ಮತ್ತೊಂದು ಕುಖ್ಯಾತಿ ಹೊಂದಿದ ನಮ್ಮ ಬೆಂಗಳೂರು
ಸಂಚಾರ ದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಯಾವುದೋ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚಾದ್ಯಂತವಿರುವ ಬಹುತೇಕ ನಗರಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ವಾಹನಗಳು ಹೆಚ್ಚಿದಂತೆ ಮೂಲಸೌಕರ್ಯ ಹೆಚ್ಚಾಗದಿರುವುದೇ ಈ ಸಮಸ್ಯೆಗೆ ಮೂಲ ಕಾರಣ.

ಅದರಲ್ಲೂ ಭಾರತದ ಬಹುತೇಕ ನಗರಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಇತ್ತೀಚಿಗೆ ಟಾಂಟಾಂ ಕಂಪನಿಯು ಸಂಚಾರ ದಟ್ಟಣೆಯ ಬಗ್ಗೆ 6 ಖಂಡಗಳ 57 ದೇಶಗಳ 416 ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯ ಫಲಿತಾಂಶವನ್ನು ಈಗ ಪ್ರಕಟಿಸಲಾಗಿದೆ. ಈ ಸಮೀಕ್ಷೆಯು ಭಾರತಕ್ಕೆ ದೊಡ್ಡ ಶಾಕ್ ಅನ್ನು ನೀಡಿದೆ.

ಈ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರವು ಪ್ರಪಂಚದಲ್ಲಿಯೇ ಹೆಚ್ಚು ಸಂಚಾರ ದಟ್ಟಣೆಯನ್ನು ಹೊಂದಿರುವ ನಗರ ಎಂಬ ಕುಖ್ಯಾತಿಗೆ ಒಳಗಾಗಿದೆ. ಬೆಂಗಳೂರಿನ ಜೊತೆಗೆ ಭಾರತದ 3 ನಗರಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರು ಸೇರಿದಂತೆ ಭಾರತದ 4 ನಗರಗಳು ಸೇರಿದಂತಾಗಿದೆ.

ಪ್ರಪಂಚದ ಬೇರೆ ಯಾವ ದೇಶಗಳು ಟಾಪ್ 10 ಪಟ್ಟಿಯಲ್ಲಿ ಇಷ್ಟೊಂದು ನಗರಗಳನ್ನು ಹೊಂದಿಲ್ಲ. ಇದರಿಂದಾಗಿ ಭಾರತದ ನಗರಗಳಲ್ಲಿ ಹೆಚ್ಚು ವಾಹನ ದಟ್ಟಣೆ ಇರುವುದು ತಿಳಿದು ಬರುತ್ತದೆ. ಈ ಪಟ್ಟಿಯಲ್ಲಿ ಫಿಲಿಪೈನ್ಸ್, ಕೊಲಂಬಿಯಾ, ರಷ್ಯಾ, ಪೆರು, ಟರ್ಕಿ ಹಾಗೂ ಇಂಡೋನೇಷ್ಯಾದ ನಗರಗಳು ಸ್ಥಾನ ಪಡೆದಿವೆ.

ಬೆಂಗಳೂರಿನ ಜೊತೆಗೆ ದೆಹಲಿ, ಮುಂಬೈ, ಪುಣೆ ಈ ಪಟ್ಟಿಯಲ್ಲಿರುವ ಭಾರತದ ಇತರ ನಗರಗಳಾಗಿವೆ. ಬೆಂಗಳೂರು 71% ಸಂಚಾರ ದಟ್ಟಣೆಯೊಂದಿಗೆ ಪ್ರಪಂಚದಲ್ಲಿಯೇ ನಂ 1 ಸ್ಥಾನವನ್ನು ಪಡೆದಿದೆ. 70% ದಟ್ಟಣೆಯೊಂದಿಗೆ ಫಿಲಿಪೈನ್ಸ್ ರಾಜಧಾನಿ ಮನಿಲಾ ಎರಡನೇ ಸ್ಥಾನದಲ್ಲಿದೆ.

ಕೊಲಂಬಿಯಾದ ರಾಜಧಾನಿ 68% ದಟ್ಟಣೆಯೊಂದಿಗೆ ಮೂರನೇ ಸ್ಥಾನವನ್ನು ಪಡೆದಿದ್ದರೆ, ಮಹಾರಾಷ್ಟ್ರದ ರಾಜಧಾನಿ ಮುಂಬೈ ಮಹಾನಗರವು 65% ದಟ್ಟಣೆಯೊಂದಿಗೆ 4ನೇ ಸ್ಥಾನವನ್ನು ಪಡೆದಿದೆ. 5ನೇ ಸ್ಥಾನದಲ್ಲಿರುವ ಪುಣೆನಲ್ಲಿ 59% ದಟ್ಟಣೆ ಇದೆಯೆಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.

6ನೇ ಸ್ಥಾನದಲ್ಲಿರುವ ರಷ್ಯಾದ ಮಾಸ್ಕೋ ನಗರವು ಸಹ 59% ಸಂಚಾರ ದಟ್ಟಣೆಯನ್ನು ಹೊಂದಿದೆ. ಪೆರು ರಾಜಧಾನಿ ಲಿಮಾ ನಗರವು 57% ದಟ್ಟಣೆಯೊಂದಿಗೆ 7ನೇ ಸ್ಥಾನ, ದೆಹಲಿ 56% ದಟ್ಟಣೆಯೊಂದಿಗೆ 8ನೇ ಸ್ಥಾನ ಹಾಗೂ ಟರ್ಕಿಯ ಇಸ್ತಾನ್‍ಬುಲ್ 55% ದಟ್ಟಣೆಯೊಂದಿಗೆ 9ನೇ ಸ್ಥಾನ ಹಾಗೂ ಇಂಡೋನೇಷ್ಯಾದ ಜಕರ್ತಾ ನಗರವು 53% ದಟ್ಟಣೆಯೊಂದಿಗೆ 10ನೇ ಸ್ಥಾನದಲ್ಲಿದೆ.

ಉದ್ಯಾನ ನಗರಿ, ಭಾರತದ ಐಟಿ ರಾಜಧಾನಿ ಎಂಬ ಖ್ಯಾತಿಯನ್ನು ಹೊಂದಿರುವ ಬೆಂಗಳೂರು ಈಗ ಪ್ರಪಂಚದಲ್ಲಿಯೇ ಹೆಚ್ಚು ಟ್ರಾಫಿಕ್ ಹೊಂದಿರುವ ನಗರವೆಂಬ ಕುಖ್ಯಾತಿಯನ್ನು ಸಹ ಪಡೆದಿದೆ. ಬೆಂಗಳೂರಿನಲ್ಲಿ 2019ರ ಆಗಸ್ಟ್ 20ರಂದು ಹೆಚ್ಚು ಸಂಚಾರ ದಟ್ಟಣೆ ಉಂಟಾಗಿತ್ತು.

ಅಂದು ಬೆಂಗಳೂರಿನಲ್ಲಿ 103%ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. 2019ರ ಏಪ್ರಿಲ್ 6ರಂದು ಅತಿ ಕಡಿಮೆ ಸಂಚಾರ ದಟ್ಟಣೆ ಉಂಟಾಗಿತ್ತು. ಅಂದು ಕೇವಲ 30%ನಷ್ಟು ಸಂಚಾರ ದಟ್ಟಣೆ ಕಂಡು ಬಂದಿದೆ. ಬೆಂಗಳೂರಿನ ನಿವಾಸಿಗಳು ಪ್ರತಿವರ್ಷ 243 ಗಂಟೆಗಳಷ್ಟು ಕಾಲವನ್ನು ಟ್ರಾಫಿಕ್‍ನಲ್ಲಿ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಅಂದರೆ ಸುಮಾರು 10 ದಿನಗಳಿಗೂ ಹೆಚ್ಚು ಕಾಲವನ್ನು ಟ್ರಾಫಿಕ್‍ನಲ್ಲಿ ಕಳೆಯುತ್ತಿದ್ದಾರೆ. ಮುಂಬೈನಲ್ಲಿ ಅತಿ ಹೆಚ್ಚು ದಟ್ಟಣೆಯು 2019ರ ಸೆಪ್ಟೆಂಬರ್ 9ರಂದು ಉಂಟಾಗಿತ್ತು. ಮುಂಬೈ ನಿವಾಸಿಗಳು ಸರಾಸರಿ 209 ಗಂಟೆಗಳನ್ನು ಟ್ರಾಫಿಕ್ ಜಾಮ್‍ನಲ್ಲಿ ಕಳೆಯುತ್ತಿದ್ದಾರೆ.

ಪುಣೆನಲ್ಲಿ ಹೆಚ್ಚು ದಟ್ಟಣೆಯು 2019ರ ಆಗಸ್ಟ್ 2ರಂದು ಉಂಟಾಗಿತ್ತು. ಪುಣೆ ನಿವಾಸಿಗಳು ಸರಾಸರಿ 193 ಗಂಟೆಗಳನ್ನು ಟ್ರಾಫಿಕ್‍ನಲ್ಲಿ ಕಳೆಯುತ್ತಿದ್ದಾರೆ. ರಾಜಧಾನಿ ದೆಹಲಿಯಲ್ಲಿ 2019ರ ಅಕ್ಟೋಬರ್ 23ರಂದು ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿತ್ತು. ದೆಹಲಿಯ ನಿವಾಸಿಗಳು ಸರಾಸರಿ 190 ಗಂಟೆಗಳನ್ನು ಟ್ರಾಫಿಕ್‍ನಲ್ಲಿ ಕಳೆಯುತ್ತಿದ್ದಾರೆ.

% ಏನು ಹೇಳುತ್ತದೆ ಎಂದು ನೋಡುವುದಾದರೆ, ಯಾವುದಾದರೂ ನಗರದ ದಟ್ಟಣೆ 53% ಆಗಿದ್ದರೆ, ನಿಮ್ಮ ಪ್ರಯಾಣದ ಅವಧಿಯು ಸಾಮಾನ್ಯ ಟ್ರಾಫಿಕ್ ಜಾಮ್‍ಗೆ ಹೋಲಿಸಿದರೆ 53%ನಷ್ಟು ಹೆಚ್ಚಾಗಿರುತ್ತದೆ ಎಂಬುದಾಗಿದೆ.


Click it and Unblock the Notifications








