ಬೆಂಗಳೂರಿನಲ್ಲಿ ನೋಡೋಕೆ ಸಾಧ್ಯ: ಗೂಗಲ್ ಮಾಜಿ ಉದ್ಯೋಗಿ ಉಬರ್ ಬೈಕ್ ಟ್ಯಾಕ್ಸಿ ಚಾಲಕ, ಭಾರೀ ಮೆಚ್ಚುಗೆ!
ಬೆಂಗಳೂರು (Bengaluru) ಪ್ರತಿದಿನ ಒಂದಿಲ್ಲೊಂದು ಅಚ್ಚರಿ ಘಟನೆಗೆ ಸಾಕ್ಷಿಯಾಗುತ್ತದೆ. ಗೂಗಲ್ (Google) ಮಾಜಿ ಉದ್ಯೋಗಿಯೊಬ್ಬರು ಉಬರ್ ಬೈಕ್ ಟ್ಯಾಕ್ಸಿ (Uber bike taxi) ಓಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ದೇಶದ ದೊಡ್ಡ ದೊಡ್ಡ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ಓಲಾ, ಉಬರ್ ಸೇರಿದಂತೆ ಪ್ರಮುಖ ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತೇವೆ. ಇದು ಎಷ್ಟೋ ಮಂದಿಯ ಜೀವನಕ್ಕೆ ಆಧಾರವಾಗಿದ್ದು, ಅವರ ಬದುಕಿನ ಬಂಡಿ ಎಳೆಯಲು ಸಹಾಯಕವಾಗಿದೆ. ಸದ್ಯ, ಗೂಗಲ್ ಮಾಜಿ ಉದ್ಯೋಗಿಯೊಬ್ಬರು ಬೈಕ್ ಟ್ಯಾಕ್ಸಿ ಚಾಲಕರಾಗಿದ್ದಾರೆ. ಆಶ್ಚರ್ಯವಾದರೂ ಇದು ನಿಜ.

ರಾಘವ್ ದುವಾ ಎಂಬುವವರೂ ಕೆಲಸಕ್ಕೆ ತೆರಳಲು ಎಂದಿನಂತೆ ಉಬರ್ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಾರೆ. ತಮ್ಮನ್ನು ಪಿಕ್ಅಪ್ ಮಾಡಲು ಬಂದ ಚಾಲಕ ಗೂಗಲ್ ಮಾಜಿ ಉದ್ಯೋಗಿಯೆಂದು ತಿಳಿದು ಅಚ್ಚರಿಗೊಂಡಿದ್ದಾರೆ. ಆ ಬಗ್ಗೆ ಸ್ವತಃ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ರಾಘವ್ ಅವರು, ವಿಡಿಯೋ ಹಂಚಿಕೊಂಡಿದ್ದಾರೆ.
ಜೊತೆಗೆ 'ನನ್ನ ಉಬರ್ ಬೈಕ್ ಟ್ಯಾಕ್ಸಿ ಚಾಲಕ ಗೂಗಲ್ ಮಾಜಿ ಉದ್ಯೋಗಿ, ಹೈದರಾಬಾದ್‌ನಿಂದ 20 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಅವರು, ಬೈಕ್ ಟ್ಯಾಕ್ಸಿ ಓಡಿಸುವ ಮೂಲಕ ನಗರವನ್ನು ಪರಿಚಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ' ಎಂದು ರಾಘವ್ ಹೇಳಿದ್ದಾರೆ. ಈ ಟ್ವೀಟ್ ಭಾರೀ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿ, ಕಾಮೆಂಟ್ ಮಾಡುತ್ತಿದ್ದಾರೆ.

ಪಿಯೂಷ್ ಗಾರ್ಗ್ ಎಂಬ ಟ್ವಿಟರ್ ಬಳಕೆದಾರ, 'ಇದು ನಿಜವಾಗಿಯೂ ಆಕರ್ಷಕವಾಗಿದೆ! ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೀರಿ ಎಂದು ನಾನು ಭಾವಿಸುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವೇದಾಂತ್ ಎಂಬ ನೆಟ್ಟಿಗ, 'ನೆನಪಿಡುವ ಒಂದು ಸಂವಾದ' ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರ 'ನಿಜ, ನಾನು ವಿಶಾಖಪಟ್ಟಣ ಮೂಲದ 53 ವರ್ಷದ ಮಾಜಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಭೇಟಿಯಾದೆ. ಅವರು ಬೈಕ್ ಟ್ಯಾಕ್ಸಿ ಓಡಿಸುವ ಮೂಲಕ ಸ್ಥಳೀಯ ಜನರೊಂದಿಗೆ ಬೆರೆಯಲು ಈಗ, ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ನಗರದ ಎಲ್ಲ ಸ್ಥಳಗಳನ್ನು ಸುತ್ತಲೂ ಮತ್ತು ಅದರ ಮೇಲೆ ಸಾಕ್ಷ್ಯಚಿತ್ರ ಮಾಡುವ ಆಸೆಯನ್ನು ಹೊಂದಿದ್ದಾರೆ' ಎಂದು ಹೇಳಿದ್ದಾರೆ. ಸುದೀಪ್ತ ಎಂಬುವವರು 'ಇದನ್ನು ನಂಬಲಾಗುತ್ತಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.
ಕೆಲವು ಐಟಿ ವೃತ್ತಿಪರರು, ತಮ್ಮ ಉದ್ಯೋಗದಿಂದ ವಿರಾಮ ಪಡೆದು, ಒಂದಷ್ಟು ದಿನ ತಮ್ಮಿಷ್ಟದ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಹಲವಾರು ಬೈಕ್ ಅಥವಾ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಾರೆ. ಮತ್ತಷ್ಟು ಮಂದಿ ಹೋಟೆಲ್ ಸೇರಿದಂತೆ ವಿವಿಧ ಉದ್ಯಮಗಳನ್ನು ಶುರು ಮಾಡಿ, ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇಲ್ಲಿಯೂ ಗೂಗಲ್ ಮಾಜಿ ಉದ್ಯೋಗಿ ಅದೇ ರೀತಿಯ ಕೆಲಸವನ್ನು ಮಾಡಿರಬೇಕು.
ಬೈಕ್ ಟ್ಯಾಕ್ಸಿ ಸೇವೆ ಇಂದಿಗೂ ಭಾರತದಲ್ಲಿ ಕಾನೂನುಬಾಹಿರ. ವೈಯಕ್ತಿಯ ಬಳಕೆಗೆ ಖರೀದಿಸಿದ ಬೈಕ್‌ನ್ನು ಟ್ಯಾಕ್ಸಿ ಸೇವೆ ಒದಗಿಸಲು ಬಳಸುವಂತಿಲ್ಲ. ಅದಕ್ಕೆ ವಾಣಿಜ್ಯ ಪರವಾನಗಿ ಪಡೆಯಬೇಕು. ಇಂತಹ ಸೇವೆಗಳು ಮಹಿಳೆಯರಿಗೆ ಅಸುರಕ್ಷಿತ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಕೆಲವರು, ಬೈಕ್ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸಬೇಕೆಂದು ಕೂಡ ಒತ್ತಾಯಿಸಿದ್ದಾರೆ. ಆದರೆ, ಈ ವಿಚಾರವಾಗಿ ಸರ್ಕಾರ ಮಧ್ಯೆ ಪ್ರವೇಶಿಸಿ, ಎಲ್ಲ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications