ರಿಯಲ್ ಹೀರೋಗಳು: ಬದುಕಿನ ಬಂಡಿ ಎಳೆಯಲು ಮಹಿಳೆಗೆ ಆಟೋ ಗಿಫ್ಟ್ ಕೊಟ್ಟ ನಟ ಲಾರೆನ್ಸ್, ಬಾಲಾ
ತಮಿಳಿನ ಜನಪ್ರಿಯ ಶೋ 'ಚಳಕಬ್ ಪೋವಾಟು ಯಾರು' ವಿಜೇತ ಕೆಪಿವೈ ಬಾಲಾ, ತಮ್ಮ ಅದ್ಭುತ ಪ್ರತಿಭೆ ಮೂಲಕ ಭಾರೀ ಖ್ಯಾತಿಗಳಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. 'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮದ ನಂತರ, ಬಾಲಾಗೆ ಸಿನಿಮಾದಲ್ಲಿ ಅಭಿನಯಿಸುವ ಚಾನ್ಸ್ ಕೂಡ ದೊರೆಯಿತು. ಸದ್ಯ ಟಿವಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ.
ನಟನೆ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿ ಮಾತ್ರವಲ್ಲದೆ, ತಮ್ಮ ಸಮಾಜ ಸೇವೆ ಮೂಲಕವೂ ಕೆಪಿವೈ ಬಾಲಾ (KPY Bala) ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯದ ಬಹುಭಾಗವನ್ನು ಅಗತ್ಯವಿರುವ ಮಕ್ಕಳ ಶಿಕ್ಷಣ, ನಿರ್ಗತಿಕ ವೃದ್ಧರು, ವಿಕಲಚೇತನರಿಗೆ ಸಹಾಯ ಮಾಡಲು ಖರ್ಚು ಮಾಡುತ್ತಾರೆ. ಮಿಗ್‍ಜಾಮ್ ಚಂಡಮಾರುತ ಅಪ್ಪಳಿಸಿದಾಗ ಬಾಲಾ, 200 ಕುಟುಂಬಗಳಿಗೆ ತಲಾ ರೂ.1000 ಹಣಕಾಸಿನ ನೆರವನ್ನು ನೀಡಿದ್ದರು.

2023ರಲ್ಲಿ ಈರೋಡ್ ಸಮೀಪ ಗುಡ್ಡಗಾಡು ಪ್ರದೇಶವಾದ ಕಡಂಬೂರು ಜನರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್ ಅನ್ನು ಒದಗಿಸಿದ್ದರು. ಕಳೆದ ಜನವರಿಯಲ್ಲಿ ಅನಕಾಪುತ್ತೂರು ಗ್ರಾಮದ ನಿವಾಸಿಗಳಿಗೆ ವಿಶೇಷವಾಗಿ ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಸಹಾಯವಾಗಲು ಕೆಪಿವೈ ಬಾಲಾ ಆಟೋ ಸೇವೆಯನ್ನು ಶುರು ಮಾಡಿದ್ದರು. ಶುಕ್ರವಾರ ನಟ ರಾಘವ ಲಾರೆನ್ಸ್ ಜೊತೆಗೂಡಿ ಬದುಕಿನ ಬಂಡಿ ಎಳೆಯಲು ಮಹಿಳೆಯೊಬ್ಬರಿಗೆ ಆಟೋವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ಕೆಪಿವೈ ಬಾಲಾ, 'ಈ ಸಹೋದರಿಯ ಹೆಸರು ಮುರುಗಮ್ಮಲ್. ಅವರು ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡಿದ್ದಾರೆ. 3 ಹೆಣ್ಣು ಮಕ್ಕಳಿದ್ದು, ಕುಟುಂಬದ ನಿರ್ವಹಣೆಗಾಗಿ ರೈಲಿನಲ್ಲಿ ಸಮೋಸವನ್ನು ಮಾರುತ್ತಿದ್ದಾರೆ. ಹೊಸ ಆಟೋ ಖರೀದಿಬೇಕೆಂಬುದು ಅವರ ಕನಸು. ಅದನ್ನು ನನ್ನ ರೋಲ್ ಮಾಡೆಲ್ ನಟ ರಾಘವ ಲಾರೆನ್ಸ್ ನೆರವಿನೊಂದಿಗೆ ಈಡೇರಿಸಲಾಗಿದೆ' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೆಪಿವೈ ಬಾಲಾ, ನೂತನ ಆಟೋದಲ್ಲಿ ಈ ಮಹಿಳೆಯನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಹೋಗುತ್ತಾರೆ. ಇತರೆ ಮಹಿಳಾ ಆಟೋ ಚಾಲಕರು ಇವರನ್ನು ಸುತ್ತುವರಿಯುತ್ತಾರೆ. ಅಲ್ಲಿ ಏನಾಗುತ್ತಿದೆ ಎಂದು ಮಹಿಳೆಗೆ ಅರ್ಥವಾಗುವುದಿಲ್ಲ. ಆ ಬಳಿಕ, ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದಾಗ ಈತನೇ ಬಾಲಾ ಎಂದು ತಿಳಿಯುತ್ತದೆ.
'ಈ ಆಟೋಗೆ 3 ಲಕ್ಷ ರೂಪಾಯಿ, ಸ್ವಲ್ಪ ನಾನು ಕೊಟ್ಟಿದ್ದೇನೆ. ಇನ್ನುಳಿದ ಹಣವನ್ನು ಯಾರು ಕೊಟ್ಟಿದ್ದಾರೆ ತಿಳಿಯಬೇಕೇ' ಎಂದು ಬಾಲಾ ಹೇಳುತ್ತಾರೆ. ಆ ಸ್ಥಳಕ್ಕೆ ಕಾರೊಂದು ಬಂದು ನಿಲ್ಲುತ್ತದೆ. ಅದರಿಂದ ನಟ ರಾಘವ ಲಾರೆನ್ಸ್ ಇಳಿಯುತ್ತಾರೆ. ಅವರನ್ನು ನೋಡಿದ ಮಹಿಳೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ನಟ ರಾಘವ ಲಾರೆನ್ಸ್ ಆಟೋದ ಕೀಲಿಯನ್ನು ಹಸ್ತಾಂತರಿಸುತ್ತಾರೆ.
ನಂತರ ಪ್ರಯಾಣಿಕರ ಆಸನದಲ್ಲಿ ನಟ ರಾಘವ ಲಾರೆನ್ಸ್ ಹಾಗೂ ಕೆಪಿವೈ ಬಾಲಾ ಅವರನ್ನು ಕುಳ್ಳಿರಿಸಿಕೊಂಡು ಮಹಿಳೆ ಆಟೋವನ್ನು ಓಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಹಾಯಕ್ಕೆ ನಟ ರಾಘವ ಲಾರೆನ್ಸ್ ಮತ್ತು ಕೆಪಿವೈ ಬಾಲಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಾರ್ಚ್ 17ರಂದು ಬಡ ಪೆಟ್ರೋಲ್ ಪಂಪ್ ನೌಕರನೊಬ್ಬನಿಗೆ ಕೆಪಿವೈ ಬಾಲಾ, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‌ನ್ನು ಉಡೊಗೊರೆಯಾಗಿ ನೀಡಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications