ರಿಯಲ್ ಹೀರೋಗಳು.. ಆಟೋ ಚಾಲಕಿಯರ ಸಾಲ ತೀರಿಸಿದ ನಟ ರಾಘವ ಲಾರೆನ್ಸ್, ಬಾಲಾ
ತಮಿಳಿನ ಖ್ಯಾತ ನಟ ರಾಘವ ಲಾರೆನ್ಸ್ ತಮ್ಮ ಸಾಮಾಜಿಕ ಸೇವೆ ಕಾರ್ಯಗಳಿಂದಲೇ ಗುರುತಿಸಿಕೊಂಡಿದ್ದಾರೆ. ಅವರನ್ನೇ ತನ್ನ 'ಆದರ್ಶ ವ್ಯಕ್ತಿ' ಎಂದು ಹೇಳುವ ಟಿವಿ ನಿರೂಪಕ ಹಾಗೂ ನಟ ಕೆಪಿವೈ ಬಾಲಾ, ತಾನು ಸಂಪಾದಿಸುವ ಬಹುಭಾಗವನ್ನು ಅಗತ್ಯವಿರುವ ಮಕ್ಕಳ ಶಿಕ್ಷಣ, ನಿರ್ಗತಿಕ ವೃದ್ಧರು, ವಿಕಲಚೇತನರಿಗೆ ಸಹಾಯ ಮಾಡಲು ಖರ್ಚು ಮಾಡುತ್ತಾರೆ.
ಕೆಪಿವೈ ಬಾಲಾ (KPY Bala) ನಟ ರಾಘವ ಲಾರೆನ್ಸ್ (Raghava Lawrence) ಅವರ ನೆರವಿನಿಂದ ಕಷ್ಟದಲ್ಲಿದ್ದ 10 ಆಟೋ ಚಾಲಕಿಯರ ಸಾಲವನ್ನು ತೀರಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವತಃ ಬಾಲಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 56 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಬರೋಬ್ಬರಿ 6 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

'10 ಆಟೋ ಚಾಲಕಿಯರು ತಮ್ಮ ಜೀವನೋಪಾಯಕ್ಕೆ ಖರೀದಿಸಿದ್ದ ಆಟೋ ಸಾಲವನ್ನು ಮರುಪಾವತಿಸಲು ಹೆಣಗಾಡುತ್ತಿದ್ದರು. ಅವರಿಗೆ ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಯಿತು. ಅದಕ್ಕಾಗಿ ನಾನು ಹಾಗೂ ನನ್ನ ರೋಲ್ ಮಾಡೆಲ್ ಆಗಿರುವ ನಟ ರಾಘವ ಲಾರೆನ್ಸ್ ಮಾಸ್ಟರ್ ಸಮಾನವಾಗಿ ಹಣವನ್ನು ಹಂಚಿಕೊಂಡು ಸಾಲವನ್ನು ಕಟ್ಟಿ, ಆ ಸಹೋದರಿಯರಿಗೆ ಸ್ವಂತ ಆಟೋಗಳು ಸಿಗುವಂತೆ ಮಾಡಲಾಯಿತು' ಎಂದು ಕೆಪಿವೈ ಬಾಲಾ ಹೇಳಿದ್ದಾರೆ.
ವಿಡಿಯೋದಲ್ಲಿ ಬಾಲಾ ಆಟೋವನ್ನು ಚಲಾಯಿಸುತ್ತಿದ್ದು, ಹಿಂಬದಿಯ ಆಸನದಲ್ಲಿ ನಟ ರಾಘವ ಲಾರೆನ್ಸ್ ಆಟೋಗಳ ಸಾಲ ತೀರಿಸಿರುವ ದಾಖಲೆ ಪತ್ರವನ್ನು ಒಳಗೊಂಡ ಫೈಲ್ (ಕಡತ) ಹಿಡಿದುಕೊಂಡು ಕುಳಿತುಕೊಂಡಿರುವುದನ್ನು ಕಾಣಬಹುದು. ಆ ಬಳಿಕ, ಇಬ್ಬರು ಆಟೋ ಚಾಲಕಿಯರಿರುವ ಸ್ಥಳಕ್ಕೆ ಬಂದು ಫೈಲ್‌ಗಳನ್ನು ಹಸ್ತಾಂತರಿಸುತ್ತಾರೆ. ಅಲ್ಲಿ ನಟ ಲಾರೆನ್ಸ್ ಮತ್ತು ಕೆಪಿವೈ ಬಾಲಾ ಅವರಿಗೆ ಹೂಮಾಲೆಗಳನ್ನು ಹಾಕಿ, ಆರತಿಯನ್ನು ಎತ್ತಿ ಗೌರವಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಕೆಲವೇ ದಿನಗಳ ಹಿಂದೆ, ನಟ ರಾಘವ ಲಾರೆನ್ಸ್ ಬಡ ರೈತರಿಗೆ 10 ಮಹೀಂದ್ರಾ ಟ್ರಾಕ್ಟರ್‌ಗಳನ್ನು ಉಡೊಗೊರೆಯಾಗಿ ಕೊಟ್ಟಿದ್ದರು. ಈ ಕುರಿತು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಅವರು, 'ಕಾರ್ಮಿಕರ ದಿನಾಚರಣೆಯಂದು, ನಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ 'ಸೇವೆಯೇ ದೇವರು' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಂತೋಷವಾಗಿದೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರ್ಯಾಕ್ಟರ್‌ಗಳನ್ನು ನೀಡಲಾಗುತ್ತಿದೆ' ಎಂದು ಹೇಳಿದ್ದರು.
ಏಪ್ರಿಲ್ 17ರಂದು ನಟ ರಾಘವ ಲಾರೆನ್ಸ್ ವಿಶೇಷ ಚೇತನ ಸಾಧಕರಿಗೆ 13 ಸ್ಕೂಟರ್‌ಗಳನ್ನು ಗಿಫ್ಟ್ ನೀಡಿದ್ದರು. 'ಸುದ್ದಿಗೋಷ್ಠಿಯೊಂದರಲ್ಲಿ ವಿಶೇಷ ಚೇತನ ಯುವಕರು ತುಂಬಾ ಧೈರ್ಯದಿಂದ 'ಮಲ್ಲಕಂಬ' ಪ್ರದರ್ಶಿದ್ದರು ಎಂದು ಹೇಳಿದ್ದೆ. ಅವರ ದೃಢಸಂಕಲ್ಪವನ್ನು ನೋಡಿ ನನಗೆ ಸಂತೋಷವಾಗಿತು. ಅವರಿಗೆ ದ್ವಿಚಕ್ರ ವಾಹನ ಹಾಗೂ ಮನೆಯನ್ನು ನಿರ್ಮಿಸಿಕೊಂಡುವುದಾಗಿ ಭರವಸೆ ನೀಡಿದ್ದೆ. ಮೊದಲಿಗೆ 13 ಸ್ಕೂಟರ್‌ಗಳನ್ನು ನೀಡುವ ಮೂಲಕ ನನ್ನ ಮಾತನ್ನು ಈಡೇರಿಸಿದ್ದಾನೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಅದಕ್ಕೂ ಮೊದಲು ಮಾರ್ಚ್‌ನಲ್ಲಿ ಕೆಪಿವೈ ಬಾಲಾ ನಟ ರಾಘವ ಲಾರೆನ್ಸ್ ಜೊತೆಗೂಡಿ ಬದುಕಿನ ಬಂಡಿ ಎಳೆಯಲು ಮಹಿಳೆಯೊಬ್ಬರಿಗೆ ಆಟೋವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಮಿಗ್‍ಜಾಮ್ ಚಂಡಮಾರುತ ಅಪ್ಪಳಿಸಿದಾಗಲೂ ನೆರವಾಗಿದ್ದ ಬಾಲಾ, 200 ಕುಟುಂಬಗಳಿಗೆ ತಲಾ ರೂ.1000 ಹಣಕಾಸಿನ ಸಹಾಯವನ್ನು ಮಾಡಿದ್ದರು. 2023ರಲ್ಲಿ ಈರೋಡ್ ಸಮೀಪ ಗುಡ್ಡಗಾಡು ಪ್ರದೇಶವಾದ ಕಡಂಬೂರು ಜನರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್ ಅನ್ನು ಒದಗಿಸಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








