ನೆಲಸಮವಾಯ್ತು 190 ವರ್ಷ ಹಳೆಯ ಸೇತುವೆ
ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿ ಬಳಿಯಿದ್ದ 190 ವರ್ಷದ ಹಳೆಯ ಅಮೃತಾಂಜನ್ ರೈಲ್ವೆ ಬ್ರಿಡ್ಜ್ ಅನ್ನು ಭಾನುವಾರ ಸಂಜೆ ನೆಲಸಮಗೊಳಿಸಲಾಗಿದೆ. ವಾಹನಗಳ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸುಗಮ ಸಂಚಾರ ಕಲ್ಪಿಸುವ ಸಲುವಾಗಿ ಈ ಈ ರೈಲ್ವೆ ಸೇತುವೆಯನ್ನು ನೆಲಸಮಗೊಳಿಸಲಾಗಿದೆ.

ಈ ಸೇತುವೆಯು ಹಳೆ ಲೋನವಾಲಾ ರೈಲು ನೆಟ್ ವರ್ಕ್ ನ ಭಾಗವಾಗಿತ್ತು. ಎಂಎಸ್‌ಆರ್‌ಡಿಸಿ ಸ್ಫೋಟಕಗಳ ಸಹಾಯದಿಂದ ಈ ಸೇತುವೆಯನ್ನು ನೆಲಸಮಗೊಳಿಸಿದೆ. ಈ ಸೇತುವೆ ತುಂಬಾ ದುರ್ಬಲವಾಗಿದೆಯೆಂದು 2017ರ ಲೆಕ್ಕಪರಿಶೋಧನೆ ವರದಿಯಲ್ಲಿ ಹೇಳಲಾಗಿತ್ತು.

ಸೇತುವೆಯು ದುರ್ಬಲಗೊಂಡಿದ್ದ ಕಾರಣಕ್ಕೆ ಅದರ ಕೆಳಗೆ ಹೋಗುವ ವಾಹನಗಳ ದಟ್ಟಣೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸೇತುವೆಯು ಯಾವುದೇ ಸಮಯದಲ್ಲಿ ಕುಸಿದು ಬಿದ್ದುಅಪಘಾತವಾಗುವ ಸಾಧ್ಯತೆಗಳಿದ್ದವು.

ಲಾಕ್‌ಡೌನ್ ಸಮಯದಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲ. ಈ ಕಾರಣಕ್ಕೆ ಎಂಎಸ್‌ಆರ್‌ಡಿಸಿ ಈ ಸೇತುವೆಯನ್ನು ನೆಲಸಮಗೊಳಿಸಲು ಮುಂದಾಗಿದೆ. ಈಗ ನೆಲಸಮಗೊಂಡಿರುವ ಸೇತುವೆಯ ಭಗ್ನಾವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.

ಮುಂದಿನ 4 ದಿನಗಳಲ್ಲಿ ಈ ಸೇತುವೆಯ ಅವಶೇಷಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ಸ್ವಚ್ವಗೊಳಿಸಲಾಗುವುದೆಂದು ಎಂಎಸ್‌ಆರ್‌ಡಿಸಿ ತಿಳಿಸಿದೆ. ಇದಕ್ಕಾಗಿ ಸುಮಾರು 1200 ಟ್ರಕ್ ಗಳನ್ನು ಬಳಸಲಾಗುವುದು. ಈ ವೇಳೆ ಇಲ್ಲಿ ಸಂಚರಿಸುವ ವಾಹನಗಳ ಮಾರ್ಗವನ್ನು ಕಂಡಾಲಾಗೆ ತಿರುಗಿಸಲಾಗುವುದು ಎಂದು ಎಂಎಸ್‌ಆರ್‌ಡಿಸಿ ಹೇಳಿದೆ.
ಅಮೃತಾಂಜನ್ ಸೇತುವೆಯನ್ನು ಮೊದಲ ಬಾರಿಗೆ 1830ರ ನವೆಂಬರ್ 10ರಂದು ಬಳಕೆಗೆ ಆರಂಭಿಸಲಾಯಿತು. ಈ ಸೇತುವೆ ಮುಂಬೈ ಹಾಗೂ ಪುಣೆ ನಗರಗಳನ್ನು ಸಂಪರ್ಕಿಸಲು ನೆರವಾಗುತ್ತಿತ್ತು.

ನಂತರದ ದಿನಗಳಲ್ಲಿ ಈ ಸೇತುವೆಯನ್ನು ರೈಲ್ವೆಯ ಮೂರನೇ ಸಾಲಿನ ಟ್ರಾಕ್ ನಂತೆ ಬಳಸಲಾಯಿತು. ಈ ಟ್ರಾಕ್ ನಲ್ಲಿ ಬೋರ್ ಘಾಟ್ ಸೆಕ್ಷನ್ ನ ಎಂಜಿನ್‌ಗಳನ್ನು ಇಡಲಾಗುತ್ತಿತ್ತು. ಬಲಶಾಲಿಯಾದ ಎಂಜಿನ್ ಬಂದ ನಂತರ ಈ ಎಂಜಿನ್ ಗಳ ಬಳಕೆಯನ್ನು ನಿಲ್ಲಿಸಲಾಯಿತು.


Click it and Unblock the Notifications