Toll Charges: 2026ರ ವೇಳೆಗೆ ದೇಶವ್ಯಾಪಿ AI ಟೋಲ್ ಸಂಗ್ರಹ ವ್ಯವಸ್ಥೆ ಜಾರಿ.. ಯಾವ ರೀತಿ ಶುಲ್ಕ ಕಡಿತ ಆಗುತ್ತೆ?
ದೇಶಾದ್ಯಂತ ಹಲವು ರಾಷ್ಟ್ರೀಯ ಹೆದ್ದಾರಿಗಳಿವೆ. ಅಲ್ಲಿರುವ ಟೋಲ್ ಪ್ಲಾಜಾಗಳನ್ನು ದಾಟುವುದು ವಾಹನ ಸವಾರರಿಗೆ ಪ್ರಯಾಸದ ಕೆಲಸವಾಗಿತ್ತು. ಅದು ಫಾಸ್ಟ್‌ಟ್ಯಾಗ್ (FASTag) ಪರಿಚಯಿಸಿದ ಮೇಲೆ ಬಹು ಸುಲಭವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಈ ಕುರಿತು ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮಾಹಿತಿ ನೀಡಿದ್ದಾರೆ.
2026ರ ಅಂತ್ಯದ ವೇಳೆಗೆ ದೇಶಾದ್ಯಂತ ಬಹು ಪಥ ಮುಕ್ತ ಸಂಚಾರ (ಎಂಎಲ್‌ಎಫ್‌ಎಫ್) ವ್ಯವಸ್ಥೆ ಹಾಗೂ ಎಐ ಆಧಾರಿತ ಹೆದ್ದಾರಿ ನಿರ್ವಹಣಾ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದು ಕೃತಕ ಬುದ್ದಿಮತ್ತೆ ಬೆಂಬಲದಿಂದ ಕಾರ್ಯನಿರ್ವಹಿಸುತ್ತದೆ. ಇನ್ಮುಂದೆ ಪ್ರಯಾಣಿಕರು ಟೋಲ್‌ಗಳಲ್ಲಿ ಕಾಯುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಹೊಸ ಎಐ (AI) ತಂತ್ರಜ್ಞಾನದ ಜಾರಿಯಿಂದ ರೂ.1,500 ಕೋಟಿ ಮೌಲ್ಯದ ಇಂಧನವನ್ನು ಉಳಿಸಬಹುದು. ಸರ್ಕಾರಕ್ಕೆ ರೂ.6,000 ಕೋಟಿ ಆದಾಯ ಬರುತ್ತದೆ. ವಾಹನ ಸವಾರರಿಗೂ ನೆರವಾಗಲಿದ್ದು, ಅವರ ಪ್ರಯಾಣದ ಸಮಯವು ಖಂಡಿತವಾಗಿಯೂ ಕಡಿಮೆಯಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇದು ಅತ್ಯುತ್ತಮವಾದ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯಾಗಿದೆ. ಮೊದಲಿಗೆ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗೆ 3 ರಿಂದ 10 ನಿಮಿಷಗಳು ಬೇಕಾಗುತ್ತಿತ್ತು. ಆ ಬಳಿಕ, ಫಾಸ್ಟ್‌ಟ್ಯಾಗ್‌ನಿಂದಾಗಿ ಅದು 60 ಸೆಕೆಂಡುಗಳಿಗಿಂತ ಕಡಿಮೆಯಾಗಿದೆ. ಆದಾಯದ ಪ್ರಮಾಣವು ಕನಿಷ್ಠ ರೂ.5,000 ಕೋಟಿಗಳಿಗೆ ಹೆಚ್ಚಾಗಿದೆ ಎಂದಿದ್ದಾರೆ.
ಬಹು ಪಥ ಮುಕ್ತ ಸಂಚಾರ (ಎಂಎಲ್‌ಎಫ್‌ಎಫ್) ವ್ಯವಸ್ಥೆ ಹಾಗೂ ಎಐ ಆಧಾರಿತ ಹೆದ್ದಾರಿ ನಿರ್ವಹಣಾ ತಂತ್ರಜ್ಞಾನವು ಅನುಷ್ಠಾನವಾದ ನಂತರ, ಕಾರುಗಳು ಗರಿಷ್ಠ 80 ಕಿ.ಮೀ. ವೇಗದಲ್ಲಿ ಟೋಲ್ ದಾಟಬಹುದು. ಅಲ್ಲಿ ಯಾರು ತಡೆಯುವುದಿಲ್ಲ. ಎಐ ಹಾಗೂ ಫಾಸ್ಟ್‌ಟ್ಯಾಗ್ ಜೊತೆಗೆ ಉಪಗ್ರಹದ ಸಹಾಯದಿಂದ ನಂಬರ್ ಪ್ಲೇಟ್‌ನ್ನು ಗುರುತಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ:
ಈ ವರ್ಷದ ಆಗಸ್ಟ್ ತಿಂಗಳಲ್ಲಿ ಖಾಸಗಿ ವಾಹನ ಸವಾರರಿಗಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಹೆದ್ದಾರಿ ಟೋಲ್ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಇದು ಕಾರು, ಜೀಪ್ ಹಾಗೂ ವ್ಯಾನ್‌ಗಳಂತಹ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಪಾಸ್‌ನ್ನು ಎಲ್ಲ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಗಳ ಟೋಲ್ ಪ್ಲಾಜಾಗಳಲ್ಲಿ ಉಪಯೋಗಿಸಬಹುದಾಗಿದೆ.
ವಾರ್ಷಿಕ ಹೆದ್ದಾರಿ ಟೋಲ್ ಪಾಸ್‌ಗಾಗಿ ರೂ.3,000 ಶುಲ್ಕವನ್ನು ಪಾವತಿಸಬೇಕು. ಈ ಪಾಸ್ 1 ವರ್ಷಗಳ ಅವಧಿಗೆ ಮಾನ್ಯವಾಗಿರಲಿದೆ. ಬಹುಮುಖ್ಯವಾಗಿ 200 ಟ್ರಿಪ್‌ಗಳಿಗೆ ಮಾತ್ರ ಅವಕಾಶವಿರಲಿದೆ. ಆ ನಂತರದಲ್ಲಿ ಅಂದರೆ, 1 ವರ್ಷ ಅಥವಾ 200 ಟ್ರಿಪ್‌ಗಳು ಮುಕ್ತಾಯಗೊಂಡಾಗ, ಪುನಃ ನೋಂದಣಿ ಮಾಡಬೇಕು.
ನೂತನ ಪಾಸ್ ಜಾರಿಯಿಂದಾಗಿ ವಾರ್ಷಿಕ ರೂ.5,000 ರಿಂದ ರೂ.7,000 ವರೆಗೆ ಹಣವನ್ನು ಉಳಿತಾಯ ಮಾಡಬಹುದು. ಈ ಪಾಸ್‌ನ್ನು ವಾಹನಗಳ ವಿಂಡ್‌ಶೀಲ್ಡ್ ಮೇಲೆ ಅಂಟಿಸಬೇಕು. ಈ ಪಾಸ್‌ನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಆಗೊಮ್ಮೆ ಇತರೆ ವಾಹನದಲ್ಲಿ ಬಳಕೆ ಮಾಡಿದರೆ, ಸ್ವಯಂಚಾಲಿತವಾಗಿ ನಿಷ್ಕ್ರಿಯವಾಗಿ ಬಿಡುತ್ತದೆ.
ಇನ್ನು, ಈ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಎಂಬುದು ಕಡ್ಡಾಯವಲ್ಲ ಎಂಬುದು ಗಮನಿಸಬೇಕಾಗದ ಅಂಶವಾಗಿದೆ. ವಾಹನ ಮಾಲೀಕರು ಇಷ್ಟವಿದ್ದರೆ ಮಾತ್ರ ತೆಗೆದುಕೊಂಡು ಹೆದ್ದಾರಿಗಳಲ್ಲಿ ಸಂಚರಿಸಬಹುದು. ಈ ಪಾಸ್ ಇಲ್ಲದಿದ್ದರೆ, ಎಂದಿನಂತೆ ಸಾಮಾನ್ಯ ಫಾಸ್ಟ್‌ಟ್ಯಾಗ್ ಬಳಿಸಿ, ಟೋಲ್ ಶುಲ್ಕವನ್ನು ಪಾವತಿ ಮಾಡಬಹುದು.


Click it and Unblock the Notifications








