ಚುನಾವಣೆಗೂ ಮುನ್ನವೇ ಬೆಂಗಳೂರು ಸುರಂಗ ರಸ್ತೆ ಕಾಮಗಾರಿ ಆರಂಭ: ವಿಶೇಷತೆಗಳೇನು?
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಲೋಕಸಭೆ ಚುನಾವಣೆಗೆ ಮುನ್ನವೇ 3.9 ಕಿ.ಮೀ ಸುರಂಗ ರಸ್ತೆಯನ್ನು (Bangalore tunnel road) ಪೂರ್ಣಗೊಳಿಸುವ ಕೆಲಸ ಪ್ರಾರಂಭವಾಗಲಿದೆ. ಮೊದಲ ಸುರಂಗ ರಸ್ತೆಯು ಹೆಬ್ಬಾಳದ ಬಳಿಯ ಎಸ್ಟೀಮ್ ಮಾಲ್ ಪ್ರದೇಶದಿಂದ ಬೆಂಗಳೂರು ಅರಮನೆ ಮೈದಾನದವರೆಗೆ ಇರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
"ಆರಂಭಿಕವಾಗಿ 3.9 ಕಿ.ಮೀ ಇರುವ ಸುರಂಗವನ್ನು ನಂತರ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ಕಡೆಗೆ ಸುಮಾರು 17 ಕಿ.ಮೀಗೆ ವಿಸ್ತರಿಸಲಾಗುವುದು. ಚುನಾವಣೆಗೂ ಮುನ್ನವೇ ಇದನ್ನು ಮಾಡಲು ನಾವು ಬಯಸಿದ್ದೇವೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈ ಸುರಂಗ ಯೋಜನೆಗೆ ಒತ್ತಾಯಿಸುತ್ತಿದ್ದಾರೆ. ಏಕೆಂದರೆ ಬೆಂಗಳೂರು ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಮೇಲ್ಮೈ ದಟ್ಟಣೆಯನ್ನು ಸುಲಭಗೊಳಿಸಲು, ಚೆಕ್-ಪಾಯಿಂಟ್ ಪ್ರದೇಶಗಳಲ್ಲಿ ವಾಹನಗಳನ್ನು ತಿರುಗಿಸಲು, ಅವರು ಈ ಹಿಂದೆ 190-ಕಿ.ಮೀ ನಗರ ಸುರಂಗ ನಿರ್ಮಾಣವನ್ನು ಪ್ರಸ್ತಾಪಿಸಿದ್ದರು, ನಗರದಾದ್ಯಂತ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದರು.
ಇದು ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆಯಿಂದ ಸಿರ್ಸಿ ವೃತ್ತ, ಮಾಗಡಿ ರಸ್ತೆ ನಡುವೆ ವಿಸ್ತರಿಸಲಿದೆ.

ಹಾಗೆಯೇ ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆಆರ್ ಪುರಂ, ಸಿಲ್ಕ್ ಬೋರ್ಡ್ ಪ್ರದೇಶಗಳನ್ನು ಗುರುತಿಸಿರುವ ಬಗ್ಗೆ ಹಿಂದೆ ಎಂದು ವರದಿಯಾಗಿತ್ತು. "ಇದು ಅತ್ಯಂತ ದುಬಾರಿ, ಕಷ್ಟಕರವಾದ ಯೋಜನೆ ಮತ್ತು ಸಮಯ ತೆಗೆದುಕೊಳ್ಳುತ್ತದೆ" ಈ ಬಗ್ಗೆ ಹೆಚ್ಚು ಚರ್ಚಿಸಿದ ನಂತರವೇ ಯೋಜನೆಯ ಪ್ರಸ್ತಾಪವನ್ನು ಪ್ರಾರಂಭಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಉತ್ತರ ಮತ್ತು ದಕ್ಷಿಣ ಭಾಗದ ನಡುವೆ 3.9 ಕಿಮೀ ಮೊದಲ ಸುರಂಗವನ್ನು ನಿರ್ಮಿಸಲಾಗುವುದು, ಇದು ಈ ಮಾರ್ಗದಲ್ಲಿ ಪ್ರಮುಖ ಸುರಂಗದ ಭಾಗವಾಗಲಿದೆ. ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ ಸುರಂಗ ಮಾರ್ಗವನ್ನು ರಚಿಸುವ ಮತ್ತೊಂದು ಯೋಜನೆಯು ಸಹ ಕಾರ್ಯದಲ್ಲಿದೆ. ಬೆಂಗಳೂರು ORR ಕಾರಿಡಾರ್, ಸಿಲ್ಕ್ ಬೋರ್ಡ್ ಮತ್ತು ಮಾರತ್ತಹಳ್ಳಿ ನಡುವೆ ಟಿನ್ ಫ್ಯಾಕ್ಟರಿವರೆಗೆ (ಸುಮಾರು 35 ಕಿಮೀ) ಇದು ವ್ಯಾಪಿಸಿದೆ.

ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಈಗಿರುವ ರಸ್ತೆಗಳ ಅಗಲೀಕರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಭೂಮಿಯ ಕೊರತೆ ಮತ್ತು ಭೂಸ್ವಾಧೀನದಲ್ಲಿನ ಸಮಸ್ಯೆಗಳಿಂದಾಗಿ ಎಷ್ಟು ಕಷ್ಟವಾಗಿದೆ ಎಂದು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸುವ ಮೂಲಕ ನಗರದಲ್ಲಿ ಸಂಚಾರ ದಟ್ಟಣೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿಂಗ್ ಹೇಳಿದರು.
'ಸುಗಮ ಸಂಚಾರ-ಬ್ರ್ಯಾಂಡ್ ಬೆಂಗಳೂರು' ಅಡಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪರಿಣಿತ ಸಂಸ್ಥೆಯನ್ನು ತೊಡಗಿಸಿಕೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅವರ ವರದಿ ಆಧರಿಸಿ ಬೆಂಗಳೂರಿನಲ್ಲಿ ದಟ್ಟಣೆ ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುವುದು. ''ಹೆಚ್ಚಿನ ಜನದಟ್ಟಣೆ ಇರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಾಯೋಗಿಕವಾಗಿ ಈ ವರ್ಷ ಸುರಂಗವನ್ನು ನಿರ್ಮಿಸಲಾಗುವುದು.
ಕಾಲುವೆ ಬಫರ್ ವಲಯದಲ್ಲಿ ಲಭ್ಯವಿರುವ ಜಾಗವನ್ನು ಬಳಸಿಕೊಂಡು ಎಲ್ಲಾ ಸೀಸನ್‌ಗಳ ರಸ್ತೆಗಳನ್ನು ನಿರ್ಮಿಸುವ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ 200 ಕೋಟಿ ರೂಪಾಯಿ ವೆಚ್ಚದಲ್ಲಿ 100 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ವರ್ಷ ಹೆಚ್ಚುವರಿ 100 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ತಮ್ಮ ಬಜೆಟ್ ಭಾಷಣದ ಭಾಗವಾಗಿ ಘೋಷಿಸಿದ್ದರು.


Click it and Unblock the Notifications