ಉಲ್ಲಾಸ ನೌಕೆಗೆ ತಾಜಾತನ ತುಂಬಿದ ವಿನ್ಯಾಸಗಾರ
ವಿಹಾರ ನೌಕೆ ವಿನ್ಯಾಸದಲ್ಲಿ ನಿಪುಣರಾಗಿರುವ ಹಾಲೆಂಡ್ ನ ಖ್ಯಾತ ವಿನ್ಯಾಸಗಾರ ಹೆನ್ರಿಕ್ ಫಿಸ್ಕರ್ ಮಗದೊಂದು ಆಕರ್ಷಕ ಉಲ್ಲಾಸ ನೌಕೆಗೆ ರೂಪುರೇಷೆ ನೀಡಿದ್ದಾರೆ. ಬೈಕ್ ಗಳಿಂದ ತೊಡಗಿ ಕಾರುಗಳ ವರೆಗೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿರುವ ಹೆನ್ರಿಕ್ ಈಗ ನೂತನ ಸಂಯೋಜನೆಯ ವಿಹಾರ ನೌಕೆಯನ್ನು ಪ್ರದರ್ಶಿಸಿದ್ದಾರೆ.
ಕಳೆದ ವಾರ ಸಿಂಗಾಪುರದಲ್ಲಿ ನಡೆದ ಯಾಚ್ಟ್ ಪ್ರದರ್ಶನ ಮೇಳದಲ್ಲಿ ಇಟಲಿಯ ನೌಕಾ ಸಂಸ್ಥೆ ಬೆನೆಟ್ಟಿ ಜೊತೆಗಾರಿಕೆಯಲ್ಲಿ ನೂತನ ಉಲ್ಲಾಸ ನೌಕೆಯನ್ನು ಸಿದ್ಧಪಡಿಸಿದ್ದಾರೆ.

ನೂತನ 'ಬೆನೆಟ್ಟಿ ಫಿಸ್ಕರ್ 50 ಸೂಪರ್ ಯಾಚ್ಟ್' ಪರಿಕಲ್ಪನೆಯು 164 ಅಡಿಗಳಷ್ಟು ಉದ್ದವಿದೆ. ಅಲ್ಲದೆ ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.

ಒಳಭಾಗದಲ್ಲಿ ವಿಶಾಲವಾದ ಕ್ಯಾಬಿನ್ ಜಾಗ, ಟಾಪ್ ಡೆಕ್, ಈಜುಕೊಳ, ಸೂರ್ಯ ಕಿರಣದಲ್ಲಿ ಸ್ನಾನ ಮತ್ತು ಬೀಚ್ ಕ್ಲಬ್ ಗಳಂತಹ ವ್ಯವಸ್ಥೆಯಿದೆ.

ಆರು ಆತಿಥಿ ಕ್ಯಾಬಿನ್ ಗಳನ್ನು ಇದರಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ 11 ಸಿಬ್ಬಂದಿಗಳು ಸಹಾಯಕ್ಕೆ ಇರಲಿದ್ದಾರೆ.

ಸೀಲಿಂಗ್ ಗಾಜಿನ ಗೋಡೆಯು ವಿಶೇಷ ಆಕರ್ಷಣೆಯಾಗಲಿದೆ. ಇನ್ನುಳಿದಂತೆ ಬಾಲ್ಕನಿ, ಲೈಬ್ರರಿ, ಖಾಸಗಿ ಸ್ಟೇರ್ ಕೇಸ್, ಹೋಮ್ ಥಿಯೇಟರ್ ಮತ್ತು ಜಿಮ್ ಸೇವೆಯೂ ಇರುತ್ತದೆ.

ಕಾರ್ಬನ್ ಫೈಬರ್ ನಿಂದ ಉಲ್ಲಾಸ ನೌಕೆಯನ್ನು ನಿರ್ಮಿಸಲಾಗಿದ್ದು, ಭಾರ ಕಡಿಮೆ ಮಾಡಲು ನೆರವಾಗಿದೆ.

ಸೌರ ಶಕ್ತಿಯಿಂದ ಇಂಧನ ಪ್ರತ್ಯುತ್ಪಾದನೆ ಮಾಡುವ ಯೋಜನೆಯ ಭಾಗವಾಗಿ ಸೋಲರ್ ಪ್ಯಾನೆಲ್ ಗಳನ್ನು ಆಳವಡಿಸುವ ಯೋಜನೆಯು ಇದೆ. ಈ ಮೂಲಕ ಹೈಬ್ರಿಡ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುವುದು.

ಎಲ್ಲ ಉಲ್ಲಾಸ ನೌಕೆಗಳಂತೆಯೇ ಪ್ರಯಾಣಿಕರಿಗೆ ಐಷಾರಾಮಿ ಅನುಭವಕ್ಕೆ ಆದ್ಯತೆ ಕೊಡಲಾಗಿದೆ. ಒಟ್ಟಿನಲ್ಲಿ ಸಮುದ್ರದಲ್ಲಿ ವಿಹಾರಯಾನವನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

2007ನೇ ಸಾಲಿನಲ್ಲಿ ಫಿಸ್ಕರ್ ಆಟೋಮೋಟಿವ್ ಗೆ ಚಾಲನೆ ನೀಡಿದ್ದ ಹೆನ್ರಿಕ್ ಫಿಸ್ಕರ್, ವಿಶ್ವದ ಮೊದಲ ಪ್ರೀಮಿಯಂ ಪ್ಲಗ್ ಇನ್ ಹೈಬ್ರಿಡ್ ಫಿಸ್ಕರ್ ಕರ್ಮಾ ನಿರ್ಮಿಸಿದ್ದರು.

ಬಿಎಂಡಬ್ಲ್ಯು ಝಡ್8, ಆಸ್ಟನ್ ಮಾರ್ಟಿನ್ ಡಿಬಿ9 ಮತ್ತು ಆಸ್ಟನ್ ಮಾರ್ಟಿನ್ ವಿ8 ವ್ಯಾಂಟೇಜ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆನ್ರಿಕ್, ಯುರೋಪ್ ಮತ್ತು ಅಮೆರಿಕದಲ್ಲಿ ಹೆಚ್ಚಿನ ಹೆಸರು ಗಿಟ್ಟಿಸಿಕೊಂಡಿದ್ದಾರೆ.

ಪ್ರಸ್ತುತ ಎಚ್ ಎಫ್ ಡಿಸೈನ್ ಎಂಬ ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿರುವ ಅವರು ಯುರೋಪ್, ಏಷ್ಯಾ ಮತ್ತು ಉತ್ತರ ಅಮೆರಿಕ ಕೇಂದ್ರಿಕರಿಸಿ ವಿವಿಧ ಆಟೋಮೋಟಿವ್ ಉತ್ಪನ್ನಗಳನ್ನು ನಿರ್ಮಿಸುವುದರಲ್ಲಿ ಮಗ್ನವಾಗಿದ್ದಾರೆ.


Click it and Unblock the Notifications








