ಸೀಜ್ ಆದವು ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ವಾಹನಗಳು..!
ಕರೋನಾ ವೈರಸ್‌ನಿಂದಾಗಿ ವಿಶ್ವದ ಎಲ್ಲಾ ದೇಶಗಳು ತತ್ತರಿಸಿವೆ. ಇದರಿಂದ ಭಾರತವೂ ಹೊರತಾಗಿಲ್ಲ. ಭಾರತದಲ್ಲಿ ಕರೋನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೆ 21 ದಿನಗಳ ಲಾಕ್ ಡೌನ್ ಘೋಷಿಸಿದೆ.

ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬಸ್, ರೈಲು, ಮೆಟ್ರೋ ರೈಲು ಹಾಗೂ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ. ಬಹುತೇಕ ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚಿವೆ. ಜನ ಹೊರಗೆ ಬರದಂತೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.

ದೇಶಾದ್ಯಂತ ಈ ಲಾಕ್‌ಡೌನ್ ಮುಂದುವರೆದಿದೆ. ಕರ್ನಾಟಕವೂ ಸಹ ಇದರಿಂದ ಹೊರತಾಗಿಲ್ಲ. ದ್ವಿಚಕ್ರ, ನಾಲ್ಕು ಚಕ್ರಗಳ ಬಳಕೆಯನ್ನು ಏಪ್ರಿಲ್ 14ರವರೆಗೆ ನಿಷೇಧಿಸಲಾಗಿದೆ. ಇದನ್ನು ಮೀರಿ ಯಾರಾದರೂ ಹೊರಗೆ ಬಂದರೆ ಅಂತಹವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಲಾಗಿತ್ತು.

ಈಗ ಮನೆಯಿಂದ ಹೊರಬರುತ್ತಿರುವವರ ವಾಹನಗಳನ್ನು ಬೆಂಗಳೂರು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳಲು ಆರಂಭಿಸಿದ್ದಾರೆ. ಏಪ್ರಿಲ್ 14ರಂದು ದೇಶದಲ್ಲಿ ಲಾಕ್ ಡೌನ್ ಮುಗಿದ ನಂತರ ಈ ವಾಹನಗಳನ್ನು ವಾಪಸ್ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ನಿನ್ನೆ ರಾತ್ರಿಯವರೆಗೆ, ಬೆಂಗಳೂರು ಪೊಲೀಸರು ಎಲ್ಲಾ ರೀತಿಯ 6852 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಜನರು ರಸ್ತೆಗೆ ಬರದಂತೆ ತಡೆಯಲು ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಡಿಜಿಪಿರವರು ನಿನ್ನೆ ಟ್ವೀಟ್ ಮಾಡಿ, ಇದು ಏಪ್ರಿಲ್ ಫೂಲ್ ಪ್ರಾಂಕ್ ಅಲ್ಲ. ಎರಡು / ನಾಲ್ಕು ಚಕ್ರ ವಾಹನಗಳ ಬಳಕೆಯನ್ನು ಏಪ್ರಿಲ್ 14 ರವರೆಗೆ ನಿಷೇಧಿಸಲಾಗಿದೆ. ನೀವು ಈ ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿ ಹೊರ ಬಂದರೆ ನಿಮ್ಮ ವಾಹನವನ್ನು ನಾವು ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ನಡೆದುಕೊಂಡು ಹೋಗಬೇಕೆಂದು ಹಾಗೂ ಪ್ರತಿದಿನ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಬಿಡಬಾರದು ಎಂದು ಅವರು ಹೇಳಿದ್ದರು. ಆದರೆ ಅನಾರೋಗ್ಯದ ಕಾರಣ ಆಸ್ಪತ್ರೆಗಳಿಗೆ ಹೋಗುವವರಿಗೆ ವಿಶೇಷ ಅನುಮತಿ ನೀಡಲಾಗುತ್ತದೆ.

ಈ ಪಾಸ್‌ಗಳನ್ನು ಹತ್ತಿರದ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳಬಹುದು. ಈ ಪಾಸ್‌ಗಳನ್ನು ಪ್ರತಿದಿನ ಹಿಂದಿರುಗಿಸಬೇಕಾಗುತ್ತದೆ. ಬಳಸಿದ ಪಾಸ್‌ಗಳನ್ನು ಹಿಂತಿರುಗಿಸದ ಜನರ ವಾಹನಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದುವರೆಗೂ 6321 ದ್ವಿಚಕ್ರ ವಾಹನ, 227 ತ್ರಿಚಕ್ರ ಹಾಗೂ 304 ನಾಲ್ಕು ಚಕ್ರ ವಾಹನಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.


Click it and Unblock the Notifications