ಬೆಂಗಳೂರು: ರಾಪಿಡೋ ಸ್ಕೂಟರ್‌ನಲ್ಲಿಯೇ ಮಹಿಳಾ ಉದ್ಯೋಗಿ ಕೆಲಸ, ಸ್ವಲ್ಪ ಯಾಮಾರಿದ್ರೆ... Viral
ಬೆಂಗಳೂರು ಮಹಾನಗರಿ ದೇಶದ ಮಾಹಿತಿ ತಂತ್ರಜ್ಞಾನದ ಹೆಬ್ಬಾಗಿಲೆಂದು ಈಗಾಗಲೇ ವಿಶ್ವಾದ್ಯಂತ ದೊಡ್ಡಮಟ್ಟದಲ್ಲಿ ಜನಪ್ರಿಯತೆಗಳಿಸಿದೆ. ಜೊತೆಗೆ ನಗರದಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟು ಇದ್ದು, ಪ್ರತಿದಿನ ಒಂದಿಲ್ಲೊಂದು ಕಡೆ ಟ್ರಾಫಿಕ್ ಜಾಮ್ ಆಗಿ ಕುಖ್ಯಾತಿಯನ್ನು ಪಡೆದಿದೆ. ಈ ಸಮಸ್ಯೆ ನಿವಾರಿಸಲು ಸಂಚಾರಿ ಪೊಲೀಸರು ಪ್ರಯತ್ನಿಸುತ್ತಲೇ ಇರುತ್ತಾರೆ.
ಏನೇ ಆಗಲಿ.. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೊಂದಬೇಕೆಂದು ಹಲವು ಬೆಂಗಳೂರಿನ ನಿವಾಸಿಗಳು ಸಾರ್ವಜನಿಕ ಸಾರಿಗೆಯಾದ ಮೆಟ್ರೋ, ಬಿಎಂಟಿಸಿ ಮೊರೆ ಹೋಗುತ್ತಾರೆ. ಮತ್ತೆ ಒಂದಷ್ಟು ಜನರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಬಳಕೆ ಮಾಡುತ್ತಾರೆ. ಕೆಲವರ್ಷಗಳಿಂದ ಟ್ಯಾಕ್ಸಿ ಸೇವೆ ಜನಪ್ರಿಯವಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಸರ್ವಿಸ್ ದೊರೆಯುವುದರಿಂದ ಬಹುತೇಕರು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಬೈಕ್ ಟ್ಯಾಕ್ಸಿ ಬಳಸುವವರೇ ಹೆಚ್ಚು.

ಸದ್ಯ, ಒಂದೆರೆಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ಭಾರೀ ವೈರಲ್ ಆಗುತ್ತಿದೆ. ಅದರಲ್ಲಿ ರಾಪಿಡೋ ಬೈಕ್ ನಲ್ಲಿ ಮಹಿಳೆಯೊಬ್ಬಳು ಲ್ಯಾಪ್‌ಟಾಪ್ ಹಿಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಕೆಲವರಿಗೆ ತಮಾಷೆಯಾಗಿ ಕಾಣಬಹುದು. ಆದರೆ, ಬೆಂಗಳೂರಿನ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿಕೊಂಡು, ಕಚೇರಿಗೆ ಸರಿಯಾದ ಸಮಯಕ್ಕೆ ಹೋಗದೆ ಆಕೆ ಪಡುತ್ತಿರುವ ಕಷ್ಟ ಹೇಳತೀರದು.
ಈ ಫೋಟೋವನ್ನು ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿರುವ ದಿನಾಂಕವನ್ನು ಗಮನಿಸಿದರೆ, ಮೇ.16ರಂದು ಇರಬಹುದು. ಆ ದಿನ ಬೆಂಗಳೂರಿನ ದೊಡ್ಡ, ದೊಡ್ಡ ಐಟಿ ಕಂಪನಿಗಳಿರುವ ರಸ್ತೆಯಲ್ಲಿ ಹೇರಳ ಟ್ರಾಫಿಕ್ ಜಾಮ್ ಆಗಿತ್ತು. ಇಬ್ಬಲೂರು ಸಮೀಪದ ಸರ್ವಿಸ್ ರಸ್ತೆಯ ಮಿಲಿಟರಿ ಗೇಟ್ ಬಳಿ, ಟ್ರಕ್ ಮರಕ್ಕೆ ಡಿಕ್ಕಿ ಹೊಡೆದಿದ್ದು ಅದು ಉರುಳಿ ಬಿದ್ದು ಸಂಚಾರ ದಟ್ಟಣೆ ಏರ್ಪಟ್ಟಿತ್ತು.
ಈ ಪೋಸ್ಟ್ ಗೆ ನೆಟ್ಟಿಗರು ಸಹ ಕಾಮೆಂಟ್ ಮಾಡಿದ್ದು, 'ಮರ ಬಿದ್ದು, ಸಂಚಾರ ದಟ್ಟಣೆಯಾದ ಹಿನ್ನೆಲೆ, ಸಿಲ್ಕ್ ಬೋರ್ಡ್ ನಿಂದ ಸರ್ಜಾಪುರವರೆಗೆ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ಬಿಟಿಎಂ ಲೇಔಟ್ ನಿಂದ ಬೆಳ್ಳಂದೂರು ತಲುಪಲು 4 ಗಂಟೆ ಹಿಡಿಯಿತು' ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, 'ಜೀವನದ ಕೆಟ್ಟ ಗುಣಮಟ್ಟ. ನಿಜವಾಗಿಯೂ ನರಕ....' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಮಹಿಳೆ, ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಯಾವುದೇ ಅಪಾಯಗಳು ಆಗಿಲ್ಲ. ಒಂದೊಮ್ಮೆ ವಾಹನಗಳ ಓಡಾಟ ಯಥಾಸ್ಥಿತಿಯಲ್ಲಿ ಇದ್ದಾಗ ಈ ಕೆಲಸ ಮಾಡಿದ್ದರೇ, ಖಂಡಿತ ಅಪಾಯವಾಗುತ್ತಿತ್ತು. ಸ್ಕೂಟರ್‌ನಲ್ಲಿ ಚಾಲಕನ ಹಿಂದೆ ಕುಳಿತು ಕೆಲಸ ಮಾಡುವಾಗ ಗ್ರಿಪ್ ನಲ್ಲಿ ಕುಳಿತುಕೊಳ್ಳಲು, ಕಾರಿನಲ್ಲಿರುವ ಸೀಟ್ ಬೆಲ್ಟ್ ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳು ಇರುವುದಿಲ್ಲ. ಚಾಲಕ ಬ್ರೇಕ್ ಹಾಕಿದ್ರೆ ಆಯತಪ್ಪಿ ಕೆಳಗೆ ಬೀಳಬೇಕಾಗುತ್ತದೆ.
ಮತ್ತೆ, ನೀವು ಕಾರಿನ ಒಳಭಾಗದಲ್ಲಿ ಕುಳಿತುಕೊಂಡಾಗ ಸ್ಪಷ್ಟವಾಗಿ ಕಾಣುವ ಲ್ಯಾಪ್‌ಟಾಪ್ ಸ್ಕ್ರೀನ್ ಹೊರಭಾಗದಲ್ಲಿ ಅಷ್ಟಾಗಿ ಚೆನ್ನಾಗಿ ಕಾಣುವುದಿಲ್ಲ. ಇದರಿಂದ ನೀವು ಸರ್ಕಸ್ ಮಾಡಬೇಕು. ಜೊತೆಗೆ ಈ ರೀತಿಯಾಗಿ ಕೆಲಸ ಮಾಡುವಾಗ ವೇಗವಾಗಿ ಗಾಳಿ ಬೀಸಿದರೆ, ನಿಮ್ಮ ದೇಹದ ಸಮತೋಲನ ಕಳೆದುಕೊಂಡು ಕೆಳಗೆ ಬೀಳಬಹುದು. ಆ ಪರಿಸ್ಥಿತಿಯಲ್ಲಿ ಮಳೆ ಬಂದ್ರೆ ದೇವರೇ ಗತಿ.
ಇನ್ನು, ಮಹಿಳಾ ಉದ್ಯೋಗಿ ಅಂದು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಇದ್ದ ಹಿನ್ನೆಲೆ, ಈ ರೀತಿಯಾಗಿ ಕೆಲಸ ಮಾಡಿದ್ದಾರೆ. ವಾಹನಗಳು ಸಂಚಾರ ದಟ್ಟಣೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಣ, ಯಾವುದೇ ಸಮಸ್ಯೆ ಆಗಿಲ್ಲ. ಆದರೂ, ಆಕೆ ಈ ಬಗ್ಗೆ ಮೇಲಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬಹುದಿತ್ತು. ಇಲ್ಲವೇ ಎಲ್ಲರಿಗೂ ನಗರದ ರಸ್ತೆಗಳ ಪರಿಸ್ಥಿತಿ ಮೊದಲೇ ಗೊತ್ತಿದ್ದು, ಕೊಂಚ ಮುಂಚಿತವಾಗಿ ಮನೆ ಬಿಟ್ಟರೆ ಒಳ್ಳೆಯದು. ಟ್ರಾಫಿಕ್ ಕಡಿಮೆ ಮಾಡುವತ್ತ ಅಧಿಕಾರಿಗಳು ದಿಟ್ಟ ಹೆಜ್ಜೆ ಇಡಬೇಕು.


Click it and Unblock the Notifications