Bengaluru 2nd Airport: ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ.. ಸರ್ಕಾರದಿಂದ ಮಹತ್ವದ ಹೆಜ್ಜೆ
ಬೆಂಗಳೂರು (Bengaluru) ಮಹಾನಗರದ ಮುಂಬರುವ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು 2ನೇ ವಿಮಾನ ನಿಲ್ದಾಣ (Second Airport) ನಿರ್ಮಿಸುವ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ (M.B.Patil) ಅವರು ಮೂಲಸೌಕರ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ್ದಾರೆ. ನೂತನ ವಿಮಾನ ನಿಲ್ದಾಣ ನಿರ್ಮಾಣದ ಕುರಿತಂತೆ ಕಾರ್ಯಸಾಧ್ಯತಾ ವರದಿಯನ್ನು ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 'ನಗರದ ಬೆಳವಣಿಗೆ ಹಾಗೂ ಭವಿಷ್ಯದ ಸವಾಲುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಅನಿವಾರ್ಯವಾಗಿದೆ' ಎಂದು ಸಚಿವರು ಹೇಳಿದ್ದಾರೆ.
'ಹೊಸ ವಿಮಾನ ನಿಲ್ದಾಣವನ್ನು 2033ರವರೆಗೆ ಆರಂಭಿಸಲು ಸಾಧ್ಯವಿಲ್ಲ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಾಗ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL), ಸರ್ಕಾರದ ಜೊತೆಯಲ್ಲಿ 25 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. 150 ಕಿಲೋಮೀಟರ್ ವ್ಯಾಪ್ತಿಯೊಳಗೆ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವಂತಿಲ್ಲ ಎಂಬ ಷರತ್ತನ್ನು ಹಾಕಲಾಗಿತ್ತು. ಈ ಗಡುವು 9 ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದ್ದು, ನಾವು ಈಗಿನಿಂದಲೇ ಎರಡನೇ ವಿಮಾನ ನಿಲ್ದಾಣದ ಕೆಲಸವನ್ನು ಪ್ರಾರಂಭಿಸಬೇಕಾಗಿದೆ' ಎಂದು ಸಚಿವ ಅವರು ಎಂ.ಬಿ.ಪಾಟೀಲ್ ಹೇಳಿದ್ದಾರೆ.

'ಎರಡನೇ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಹೊರಭಾಗದಲ್ಲಿ ಕೂಡ ಕೈಗಾರಿಕೆಗಳ ಬೆಳವಣಿಗೆಯಾಗಲಿದೆ. ನವದೆಹಲಿ ಮತ್ತು ಮುಂಬೈ ಬಳಿಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವು ಹೆಚ್ಚಿನ ಪ್ರಯಾಣಿಕರ ದಟ್ಟಣೆಯನ್ನು ಹೊಂದಿರುವ ದೇಶದ ಮೂರನೇ ವಿಮಾನ ನಿಲ್ದಾಣವಾಗಿದೆ. ಕಳೆದ ವರ್ಷ 37.5 ಮಿಲಿಯನ್ ಜನರು ಪ್ರಯಾಣಿಸಿದ್ದು, ಬರೋಬ್ಬರಿ 4 ಲಕ್ಷ ಟನ್ ಸರಕುಗಳನ್ನು ಸಾಗಾಟ ಮಾಡಲಾಗಿದೆ. ಈ ದಟ್ಟಣೆಯನ್ನು ನಿರ್ವಹಿಸಲು ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ' ಎಂದಿದ್ದಾರೆ.
'ಸದ್ಯ ಬೆಂಗಳೂರಿನ ಜನಸಂಖ್ಯೆಯು 1 ಕೋಟಿ ದಾಟಿದ್ದು, ಹಲವು ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿವೆ. ಪ್ರಸ್ತುತ ಸಮೀಪ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳ ಪ್ರಯಾಣಿಕರು ಸಹ ದೇವನಹಳ್ಳಿ ವಿಮಾನ ನಿಲ್ದಾಣವನ್ನು ಅವಲಂಭಿಸಿದ್ದಾರೆ. 2033ರ ವೇಳೆಗೆ ಪ್ರಯಾಣಿಕರ ದಟ್ಟಣೆಯು ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಅದೇ ರೀತಿಯಲ್ಲಿ ಸರಕು ಸಾಗಾಣಿಕೆ ಪ್ರಮಾಣವು ಕೂಡ 2040ರ ವೇಳೆಗೆ ವಿಪರೀತವಾಗಿ ಹೆಚ್ಚಾಗಲಿದೆ' ಎಂದು ಅವರು ತಿಳಿಸಿದ್ದಾರೆ.

'ನೂತನ ವಿಮಾನ ನಿಲ್ದಾಣ ನಿರ್ಮಿಸುವಾಗ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣಾ ಕಾರ್ಯಕ್ಕೆ ಹೆಚ್ಚು ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ, ನಾವು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕಾಗಿದೆ' ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ. ಈ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಸಿ.ಸತೀಶ್, ಕಾರ್ಯನಿರ್ವಾಹಕ ನಿರ್ದೇಶಕರಾದ ಡಿ.ಪಿ.ಪ್ರಕಾಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
2020ರಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (BCIC), ಬೆಂಗಳೂರಿಗರ ಅನುಕೂಲಕಾಗಿ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸುವಂತೆ ಸರ್ಕಾರವನ್ನು ಕೋರಿತ್ತು. ರಾಮನಗರ ಹಾಗೂ ಚನ್ನಪಟ್ಟಣ ನಡುವೆ ವಿಮಾನ ನಿಲ್ದಾಣ ನಿರ್ಮಿಸುವುದಕ್ಕೆ ಸೂಕ್ತ ಸ್ಥಳವಾಗಿದೆ ಎಂಬ ಸಲಹೆಯನ್ನು ನೀಡಿತ್ತು. ಈ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.
ಗೃಹ ಸಚಿವ ಜಿ ಪರಮೇಶ್ವರ ಅವರು, ತುಮಕೂರು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಸಿರಾ ತಾಲ್ಲೂಕುಗಳಲ್ಲಿ 8,000 ಎಕರೆಗೂ ಹೆಚ್ಚು ಭೂಮಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಲಭ್ಯವಿದೆ ಎಂದು ಕಳೆದ ಜನವರಿಯಲ್ಲಿ ಹೇಳಿಕೆ ನೀಡಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications