ಅನಾಥವಾದ ಅಂಬಾನಿ ಮದುವೆ ಕಾರುಗಳು: ಎಲ್ಲವೂ ಬಾಡಿಗೆ! ಇದು ಬಜೆಟ್ ಮದುವೆ?
ಮಳೆ ನಿಂತರೂ ತುಂತುರು ಮಳೆ ನಿಲ್ಲುವುದಿಲ್ಲ ಎಂಬಂತೆ ಅನಂತ್ ಅಂಬಾನಿ ಅವರ ಮದುವೆ ಮುಗಿದರೂ, ಮದುವೆಯ ಬಗ್ಗೆ ಆಸಕ್ತಿದಾಯಕ ಮಾಹಿತಿ ಹೊರಬರುತ್ತಲೇ ಇದೆ. ವರದಿಗಳ ಪ್ರಕಾರ, ಮುಖೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮದುವೆಗೆ ಸುಮಾರು 5,000 ಕೋಟಿ ರೂ. ಖರ್ಚು ಮಾಡಿರುವುದಾಗಿ ಹೇಳಲಾಗುತ್ತಿದೆ. ಮುಖೇಶ್ ಅಂಬಾನಿ ನೂರಾರು ಐಷಾರಾಮಿ ಕಾರುಗಳನ್ನು ಹೊಂದಿದ್ದರೂ, ಮದುವೆಗೆಂದೇ ಸಾವಿರಾರು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಮೂಲಕ ಮದುವೆಗೆ ಎಷ್ಟು ಅತಿಥಿಗಳು ಭಾಗವಹಿಸಿದ್ದರು ಎಂಬುದನ್ನು ಊಹಿಸಬಹುದು. ಈಗ ಆ ಕಾರುಗಳ ವಿಡಿಯೋವೊಂದು ವೈರಲ್ ಆಗಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನಲ್ಲಿ ಅದ್ದೂರಿಯಾಗಿ ವಿವಾಹವಾದರು. ಜುಲೈ 12 ರಿಂದ 14 ರವರೆಗೆ ಮೂರು ದಿನಗಳ ಕಾಲ ನಡೆದ ಈ ಮದುವೆಯಲ್ಲಿ ದೇಶ-ವಿದೇಶಗಳಿಂದ ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ವಿವಿಐಪಿಗಳು ಭಾಗವಹಿಸಿದ್ದರು. ಈ ಮದುವೆ ಎಷ್ಟು ಭವ್ಯವಾಗಿತ್ತೆಂದರೇ ಅತಿಥಿಗಳನ್ನು ಕರೆತರಲು ಸುಮಾರು 100 ವಿಮಾನಗಳನ್ನು ಬಾಡಿಗೆ ಪಡೆದಿದ್ದರು ಎನ್ನಲಾಗಿದೆ.

ನೂರಾರು ವಿಮಾನಗಳನ್ನು ಬಾಡಿಗೆ ಪಡೆದವರಿಗೆ, ಐಷಾರಾಮಿ ಕಾರುಗಳನ್ನು ಬಾಡಿಗೆ ಪಡೆಯುವುದು ದೊಡ್ಡ ವಿಷಯವೇ? ಹೌದು. ಈ ವಿಷಯದ ಕುರಿತು ಕೆಲ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಕಾರುಗಳಲ್ಲಿ ತೆರಳುವ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಆರ್ಟಿಸ್ಟ್ ಜಾನ್ವಿ ಎಂಬುವರು ಈಗ ಇನ್ಸ್ಟಾಗ್ರಾಮ್ ಪುಟದಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅನಾಥವಾಗಿ ಹೊರಟ ಐಷಾರಾಮಿ ಕಾರುಗಳು: ಅನಂತ್ ಅಂಬಾನಿ ಮದುವೆಯಿಂದ ದಿಗ್ಭ್ರಮೆಗೊಂಡಿದ್ದ ಮುಂಬೈ ನಗರವೀಗ ಮದುವೆ ಮುಗಿದು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಅನಂತ್ ಅಂಬಾನಿ ಮದುವೆಗೆಂದು ಬಾಡಿಗೆಗೆ ತರಿಸಲಾಗಿದ್ದ ಐಷಾರಾಮಿ ಕಾರುಗಳು ಅನಾಥವಾಗಿ ತಮ್ಮ ಶೆಡ್‌ಗಳಿಗೆ ಮರಳುತ್ತಿವೆ. ಇದನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

ಈ ವೀಡಿಯೊದಲ್ಲಿ ತೋರಿಸಲಾದ ಹೆಚ್ಚಿನ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ, ಕೆಲವು ಕಾರುಗಳಿಗೆ ಹಳದಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಬಹುತೇಕರು ಇವೆಲ್ಲವೂ ಅಂಬಾನಿಯವರ ಕಾರುಗಳು ಎಂದುಕೊಂಡಿದ್ದರು. ಆದರೆ ಈಗ ಇವು ಬಾಡಿಗೆ ಕಾರುಗಳು ಎಂಬುದು ಬಹಿರಂಗವಾಗಿದೆ.
ಅತಿಥಿಗಳನ್ನು ಸಾಗಿಸಲು ಬಾಡಿಗೆ ಪಡೆದಿದ್ದ ಬಿಎಂಡಬ್ಲ್ಯು ಎಕ್ಸ್ 5, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಎ-ಕ್ಲಾಸ್, ಆಡಿ ಕ್ಯೂ 7, ಬಿಎಂಡಬ್ಲ್ಯು 7-ಸೀರಿಸ್, ರೇಂಜ್ ರೋವರ್, ಮರ್ಸಿಡಿಸ್ ಬೆಂಝ್ ಜಿಎಲ್ಎಸ್, ಟೊಯೊಟಾ ಲ್ಯಾಂಡ್ ಕ್ರೂಸರ್, ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತಹ ಐಷಾರಾಮಿ ಕಾರುಗಳು ಮದುವೆ ಮುಗಿದ ನಂತರ ಸಾಲಾಗಿ ಹಿಂತಿರುಗುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ವರದಿಗಳ ಪ್ರಕಾರ, ಕೆಲ ಅತಿಥಿಗಳಿಗಾಗಿ ಮುಖೇಶ್ ಅಂಬಾನಿಯವರ ಸ್ವಂತ ಗ್ಯಾರೇಜ್‌ನಿಂದ ಐಷಾರಾಮಿ ಕಾರುಗಳನ್ನು ಒದಗಿಸಲಾಗಿದೆ. ಹಾಗಾಗಿಯೇ ವೀಡಿಯೊದಲ್ಲಿ ಕೆಲವು ಕಾರುಗಳು ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ. ಮದವೆ ಬಳಿಕವೂ ಅಥಿತಿಗಳನ್ನು ಏರ್‌ಪೋರ್ಟ್‌ವರೆಗೆ ಸಾಗಿಸಲು ಐಷಾರಾಮಿ ಕಾರುಗಳನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಒಟ್ಟಾರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡರಿಯದಂತಹ ಅದ್ದೂರಿ ಮದುವೆ ಇದಾಗಿದೆ. ಸುಖಾ-ಸುಮ್ಮನೆ ಹಣವನ್ನು ಪೋಲು ಮಾಡಲಾಗಿದೆ ಎಂದು ಹಲವರು ವಾದಿಸಿದರೆ, ಇನ್ನೂ ಕೆಲವರು ತಮ್ಮ ಹಣ ತಮ್ಮಿಷ್ಟವೆಂದು ಹೇಳುತ್ತಿದ್ದಾರೆ. ಈ ಮದುವೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








