ಆನಂದ್ ಮಹೀಂದ್ರಾ ಮನಗೆದ್ದ ಸಾಮಾನ್ಯ ಬೊಲೆರೊ ಚಾಲಕನಿಗೆ 'ಕ್ಯಾಪ್ಟನ್ ಕೂಲ್' ಬಿರುದು
ಕರ್ನಾಟಕದ ಕಬಿನಿ ಮೀಸಲು ಪ್ರದೇಶದಲ್ಲಿ ಇತ್ತೀಚೆಗೆ ಕಂಡುಬಂದ ಘಟನೆಯಲ್ಲಿ, ಕೋಪಗೊಂಡ ಆನೆಯೊಂದು ಪ್ರವಾಸಿ ವಾಹನವನ್ನು ಬೆನ್ನಟ್ಟಿತ್ತು. ಈ ವೇಳೆ ಚಾಲಕ ಆನೆಯ ದಾಳಿಯಿಂದ ಯಶಸ್ವಿಯಾಗಿ ತಪ್ಪಿಸಿಕೊಂಡು ವಾಹನದಲ್ಲಿದ್ದ ಎಲ್ಲರನ್ನು ರಕ್ಷಿಸಿ ಪ್ರಶಂಸೆಗೆ ಪಾತ್ರವಾಗಿದ್ದಾನೆ.

ಅತ್ಯಂತ ಶಾಂತಿಯುತ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಆನೆಗಳು ಸಾಮಾನ್ಯವಾಗಿ ಶಾಂತ ಮತ್ತು ಸಂಯೋಜಿತ ನಡವಳಿಕೆಯನ್ನು ಕಾಪಾಡಿಕೊಳ್ಳುತ್ತವೆ. ಆದರೆ ಅವುಗಳನ್ನು ಕೆರಳಿಸಿದರೆ ಸುತ್ತಲಿನ ಎಲ್ಲವನ್ನೂ ನಾಶಪಡಿಸುವುದು ಖಚಿತ. ಅಲ್ಲದೇ ರೊಚ್ಚಿಗೆದ್ದ ಆನೆಯನ್ನು ನಿಯಂತ್ರಣಕ್ಕೆ ತರುವುದು ಕೂಡ ಅಸಾಧ್ಯ.

ಇತ್ತೀಚೆಗಷ್ಟೇ ರಾಜ್ಯದ ಕಬಿನಿ ಮೀಸಲು ಪ್ರದೇಶದಲ್ಲಿ ಇಂತಹದ್ದೇ ದೃಶ್ಯ ಕಂಡು ಬಂದಿದ್ದು, ಸಿಟ್ಟಿಗೆದ್ದ ಆನೆಯೊಂದು ಪ್ರವಾಸಿ ವಾಹನದತ್ತ ನುಗ್ಗಿ ಬಂದಿತ್ತು. ಚಾಲಕ ಯಶಸ್ವಿ ಯತ್ನ ನಡೆಸಿ ತನ್ನ ವಾಹನದಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿದ್ದಾನೆ. ಆದರೆ ಇಲ್ಲಿ ಆನೆ ದಾಳಿಗೆ ಮುಂದಾಗಿರುವುದಕ್ಕಿಂತ ಚಾಲಕನ ಶಾಂತತೆ ಮತ್ತು ಸಮಯ ಪ್ರಜ್ಞೆ ಜನರ ಗಮನ ಸೆಳೆಯಿತು.

ಗಾಬರಿಯಾಗದೆ ಪ್ರಶಾಂತತೆಯನ್ನು ಕಾಯ್ದುಕೊಂಡಿದ್ದ ಚಾಲಕ ಆನೆಯ ಮೇಲೆ ಹಾಗೂ ಕಾರಿನ ಕನ್ನಡಿಯ ಮೇಲೆ ತೀವ್ರ ನಿಗಾ ಇಟ್ಟಿದ್ದ. ಆತ ತನ್ನ ವಾಹನದಲ್ಲಿದ್ದ ಪ್ರವಾಸಿಗರ ಸುರಕ್ಷತೆಯ ಹೊಣೆ ಹೊತ್ತು ಕಾರನ್ನು ಹಿಂದಕ್ಕೆ ಓಡಿಸುತ್ತಲೇ ಇದ್ದ. ಚಾಲಕನ ಕೌಶಲ್ಯ ಮತ್ತು ಶಾಂತ ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ.

ಈಗ ಈ ವಿಡಿಯೋ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಗಮನವನ್ನು ಸೆಳೆದಿದೆ. ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಚಾಲಕನನ್ನು 'ಕ್ಯಾಪ್ಟನ್ ಕೂಲ್' ಎಂದು ಕರೆದಿದ್ದಾರೆ. 36 ಸೆಕೆಂಡ್‌ಗಳ ವಿಡಿಯೋದಲ್ಲಿ ಕೋಪಗೊಂಡ ಆನೆಯು ಬೊಲೆರೊ ಕಡೆಗೆ ಬರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಚಾಲಕನ ಚಾಲಾಕಿ ಚಾಲನೆ ಹಾಗೂ ಸಮಯ ಪ್ರಜ್ಞೆಯನ್ನು ಮೆಚ್ಚಿ 'ಅತ್ಯುತ್ತಮ ಚಾಲಕ' ಮತ್ತು 'ಕ್ಯಾಪ್ಟನ್ ಕೂಲ್' ಎಂದು ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದು ಕಳೆದ ಗುರುವಾರ ಕಬಿನಿ ರಿಸರ್ವ್‌ನಲ್ಲಿ ನಡೆದಿದೆ. ನಾನು ಈ ಮೂಲಕ ವಾಹನದಲ್ಲಿರುವ ವ್ಯಕ್ತಿಯನ್ನು ವಿಶ್ವದ ಅತ್ಯುತ್ತಮ ಬೊಲೆರೋ ಡ್ರೈವರ್ ಎಂದು ಪ್ರಶಂಸಿಸುತ್ತೇನೆ. ಆತನಿಗೆ ಕ್ಯಾಪ್ಟನ್ ಕೂಲ್ ಎಂದು ಅಡ್ಡಹೆಸರು ಇಡುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಮಹೀಂದ್ರಾ ಬೊಲೆರೊ ಚಾಲಕನು ಡ್ರೈವಿಂಗ್‌ನಲ್ಲಿ ಎಷ್ಟು ನುರಿತನಾಗಿದ್ದ ಎಂಬುದನ್ನು ಈ ವಿಡಿಯೋ ತೊರುತ್ತದೆ. ಅವನ ಸಮಯ ಪ್ರಜ್ಞೆ ಮತ್ತು ಚಾಲಾಕಿತನದ ವಾಹನ ಚಾಲನೆಯಿಂದ ಕಾರಿನಲ್ಲಿದ್ದವರ ಪ್ರಾಣವನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈತನ ಡ್ರೈವಿಂಗ್ ಶೈಲಿಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

ಮೊದಲಿಗೆ ಈ ವಿಡಿಯೋವನ್ನು ಸುಪ್ರಿಯಾ ಸಾಹು ಐಎಎಸ್ ತಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದರು. ಆಕೆ ಪೋಸ್ಟ್ ಮಾಡಿರುವ ವಿಡಿಯೋವನ್ನು ಆಕೆಯ ಸ್ನೇಹಿತೆ ಶೇರ್ ಮಾಡಿದ್ದರು.

ಘಟನೆ ಕುರಿತು ಒಂದಿಷ್ಟು ವಿವರವಾದ ಮಾಹಿತಿ
ವೀಡಿಯೊದಲ್ಲಿ ಕಂಡುಬರುವ ಸಫಾರಿ ಜೀಪ್ ಮಹೀಂದ್ರಾ ಬೊಲೆರೊ ಟೂರಿಸ್ಟ್‌ಗಳೊಂದಿಗೆ ರಾಷ್ಟ್ರೀಯ ಉದ್ಯಾನವನದೊಳಗೆ ಸಂಚರಿಸುತ್ತಿತ್ತು. ಈ ವೇಳೆ ಆನೆ ರಸ್ತೆ ಮಧ್ಯೆ ನಿಂತಿತ್ತು. ಆನೆ ಕಡಗೆ ನಿಧಾನವಾಗಿ ಜೀಪ್ ಮುಂದೆ ಸಾಗುವಾಗ ಆನೆಯು ವಾಹನದ ಶಬ್ದವನ್ನು ಕೇಳಿ ರೊಚ್ಚಿಗೆದ್ದಿದೆ.

ಆನೆ ಜೀಪನ್ನು ನೋಡಿದ ಕೂಡಲೇ ಜೀಪಿನತ್ತ ಓಡಿಬರುತ್ತಿದ್ದ ಆನೆಯನ್ನು ಕಂಡ ಚಾಲಕ ಕೂಡಲೇ ರಿವರ್ಸ್ ಗೇರ್ ಹಾಕಿ ರಿವರ್ಸ್ ಓಡಿಸಲು ಆರಂಭಿಸಿದ. ಆನೆಯು ಅಪಾಯಕಾರಿಯಾಗಿ ವಾಹನವನ್ನು ಸಮೀಪಿಸುತ್ತಿದ್ದರೂ ಚಾಲಕ ಮಾತ್ರ ತನ್ನ ಶಾಂತತೆಯನ್ನು ಕಳೆದುಕೊಳ್ಳದೇ ಬೊಲೆರೊವನ್ನು ಹಿಮ್ಮುಖವಾಗಿ ಬಹು ದೂರ ಓಡಿಸಿದ್ದಾನೆ.

ಈ ವೀಡಿಯೋದಲ್ಲಿ ಆನೆಯು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾಗ ಆನೆಯ ಸೊಂಡಿಲು ಮತ್ತು ದಂತವು ವಾಹನದ ಬಾನೆಟ್‌ಗೆ ತಾಗುವುದನ್ನು ಗಮನಿಸಬಹುದು. ಸ್ವಲ್ಪ ದೂರದವರೆಗೆ ಬೊಲೆರೊವನ್ನು ಬೆನ್ನಟ್ಟಿದ ನಂತರ, ಕಾರನ್ನು ಹಿಡಿಯಲು ವಿಫಲವಾದಾಗ ಆನೆಯು ವಾಹನವನ್ನು ಬೆನ್ನಟ್ಟುವುದನ್ನು ನಿಲ್ಲಿಸಿ ಕಾಡಿನೊಳಗೆ ಓಡಿದೆ.

ವೀಡಿಯೊಗೆ 35,000ಕ್ಕೂ ಹೆಚ್ಚು ಲೈಕ್‌ಗಳು
ಅನೇಕರು ಕಾಮೆಂಟ್ ವಿಭಾಗದಲ್ಲಿ ವ್ಯಕ್ತಿಯ ಚಾಲನಾ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರ "ಅಪಾಯಕಾರಿ ಎನ್ಕೌಂಟರ್,.... ಪಾರಾಗಲು ಅದೃಷ್ಟವಿರಬೇಕು. ಚಾಲಕನ ಶಾಂತ ಮತ್ತು ಕ್ಷಿಪ್ರ ಕ್ರಮವು ರಿವರ್ಸ್‌ನಲ್ಲಿ ಹೋಗುವ ಮೂಲಕ ಅವರನ್ನು ಉಳಿಸಿದೆ" ಎಂದು ಬರೆದರೆ, ಇನ್ನೊಬ್ಬ ಬಳಕೆದಾರ "ಸಂದರ್ಭಗಳು ಕೈ ಮೀರಿ ಹೋದಾಗ ಶಾಂತವಾಗಿರುವುದನ್ನು ಅವರು ತೋರಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಎಲ್ಲಾ ಇಂದ್ರಿಯಗಳನ್ನು ನಿರ್ವಹಿಸುವುದು ಮತ್ತು ನಿಯಂತ್ರಿಸುವುದು ಕಷ್ಟವೇನಲ್ಲ ಎಂದಿದ್ದಾರೆ."

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸಾಮಾನ್ಯವಾಗಿ ಕಾರು ಓಡಿಸುವಾಗ ಕಾಡು ಪ್ರಾಣಿಗಳ ದಾಳಿಯಾದಲ್ಲಿ ಹಲವರು ಗಾಬರಿಗೊಳಗಾಗುವುದರಿಂದಲೇ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಒಂದು ವೇಳೆ ಬೊಲೆರೊ ಚಾಲಕ ಕೂಡ ಗಾಬರಿಗೊಳಗಾಗಿದ್ದರೇ ಪರಿಸ್ಥಿತಿ ಬೇರೆಯೇ ರೀತಿ ಇರುತ್ತಿತ್ತು. ಹಾಗಾಗಿ ಪರಿಸ್ಥಿತಿಗಳು ಕೈ ಮೀರಿ ಹೋದರೂ ಶಾಂತತೆಯನ್ನು ಕಳೆದುಕೊಳ್ಳಬಾರದು.


Click it and Unblock the Notifications