ಅಭಿವೃದ್ಧಿ ಪಥದಲ್ಲಿ ಕರ್ನಾಟಕ.. ಆನಂದ್ ಮಹೀಂದ್ರಾ ಮೆಚ್ಚುಗೆ
ದೇಶದ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರುತ್ತಾರೆ. ಸದಾ ಒಂದಿಲ್ಲೊಂದು ವಿಚಾರಗಳ ಮೂಲಕ ಗಮನ ಸೆಳೆಯುವ ಅವರು, ಇದೀಗ ಕರ್ನಾಟಕಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಆನಂದ್ ಮಹೀಂದ್ರಾ ಅವರು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಂದೇ ಭಾರತ್ ರೈಲು, ನೂತನವಾಗಿ ನಿರ್ಮಿಸಿರುವ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಸೇತುವೆ ಕೆಳಗೆ ಹಾದುಹೋಗುವ ಡ್ರೋನ್ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ವಿಶ್ವದರ್ಜೆಯ ಗುಣಮಟ್ಟದ ಮೂಲಸೌಕರ್ಯದ ಅಭಿವೃದ್ಧಿಯು ಭಾರತವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಬರೋಬ್ಬರಿ 21 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 56 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 5,353 ಬಾರಿ ರೀ ಟ್ವೀಟ್ ಮಾಡಲಾಗಿದೆ.

ಈ ಪೋಸ್ಟ್ ಗೆ ನೆಟ್ಟಿಗರು ಕೂಡ ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ವಿದೇಶಿಗನೊಬ್ಬ ಭಾರತದಲ್ಲಿ ಇಷ್ಟು ಕಡಿಮೆ ಟ್ರಾಫಿಕ್ ಇರುವ ರಸ್ತೆಯನ್ನು ನೋಡಿಲ್ಲ ಎಂದು ಹೇಳಿದರೆ, ಇದು ಸರಕು ಸಾಗಾಟದ ವೆಚ್ಚವನ್ನು ಉಳಿಸುತ್ತದೆ. ಅತ್ಯುನ್ನತವಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ದೇಶಕ್ಕೆ ದೀರ್ಘಾವಧಿಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 10 ವರ್ಷಗಳ ಹಿಂದೆ, ಈ ರಸ್ತೆಯಲ್ಲಿ ಮೈಸೂರು ತಲುಪಲು 4 - 5 ಗಂಟೆಗಳ ಸಮಯ ಬೇಕಿತ್ತು. ಈ ಎಕ್ಸ್‌ಪ್ರೆಸ್‌ವೇ ಮೂಲಕ ಕೇವಲ 1.5 ಗಂಟೆಗಳಲ್ಲಿ ತಲುಪಬಹುದು ಎಂದು ಬರೆದುಕೊಂಡಿದ್ದಾರೆ.
ಇದೇ ವಿಡಿಯೋವನ್ನು ಫೆಬ್ರುವರಿ 10 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಚ್ಚಿಕೊಂಡಿದ್ದರು. 'ಎಂತಹ ದೃಶ್ಯ! ವಂದೇ ಭಾರತ್ ಎಕ್ಸ್‌ಪ್ರೆಸ್ ಜೊತೆಗೆ ದಶಪಥದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ... ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಯು ಕರ್ನಾಟಕದ ಬೆಳವಣಿಗೆಯನ್ನು ಸಾಕ್ಷೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡುವ ಮೂಲಕ ನಮ್ಮ ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಅದ್ಭುತಗಳನ್ನು ಮಾಡುತ್ತಿದೆ' ಎಂದು ಬರೆದುಕೊಂಡಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಟ್ವೀಟ್ ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರತಿಕ್ರಿಯಿಸಿದ್ದರು. 'ನಮ್ಮ ದೇಶದ ಜನರಿಗೆ ಉತ್ತಮ ಮೂಲಸೌಕರ್ಯದ ಅಗತ್ಯವಿದೆ. ಅದಕ್ಕಾಗಿ ನಮ್ಮ ಸರ್ಕಾರ ಯಾವಾಗಲೂ ಶ್ರಮಿಸುತ್ತದೆ. ಮೂಲ ಮೂಲಸೌಕರ್ಯ ಸೃಷ್ಟಿಯಲ್ಲಿನ ನಮ್ಮ ಯೋಜನೆಗಳನ್ನು ಜಾಗತಿಕವಾಗಿ ಮೆಚ್ಚಿಕೊಳ್ಳಲಾಗಿದೆ' ಎಂದು ರೀ ಟ್ವೀಟ್ ಮಾಡಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಗ್ಗೆ ಹೇಳುವುದಾದರೆ, ಇದು ದಶಪಥದ (NH 275) ಹೆದ್ದಾರಿಯಾಗಿದ್ದು, ಎರಡು ಕಡೆ ತಲಾ 3 ಲೈನ್ ಒಳಗೊಂಡಿರುವ 6 ಲೈನ್ ಎಕ್ಸ್‌ಪ್ರೆಸ್ ವೇ ಇರಲಿದ್ದು, ಉಳಿದಂತೆ ಎರಡು ಬದಿಯಲ್ಲಿ ತಲಾ 2 ಲೇನ್‌ಗಳಿರುವ ಸರ್ವಿಸ್ ರಸ್ತೆ ಇರಲಿದೆ.
ಈ ಎಕ್ಸ್‌ಪ್ರೆಸ್‌ವೇ 9 ದೊಡ್ಡ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್‌ಪಾಸ್, 13 ಪಾದಚಾರಿ ಅಂಡರ್ ಪಾಸ್‍ಗಳನ್ನು ಈ ಹೊಂದಿದ್ದು, ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಸಲಾಗಿದ್ದು, 118 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಿದ್ದು, ರೂ.8172 ಕೋಟಿಯನ್ನು ವ್ಯಯಿಸಲಾಗಿದೆ.
ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಆಗಿರುವ ದೊಡ್ಡ ಮಟ್ಟದ ಪ್ರಯೋಜನವೆಂದರೆ ಪ್ರಯಾಣದ ಅವಧಿಯು ತುಂಬಾ ಕಡಿಮೆಯಾಗಲಿದೆ. ಈ ಹಿಂದೆ, ಬೆಂಗಳೂರಿನಿಂದ ಮೈಸೂರು ತಲುಪಲು 150 ನಿಮಿಷ ಬೇಕಿತ್ತು. ಅದು ಕೇವಲ 90 ನಿಮಿಷಕ್ಕೆ ಇಳಿಯಲಿದ್ದು, ಇದರಿಂದ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಮುಂದಿನ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರೇ ಈ ರಸ್ತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಶಿಘ್ರದಲೇ ಟೋಲ್ ಸಂಗ್ರಹವು ಆರಂಭವಾಗಲಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಸದ್ಯ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆನಂದ್ ಮಹೀಂದ್ರಾ ಮಾಡಿರುವ ಟ್ವೀಟ್ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಒಂದು ಕ್ಷಣ ಕರ್ನಾಟಕವನ್ನು ತಿರುಗಿ ನೋಡುವಂತೆ ಮಾಡಿದೆ. ಆದರೆ, ಸಾಕಷ್ಟು ಅತ್ಯಾಧುನಿಕವಾಗಿರುವ ಈ ರಸ್ತೆಯಲ್ಲಿ ಕೇವಲ ಕಾರು, ಬಸ್ ಹಾಗೂ ಟ್ರಕ್ ಸೇರಿದಂತೆ ದೊಡ್ಡ ಮಟ್ಟದ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ದ್ವಿಚಕ್ರ ವಾಹನ ಹಾಗೂ ಆಟೋಗಳ ಓಡಾಟಕ್ಕೆ ಅವಕಾಶ ನೀಡದಿರುವುದು ಬೇಸರದ ಸಂಗತಿಯಾಗಿದೆ.


Click it and Unblock the Notifications