಿಜಯವಾಡದಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು.

ಈ ಸಮೀಕ್ಷೆಯ ವಿವರಗಳನ್ನು ಈಗ ಪ್ರಕಟಿಸಲಾಗಿದೆ. ಇದರಲ್ಲಿ ಹಲವಾರು ಬೆಚ್ಚಿ ಬೀಳುವ ಸಂಗತಿಗಳು ಹೊರಬಿದ್ದಿವೆ. ಪ್ರತಿ ಐದು ಟ್ರಕ್ ಚಾಲಕರಲ್ಲಿ ಒಬ್ಬ ಚಾಲಕ, ಟ್ರಕ್ ಚಾಲನೆ ಮಾಡುವ ವೇಳೆಯಲ್ಲಿ ಕುಡಿದು ಚಾಲನೆ ಮಾಡುವ ಭಯಾನಕ ಸತ್ಯವು ಹೊರ ಬಂದಿದೆ. ಇದು ಸಾರ್ವಜನಿಕರ ಬೆಚ್ಚಿ ಬೀಳುವ ಸಂಗತಿಯಾಗಿದೆ.

ಕುಡಿದು ವಾಹನ ಚಾಲನೆ ಮಾಡುವುದು ಅಪರಾಧವೆಂದು ತಿಳಿದಿದ್ದರೂ ಸಹ ಲಾರಿ ಚಾಲಕರೇ ಸ್ವತಃ ನೀಡಿರುವ ಈ ಹೇಳಿಕೆಯಿಂದ ಟ್ರಕ್‍ಗಳಿಂದ ಹೆಚ್ಚಿನ ಪ್ರಮಾಣದ ಅಪಘಾತಗಳು ಏಕೆ ಸಂಭವಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆಯಾಸಗೊಂಡಿದ್ದರೂ, ನಿದ್ದೆ ಮಂಪರಿನಲ್ಲಿದ್ದರೂ ಸಹ ಬಹುತೇಕ ಚಾಲಕರು ವಾಹನ ಚಾಲನೆ ಮಾಡುವುದಾಗಿ ಹೇಳಿದ್ದಾರೆ.

ಪ್ರತಿ ಡ್ರೈವರ್ ಸರಾಸರಿಯಾಗಿ ಪ್ರತಿದಿನ 12 ಗಂಟೆಗಳ ಕಾಲ ಟ್ರಕ್, ಲಾರಿ ಚಾಲನೆ ಮಾಡುವುದು ಈ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಸಮೀಕ್ಷೆಗೆ ಒಳಗಾಗಿದ್ದ ಚಾಲಕರ ಪೈಕಿ 50%ನಷ್ಟು ಜನರು ಪ್ರತಿದಿನ ಲಾರಿ ಚಾಲನೆ ಮಾಡುವುದಾಗಿ ತಿಳಿಸಿದ್ದಾರೆ. ಲಾರಿ ಚಾಲಕರು ಕುಡಿದು ಲಾರಿ ಚಾಲನೆ ಮಾಡುವ ಪ್ರಮಾಣವು ಕೊಲ್ಕತ್ತಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.

ಇದರ ನಂತರದ ಸ್ಥಾನಗಳಲ್ಲಿ ಕಾನ್ಪುರ ಹಾಗೂ ದೆಹಲಿ ನಗರಗಳಿವೆ. ಈ ಸಮೀಕ್ಷೆಯಲ್ಲಿ ಲಾರಿ ಡ್ರೈವರ್‍ಗಳ ಎರಡು ಪ್ರಮುಖ ಅಂಶಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಎರಡು ಅಂಶಗಳಲ್ಲಿ ಕೆಲಸ, ಆರೋಗ್ಯ ಹಾಗೂ ಹಣಕಾಸು ಸ್ಥಿತಿಗೆ ಮೊದಲ ಸ್ಥಾನ ನೀಡಲಾಗಿದೆ. ಲಾರಿ ಉದ್ಯಮದಲ್ಲಿರುವ ಭ್ರಷ್ಟಾಚಾರಕ್ಕೆ ಎರಡನೇ ಸ್ಥಾನ ನೀಡಲಾಗಿದೆ.

53%ಗೂ ಹೆಚ್ಚಿನ ಟ್ರಕ್ ಡ್ರೈವರ್‍ಗಳು ತಮ್ಮ ಕೆಲಸದ ಬಗ್ಗೆ ತೃಪ್ತಿಯನ್ನು ಹೊಂದಿಲ್ಲ. ಹೆಚ್ಚು ಖರ್ಚು, ಕಡಿಮೆ ಆದಾಯ, ಅಧಿಕಾರಿಗಳ ಕಿರುಕುಳ ಹಾಗೂ ಹೆಚ್ಚು ಕೆಲಸದ ಅವಧಿ ಇದಕ್ಕೆ ಮುಖ್ಯ ಕಾರಣವಾಗಿದೆ. ಅನಾರೋಗ್ಯವು ಸಹ ಟ್ರಕ್ ಡ್ರೈವರ್‍ಗಳ ಅತೃಪ್ತಿಗೆ ಕಾರಣವಾಗಿದೆ.

ಹೆಚ್ಚಿನ ಅವಧಿಯವರೆಗೆ ಟ್ರಕ್ ಚಾಲನೆ ಮಾಡುವ ಕಾರಣಕ್ಕೆ ಟ್ರಕ್ ಚಾಲಕರು ಬೆನ್ನು ನೋವು, ಕತ್ತು ನೋವು ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಕಾರಣಗಳಿಗಾಗಿಯೂ ಸಹ ತಮ್ಮ ಕೆಲಸದ ಬಗ್ಗೆ ಅತೃಪ್ತಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ.


Click it and Unblock the Notifications