Expressway: ಸಾವಿನ ಹೆದ್ದಾರಿಯಾದ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ.. 5 ತಿಂಗಳಲ್ಲಿ ಬಲಿಯಾದವರೆಷ್ಟು?
ಬೆಂಗಳೂರು - ಮೈಸೂರು ನಡುವಿನ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೂ ಮೊದಲಿನಿಂದಲೇ ಹಲವಾರು ವಿಚಾರಗಳಿಂದ ಸುದ್ದಿಯಾಗಿತ್ತು. ಇದೀಗ, ಈ ರಸ್ತೆ 'ಸಾವಿನ ಹೆದ್ದಾರಿ'ಯಾಗಿ ಬದಲಾದಂತೆ ಭಾಸವಾಗಿದ್ದು, ಕಳೆದ ಕೆಲವು ತಿಂಗಳಲ್ಲಿ ಹತ್ತಾರು ಜನರನ್ನು ಬಲಿ ಪಡೆದಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸದ್ಯ, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 55 ಕಿಲೋಮೀಟರ್ ಎಕ್ಸ್‌ಪ್ರೆಸ್ ವೇ ಹಾದು ಹೋಗುತ್ತದೆ. ಜನವರಿಯಿಂದ ಮೇ ತಿಂಗಳವರೆಗೆ ಇಲ್ಲಿ ಸುಮಾರು 570 ಅಪಘಾತ ಪ್ರಕರಣಗಳು ವರದಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 52 ಜನರು ತೀವ್ರತರವಾಗಿ ಗಾಯಗೊಂಡಿದ್ದಾರೆ. 270ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣ ಹಾನಿಯಂತಹ ಅಪಾಯದಿಂದ ಪಾರಾಗಿದ್ದಾರೆ. ಇದು ಸುತ್ತಮುತ್ತಲಿನ ಜನರಲ್ಲಿ ಭೀತಿ ಹುಟ್ಟಿಸಿದೆ.

ಎಕ್ಸ್‌ಪ್ರೆಸ್ ವೇ ಹಾಗೂ ಸರ್ವಿಸ್ ರಸ್ತೆಯಲ್ಲಿ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚಿನ ಸ್ವೀಡ್ ನಲ್ಲಿ ಚಲಿಸುತ್ತಿವೆ. ಇದು ಅಪಘಾತಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ವಾದವಾಗಿದೆ. ಇದಿಷ್ಟೇ ಅಲ್ಲದೆ, ಅವೈಜ್ಞಾನಿಕ ಕಾಮಗಾರಿಯಿಂದಲ್ಲೂ ಆಕ್ಸಿಡೆಂಟ್ ಸಂಭವಿಸುತ್ತಿವೆ ಎಂದು ಹೇಳಲಾಗಿದೆ. ಎಕ್ಸ್‌ಪ್ರೆಸ್ ಲೋಕಾರ್ಪಣೆಗೊಂಡು 6 ದಿನಕ್ಕೆ ರಾಮನಗರದ ಸಂಗಬಸವನದೊಡ್ಡಿ ಸಮೀಪ ಕೆಳಸೇತುವೆಯಲ್ಲಿ ನೀರು ನಿಂತು, ಸರಣಿ ಅಪಘಾತವಾಗಿತ್ತು. ಅದೇ ಇದಕ್ಕೆ ಸಾಕ್ಷಿ.
ಕೈಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳ ಬೆಳೆವಣಿಗೆಗೆ ಸಹಕಾರಿಯಾಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ನಿರ್ಮಾಣ ಮಾಡಿದ್ದು, ಈ ಹೆದ್ದಾರಿ ನಿರ್ಮಿಸಲು ಬರೋಬ್ಬರಿ ರೂ.8172 ಕೋಟಿಯನ್ನು ವ್ಯಯಿಸಲಾಗಿದೆ. ಈ ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಆಗಿರುವ ದೊಡ್ಡ ಅನುಕೂಲವೆಂದರೆ ಪ್ರಯಾಣದ ಅವಧಿ ಕಡಿಮೆಯಾಗಿರುವುದು.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ದಶಪಥದ ಹೆದ್ದಾರಿಯಾಗಿದ್ದು, ಎರಡು ಕಡೆ ತಲಾ ಮೂರು ಪಥ ಒಳಗೊಂಡಿರುವ 6 ಪಥದ ಎಕ್ಸ್‌ಪ್ರೆಸ್ ವೇ ಇದೆ. ಉಳಿದ ಎರಡು ಬದಿಯಲ್ಲಿ ತಲಾ 2 ಲೇನ್‌ಗಳಿರುವ ಸರ್ವಿಸ್ ರಸ್ತೆ ಇದೆ. ಈ ಮೂಲಕ (NH 275) ದಶಪಥ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಕ್ಸ್‌ಪ್ರೆಸ್ ವೇಯಲ್ಲಿ 9 ಬೃಹತ್ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್‌ಪಾಸ್, 13 ಪಾದಚಾರಿ ಅಂಡರ್ ಪಾಸ್‍ಗಳು ಇವೆ. ಒಟ್ಟು ಎರಡು ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಮಾಡಿದ್ದು, 118 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದೆ. ಇನ್ನು, ಈ ಹೆದ್ದಾರಿ ನಿರ್ಮಾಣದಿಂದ ಬಹುತೇಕ ಊರುಗಳ ಸಣ್ಣ - ಪುಟ್ಟ ವ್ಯಾಪಾರಸ್ಥರಿಗೆ ಉದ್ಯೋಗವೇ ಇಲ್ಲದಂತೆ ಆಗಿದೆ.
ಸದ್ಯ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿತ್ತುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಜೊತೆಗೆ ಎಕ್ಸ್‌ಪ್ರೆಸ್ ವೇ ಬಳಕೆ ಮಾಡುವ ವಾಹನ ಸವಾರರು ನಿರ್ದಿಷ್ಟ ವೇಗ ಮಿತಿಯಲ್ಲಿ ಸಂಚಾರಿ ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸಿದರೆ ಅಪಘಾತವನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications