ಮದುವೆ ಬ್ಯುಸಿಯಲ್ಲಿ ಮಗುವನ್ನು ಮರೆತ ಪೋಷಕರು: ನರಳಾಡಿ ಜೀವಬಿಟ್ಟ ಕಂದಮ್ಮ!
ಪೋಷಕರು ಮದುವೆಗೆ ಹಾಜರಾಗಲೆಂದು ಮೂರು ವರ್ಷದ ಬಾಲಕಿಯನ್ನು ಕಾರಿನಲ್ಲಿ ಮರೆತು ಲಾಕ್ ಮಾಡಿ ಹೋಗಿದ್ದು, ಮಗು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಸುಮಾರು ಎರಡು ಗಂಟೆಗಳ ನಂತರ ಮಗು ಕಾಣೆಯಾಗಿರುವುದನ್ನು ಅರಿತು ಹುಡುಕಲಾರಂಭಿಸಿದ್ದು, ಕೊನೆಗೆ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ರಾಜಸ್ಥಾನದ ಕೋಟಾದ ಜೋರಾವರ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಟಾ ನಿವಾಸಿ ಪ್ರದೀಪ್ ಕಳೆದ ಬುಧವಾರ ಸಂಜೆ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಜೋರಾವರ್ ಪುರ ಗ್ರಾಮಕ್ಕೆ ತೆರಳಿದ್ದರು. ಸ್ಥಳವನ್ನು ತಲುಪಿದ ನಂತರ, ಪತ್ನಿ ತಮ್ಮ ಹಿರಿಯ ಮಗಳೊಂದಿಗೆ ಕಾರಿನಿಂದ ಹೊರಬಂದು ಮದುವೆಗೆ ಹೋಗಿದ್ದಾರೆ. ಇನ್ನೊಂದು ಮಗು ತಮ್ಮ ತಾಯಿಯೊಂದಿಗೆ ಹೋಗಿದೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಬ್ಬರೂ ಪೋಷಕರು ಪ್ರತ್ಯೇಕ ಗುಂಪುಗಳಲ್ಲಿ ವಿವಿಧ ಸಮಾರಂಭಗಳಲ್ಲಿ ನಿರತರಾಗಿದ್ದರು. ಪ್ರತಿಯೊಬ್ಬರು ತಮ್ಮ ಕಿರಿಯ ಮಗಳು ಗೋರ್ವಿಕಾ ಇನ್ನೊಬ್ಬರೊಂದಿಗೆ ಇದ್ದಾಳೆ ಎಂದುಕೊಂಡಿದ್ದರು.

ಮಗು ಮದುವೆಗೆ ತಮ್ಮೊಂದಿಗೆ ಹಾಜರಾಗಿದೆ ಎಂಬ ಭ್ರಮೆಯಲ್ಲಿದ್ದಾಗ, ಸುಮಾರು ಎರಡು ಗಂಟೆಗಳ ನಂತರ ಮಗು ಎರಡೂ ಗುಂಪಗಳಲ್ಲಿ ಇಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಕೂಡಲೇ ದಂಪತಿ ಹಾಗೂ ಮದುವೆಗೆ ಬಂದವರು ಗೋರ್ವಿಕಾಳನ್ನು ಹುಡುಕಲು ಮುಂದಾಗಿದ್ದಾರೆ. ಅಂತಿಮವಾಗಿ ಅವರು ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗು ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಮಗು ಸಾವನ್ನಿಪ್ಪಿರುವುದನ್ನು ಘೋಷಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ಸಿಕ್ಕಿಬಿದ್ದಿದ್ದ ಕಾರಣ ಮಗುವಿನ ಉಸಿರಾಟಕ್ಕೆ ತೊಂದರೆಯಾಗಿ ನರಳಿ ನರಳಿ ಜೀವಬಿಟ್ಟಿದೆ. ಗೋರ್ವಿಕಾ ಕುಟುಂಬವು ಶವಪರೀಕ್ಷೆ ಮತ್ತು ಘಟನೆಯ ಬಗ್ಗೆ ಪೊಲೀಸ್ ತನಿಖೆಯನ್ನು ಮಾಡಲು ವಿರೋಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರೇ ಹೀಗೆ ಮಾಡಬೇಡಿ: ಪೋಷಕರೇ, ನೀವು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ, ವಾಹನವನ್ನು ಬಿಟ್ಟೋಗುವಾಗ ಹೆಚ್ಚಿನ ಗಮನಹರಿಸಿ. ನೀವು ವಾಹನವನ್ನು ಲಾಕ್ ಮಾಡಿ ಹೊರಡುವ ಮೊದಲು ನಿಮ್ಮ ಮಗು ಅಥವಾ ಮಕ್ಕಳು ಕಾರಿನಿಂದ ಹೊರಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಲಾಕ್ ಮಾಡಿದ ಕಾರಿನಲ್ಲಿ ಮಗುವನ್ನು ಎಂದಿಗೂ ಗಮನಿಸದೆ ಬಿಡಬೇಡಿ. ಏಕೆಂದರೆ ಮಕ್ಕಳು ಆಟವಾಡಿಕೊಂಡು ನಮಗೆ ತಿಳಿಯದೇ ಕಾರುಗಳನ್ನು ಹತ್ತಿಬಿಡುತ್ತಾರೆ. ಕೆಲವೊಮ್ಮೆ ಕಾರಿನಲ್ಲೇ ಮಲಗಿಬಿಡುತ್ತಾರೆ. ಕಳೆದ ತಿಂಗಳು ಮುಂಬೈನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಏಳು ವರ್ಷದ ಬಾಲಕ ಮತ್ತು ಅವನ ಐದು ವರ್ಷದ ಸಹೋದರಿ ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಈ ಇಬ್ಬರು ಮಕ್ಕಳು ತಮ್ಮ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಪಾಳುಬಿದ್ದ ಕಾರನ್ನು ಪ್ರವೇಶಿಸಿದ್ದು, ಹೊರಗೆ ಬರಲಾಗದೇ ಕಾರಿನಲ್ಲಿ ಸಿಲುಕಿದ್ದರು. ಬೇಸಿಗೆಯಾದ್ದರಿಂದ ಹೆಚ್ಚಿನ ಶಾಖದಿಂದ ಕೆಲವು ಗಂಟೆಗಳಲ್ಲಯೇ ಮಕ್ಕಳು ಸಾವನ್ನಪ್ಪಿದ್ದಾರೆ. ಬೆವರಿನಲ್ಲಿ ಸ್ನಾನ ಮಾಡಿದಂತಹ ಸೂಚನೆಗಳೊಂದಿಗೆ, ಅನೇಕ ಬಾರಿ ಪರಾರಿಯಾಗಲು ಪ್ರಯತ್ನಿಸಿದ್ದ ಗುರುತುಗಳು ಕಾರಿನಲ್ಲಿ ಲಭಿಸಿವೆ ಎಂದು ಪೊಲೀಸರು ಹೇಳಿದ್ದಾರೆ.
ಇವು ತಿಳಿದಿರಲಿ: ಕಾರನ್ನು ಲಾಕ್ ಮಾಡುವ ಪ್ರತಿ ಬಾರಿಯೂ ಕಾರನ್ನು ಒಮ್ಮೆ ಪರಿಶೀಲಿಸುವುದು ತುಂಬಾ ಮುಖ್ಯ. ಮೊದಲೇ ಹೇಳಿದಂತೆ ನಮಗೆ ತಿಳಿಯದಂತೆ ಮಕ್ಕಳು ಕಾರನ್ನು ಹತ್ತಿ ಮಲಗಿಬಿಡುತ್ತಾರೆ. ಹಾಗಾಗಿ ಎಲ್ಲವನ್ನು ಒಮ್ಮೆ ಪರಿಶೀಲಿಸಿ ಕಾರನ್ನು ಲಾಕ್ ಮಾಡುವುದು ತುಂಬಾ ಮುಖ್ಯ. ಹಾಗೆಯೇ ಕಾರನ್ನು ಮಕ್ಕಳಿಂದ ದೂರವಿಡುವುದು ಉತ್ತಮ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








