New Expressway: ಮಾತಾ ವೈಷ್ಣೋದೇವಿ ದರ್ಶನಕ್ಕೆ ದೆಹಲಿಯಿಂದ ಹೋಗುವುದು ಸುಲಭ.. 727 ಕಿಮೀ, 6 ಗಂಟೆ ಜರ್ನಿ!
ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ, ದೇಶಾದ್ಯಂತ ಹೆದ್ದಾರಿಗಳನ್ನು ಶರವೇಗದಲ್ಲಿ ಅಭಿವೃದ್ಧಿಪಡಿಸುತ್ತಿದೆ. 669 ಕಿಮೀ ಉದ್ದದ ದೆಹಲಿ - ಅಮೃತಸರ - ಕತ್ರಾ ಮಧ್ಯೆ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಡೆಯುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union minister for road transport and highways) ನಿತಿನ್ ಗಡ್ಕರಿ (Nitin Gadkari) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಲೋಕೋಪಯೋಗಿ ಇಲಾಖೆ ಸಚಿವ ಹರ್ಭಜನ್ ಸಿಂಗ್, ಮತ್ತು ಅಮೃತಸರದ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಅವರು, ಗುರುವಾರ ನಿರ್ಮಾಣ ಹಂತದಲ್ಲಿರುವ ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಅಮೃತಸರದಲ್ಲಿ ವೀಕ್ಷಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಈ ಎಕ್ಸ್‌ಪ್ರೆಸ್‌ವೇಯನ್ನು ಬರೋಬ್ಬರಿ ರೂ.40,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಮುಕ್ತಾಯಗೊಂಡ ಬಳಿಕ, ದೆಹಲಿಯಿಂದ ಅಮೃತಸರಕ್ಕೆ ಕೇವಲ 4 ಗಂಟೆಯಲ್ಲಿ ಪ್ರಯಾಣಿಯಬಹುದು. ದೆಹಲಿಯಿಂದ ಕತ್ರಾಗೆ 6 ಗಂಟೆಗಳಲ್ಲಿ ತಲುಪಬಹುದು. ಪ್ರಸ್ತುತ, ದೆಹಲಿಯಿಂದ ಕತ್ರಾಕ್ಕೆ 727 ಕಿಮೀ ದೂರವಿದ್ದು, ಹೊಸ ಹೆದ್ದಾರಿಯಿಂದ 58 ಕಿಮೀ ಕಡಿಮೆಯಾಗಲಿದೆ ಎಂದಿದ್ದಾರೆ.
ದೆಹಲಿ - ಅಮೃತಸರ - ಕತ್ರಾ ನಡುವೆ ನಿರ್ಮಾಣಗೊಳ್ಳುತ್ತಿರುವ ಎಕ್ಸ್‌ಪ್ರೆಸ್‌ವೇ 669 ಕಿಮೀ ಉದ್ದವಿದ್ದು, ಹರಿಯಾಣದಲ್ಲಿ 137 ಕಿಮೀ, ಪಂಜಾಬ್‌ನಲ್ಲಿ 399 ಕಿಮೀ ಜಮ್ಮು ಮತ್ತು ಕಾಶ್ಮೀರದಲ್ಲಿ 135 ಕಿಮೀ ಹಾದುಹೋಗಲಿದೆ. ಈ ಹೆದ್ದಾರಿ ಪಂಜಾಬ್‌ನ ಕೈಗಾರಿಕಾ ಪ್ರದೇಶಗಳಾದ ಪಟಿಯಾಲ, ಸಂಗ್ರೂರ್, ಮಲೇರ್‌ಕೋಟ್ಲಾ, ಲೂಧಿಯಾನ, ಜಲಂಧರ್, ಕಪುರ್ತಲಾ ಹಾಗೂ ಗುರುದಾಸ್‌ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಈ ಎಕ್ಸ್‌ಪ್ರೆಸ್‌ವೇ ಮತ್ತೊಂದು ಐತಿಹ್ಯಕ್ಕೂ ಪಾತ್ರವಾಗಲಿದ್ದು, ಏಷ್ಯಾದಲ್ಲಿಯೇ ಅತಿ ಉದ್ದದ 1300 - ಮೀಟರ್ ಕೇಬಲ್ ತೂಗುವ ಸೇತುವೆಗೂ ಸಾಕ್ಷಿಯಾಗಲಿದೆ. ಪ್ರಮುಖವಾಗಿ, ಹೆದ್ದಾರಿಯೂ ಸಿಖ್ಖರದ ಪವಿತ್ರ ಕ್ಷೇತ್ರಗಳಾದ ಗೋಲ್ಡನ್ ಟೆಂಪಲ್, ಕಪುರ್ತಲಾ ಜಿಲ್ಲೆಯ ಸುಲ್ತಾನ್‌ಪುರ್ ಲೋಧಿ ಗುರುದ್ವಾರ, ಗೋಯಿಂಡ್ವಾಲ್ ಸಾಹಿಬ್ ಗುರುದ್ವಾರ, ಖಾದೂರ್ ಸಾಹಿಬ್ ಗುರುದ್ವಾರ, ತರ್ನ್ ತರನ್‌ನಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ಹಾಗೂ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಕರ್ನಾಟಕದಲ್ಲೂ ಎರಡು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಇವೆರೆಡು ನಗರಗಳ ನಡುವೆ ನೂತನ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ನಡೆಸುತ್ತಿದೆ. 262 ಕಿಮೀ ಉದ್ದದ ರಸ್ತೆ ಇದಾಗಿದ್ದು, ಎರಡು ನಗರಗಳ ನಡುವೆ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಲಿದೆ.
ಸದ್ಯ, ಬೆಂಗಳೂರಿಂದ ಚೆನ್ನೈ ತೆರಳಲು 5 - 6 ಗಂಟೆ ಪ್ರಯಾಣದ ಅವಧಿ ಇದ್ದು, ಹೊಸ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಂಡ ಮೇಲೆ 3 ಗಂಟೆಗೆ ಇಳಿಕೆಯಾಗಲಿದೆ. ಈ ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳ ವೇಗಮಿತಿಯನ್ನು ಗಂಟೆಗೆ 120 ಕಿಮೀ.ಗೆ ಸೀಮಿತಗೊಳಿಸಬಹುದು. 4 ಪಥದ ಹೆದ್ದಾರಿ ಇದಾಗಿದ್ದು, ರೂ.17,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 17 ಫ್ಲೈಓವರ್‌ಗಳು, 41 ವೆಹಿಕಲ್ ಅಂಡರ್‌ಪಾಸ್, 52 ಪಾದಚಾರಿ ಅಂಡರ್‌ಪಾಸ್ ಒಳಗೊಂಡಿರಲಿದೆ.
ಬೆಂಗಳೂರು - ಪುಣೆ ನಡುವೆಯೂ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. 719.26 ಕಿಲೋಮೀಟರ್ ಉದ್ದದ ಹೆದ್ದಾರಿ ಇದಾಗಿರಲಿದ್ದು, 6 ಪಥದಲ್ಲಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಕರ್ನಾಟಕದ 9 ಮತ್ತು ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ ಹಾದು ಹೋಗಲಿದೆ. ರೂ.55,072.54 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರ ಮಧ್ಯೆ ಪ್ರಯಾಣದ ಅವಧಿ 7 ಗಂಟೆಗೆ ಕಡಿಮೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications