Kalki 2898 AD: ಕಲ್ಕಿ ಸಿನಿಮಾವನ್ನು ವಿಶ್ವವೇ ಕೊಂಡಾಡಲಿದೆ! ಆನಂದ್ ಮಹೀಂದ್ರಾ ಇದ್ದರೆ ಎಲ್ಲವೂ ಸಾಧ್ಯ
Kalki 2898 AD: ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿಬಿಟ್ಟಿವೆ. 8 ವರ್ಷಗಳ ಹಿಂದೆ ಪ್ರಭಾಸ್(Prabhas) ನಟನೆಯ ಬಾಹುಬಲಿ ಸಿನಿಮಾ ಇಂದಿನ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದಾರಿಕೊಟ್ಟಿತು ಎಂದರೇ ತಪ್ಪಾಗುವುದಿಲ್ಲ. ಇದರ ನಂತರ ಕೆಜಿಎಫ್, ಆರ್ಆರ್ಆರ್, ಕಾಂತಾರಾ ಹೀಗೆ ಹಲವು ಸಿನಿಮಾಗಳು ಭಾರತದಾದ್ಯಂತ ಸದ್ದು ಮಾಡಿ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದಿದ್ದವು.
ನಮ್ಮ ಸಿನಿಮಾಗಳ ಬಗ್ಗೆ ನಮಗೆ ಹೆಮ್ಮೆ ಎನಿಸಿದರೂ, ವಿದೇಶಿಗರು ಮಾತ್ರ ಸಣ್ಣತನದಿಂದ ನೋಡುತ್ತಾರೆ. ಇದಕ್ಕೆ ಹಲವು ಕಾರಣಗಳಿವೆಯಾದ್ರೂ, ಇದರಲ್ಲಿ ಪ್ರಮುಖವಾಗಿ ಬಜೆಟ್ ಕೊರತೆ, ಲಾಜಿಕ್ ಇಲ್ಲದ ಫೈಟ್‌ಗಳು, ಪ್ರತಿ ಸಿನಿಮಾದಲ್ಲಿ ಹಾಡುಗಳು ಹಾಗೂ ತಂತ್ರಜ್ಞಾನದ ಕೊರತೆಯಿಂದಾಗಿ ನಮ್ಮ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಳ್ಳುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ, ಭಾರತೀಯ ಸಿನಿಮಾಗಳು ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವ ದೇಶಗಳಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಈಗ ಭಾರತೀಯ ಚಿತ್ರಗಳ ತಾಕತ್ತನ್ನು ವಿಶ್ವಕ್ಕೆ ಪರಿಚಯಿಸುವ ಸಮಯ ಬಂದಿದೆ. ದೇಶೀಯ ಸಿನಿಮಾವೊಂದು ಇಂಗ್ಲೀಷ್ ಸೇರಿದಂತೆ ಹಲವು ವಿದೇಶಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

ತೆಲುಗು ನಟ ಪ್ರಭಾಸ್ ನಟನೆಯ ಕಲ್ಕಿ (kalki 2898AD) ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಇಲ್ಲಿನ ಇತಿಹಾಸಗಳ ಮೇಲೆ ಆಧಾರವಾಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಮಹಾವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿ ಭಗವಾನ್ ಕುರಿತ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾಗಾಗಿ ನಿರ್ದೇಶಕ ನಾಗ್ ಅಶ್ವಿನ್ ಸತತ ಐದಾರು ವರ್ಷಗಳ ಕಾಲ ಶ್ರಮಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಂದರೆ ಸಿನಿಮಾ ಕಥೆಯನ್ನು ಸಿದ್ದಗೊಳಿಸಿಕೊಂಡು ನಟ-ನಟಿಯರನ್ನು ಒಂದೆಡೆ ಸೇರಿಸಲು ಸುಮಾರು ವರ್ಷಗಳೇ ಹಿಡಿದಿದೆಯಂತೆ. ಈ ಸಿನಿಮಾದಲ್ಲಿ ಮಹಾಭಾರತದ ಸನ್ನಿವೇಶಗಳನ್ನು ಸಹ ತೋರಿಸಲಾಗುವುದು ಎಂದು ಕೂಡ ಹೇಳಲಾಗುತ್ತಿದೆ. ಇಂತಹ ಅದ್ದೂರಿ ಸಿನಿಮಾಗೆ ಆನಂದ್ ಮಹೀಂದ್ರಾ ಅವರು ಬೆಂಬಲವಾಗಿ ನಿಂತಿದ್ದಾರೆ.

ಮೇ 22 ರಂದು ಕಲ್ಕಿ ಸಿನಿಮಾದ ಬುಜ್ಜಿ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದರಲ್ಲಿ ಬುಜ್ಜಿ ಎಂಬುದು ಕಾರೊಂದರ ಹೆಸರು, ಇದನ್ನು ಡಿಸೈನ್ ಮಾಡಿರುವುದು ಮಹೀಂದ್ರಾ ಎಂಜಿನೀಯರಿಂಗ್ ತಂಡ. ಹೌದು ಕಳೆದ ವರ್ಷ ಸಿನಿಮಾ ಸೆಟ್ಟೇರುವ ಮುನ್ನ ನಿರ್ದೇಶಕ ನಾಗ್ ಅಶ್ವಿನ್ ಅವರು ಆನಂದ್ ಮಹೀಂದ್ರಾ ಅವರಿಗೆ X (ಟ್ವಿಟ್ಟರ್)ನಲ್ಲಿ, ನಮಗೆ ಫ್ಯೂಚಿರಿಸ್ಟಿಕ್ ಆಗಿರುವ ವಾಹನದ ಅಗತ್ಯವಿದೆ. ಇದು ನಮ್ಮ ಸಿನಿಮಾದಲ್ಲಿ ತುಂಬಾ ಮುಖ್ಯ ಪಾತ್ರ ವಹಿಸಲಿದೆ, ನಿಮ್ಮಿಂದಲೇ ಅಂತಹ ವಾಹನ ನಿರ್ಮಿಸಲು ಸಾಧ್ಯ. ನಮಗೆ ನಿಮ್ಮ ಸಹಾಯ ಬೇಕಿದೆ ಎಂದು ಕೇಳಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ ಅವರು ಚಿತ್ರತಂಡಕ್ಕಾಗಿ ತಮ್ಮ ಎಂಜಿನೀರಿಂಗ್ ತಂಡವನ್ನು ಕಳುಹಿಸಿಕೊಟ್ಟಿದ್ದರು.
ಬುಜ್ಜಿ ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಕಾರನ್ನು ಚಿತ್ರತಂಡ ಹಾಗೂ ಮಹೀಂದ್ರಾ ಆಟೋಮೊಬೈಲ್ ಎಂಜಿನೀಯರಿಂಗ್ ತಂಡ ಜೊತೆಗೂಡಿ ನಿರ್ಮಿಸಿದೆ. ಈ ದೈತ್ಯ ಕಾರನ್ನು ಹಿಂದೆದೂ ಭಾರತೀಯ ಸಿನಿಮಾಗಳಲ್ಲಿ ಕಾಣಿಸದಂತಹ ಡಿಸೈನ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ನಾವು ಇದುವರೆಗೆ ಹಾಲಿವುಡ್ ಸಿನಿಮಾಗಳಲ್ಲಿ ನೋಡುತ್ತಿದ್ದ ಸೈ-ಫೈ ಚಿತ್ರಗಳಲ್ಲಿನ ಕಾರಿನಂತೆ ಇದನ್ನು ಡಿಸೈನ್ ಮಾಡಿದ್ದಾರೆ.

ಮುಂಭಾಗದಲ್ಲಿ ಉದ್ದದ ವಿಂಡ್‌ಶೀಲ್ಡ್, ಎರಡು ವೀಲ್‌ಗಳು ಹಾಗೂ ಹಿಂಭಾಗದಲ್ಲಿ ಒಂದು ವೀಲ್ ಅನ್ನು ಅಳವಡಿಸಲಾಗಿದೆ. ದೊಡ್ಡ ಘಾತ್ರದ ಸಸ್ಪೆನ್ಷನ್ ಸೆಟಪ್ ಅನ್ನು ಈ ವಾಹನಕ್ಕೆ ಬಳಸಲಾಗಿದೆ. ಸಂಪೂರ್ಣ ಕಬ್ಬಿಣದಲ್ಲಿ ಕಾರಿನ ಹೊರಭಾಗವನ್ನು ನಿಮಿಸಲಾಗಿದ್ದು, ಇದರ ಟೈರ್‌ಗಳ ಮೇಲೆ ಮೆಷ್ ಅನ್ನು ನೀಡಿ ಎಲೆಕ್ಟ್ರೋ ಮ್ಯಾಗ್ನಟಿಕ್ ವೀಲ್‌ಗಳಂತೆ ಡಿಸೈನ್ ಮಾಡಲಾಗಿದೆ.
ಕಾರಿನ ಒಳಭಾಗದಲ್ಲಿನ ವಿನ್ಯಾಸದ ಕುರಿತು ಸರಿಯಾದ ಮಾಹಿತಿಯಿಲ್ಲವಾದರೂ ಒಬ್ಬರು ಮಾತ್ರ ಕುಳಿತು ಓಡಿಸಲು ಸಿಂಗಲ್ ಸೀಟ್ ಇರುವುದನ್ನು ಕಾಣಬಹುದು. ಉಳಿದಂತೆ ಹಿಂಭಾಗದಲ್ಲಿ ಬೂಸ್ಟರ್ ಹೊರಹಾಕುವಂತಹ ಎಕ್ಸಾಸ್ಟ್‌ಗಳು ಇರುವಂತೆ ಕಾಣುತ್ತಿದೆ. ಇಂತಹ ಅದ್ಬುತ ಕಾರಿನ ನಿರ್ಮಾಣ ಮಾಡಿಕೊಟ್ಟಿದ್ದಕ್ಕೆ ನಿರ್ದೇಶಕ ನಾಗ್ ಅಶ್ವಿನ್ ಮಹೀಂದ್ರಾ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications








