Bengaluru Airport: ಹೊಸ ಸುರಂಗ ರಸ್ತೆ.. ಇನ್ನೂ ವಿಮಾನ ನಿಲ್ದಾಣಕ್ಕೆ ಬೇಗ ಹೋಗಬಹುದು, ಎಲ್ಲಿ ಬರುತ್ತೆ?
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎಂಬುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ನಗರದ ಕೆಲವು ಭಾಗಗಳಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಹೋಗಲು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲೇ ಕಾಲವ್ಯಯ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದಕ್ಕೆ ಪರಿಹಾರವಾಗಿ ಹೊಸ ಸುರಂಗ ರಸ್ತೆ ನಿರ್ಮಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (Bengaluru International Airport Limited) ಉದ್ದೇಶಿಸಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಸರಿ ಸುಮಾರು ರೂ.16,500 ಕೋಟಿ ವೆಚ್ಚದ ವಿಮಾನ ನಿಲ್ದಾಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ, ಬೆಂಗಳೂರು ನಗರದ ಪೂರ್ವ ಭಾಗಕ್ಕೆ ಸುಲಭ ಸಂಪರ್ಕ ಕಲ್ಪಿಸಲು ನೂತನ ಸುರಂಗ ರಸ್ತೆ (New Tunnel Road) ನಿರ್ಮಾಣ ಮಾಡಲು ಯೋಜಿಸಲಾಗಿದೆ. ಇದರಿಂದ ವೈಟ್‌ಫೀಲ್ಡ್, ಸರ್ಜಾಪುರ ಹಾಗೂ ಮಹದೇವಪುರ ಸುತ್ತಮುತ್ತಲಿನ ಪ್ರದೇಶಗಳಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಗನೇ ತಲುಪಬಹುದು. ಪ್ರಯಾಣದ ಅವಧಿಯು 30 ನಿಮಿಷಗಳವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ.

ಸುರಂಗ ರಸ್ತೆಯೊಂದಿಗೆ ನೂತನ ಟ್ಯಾಕ್ಸಿವೇಗಳ ನಿರ್ಮಾಣ ಹಾಗೂ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಟರ್ಮಿನಲ್-3 ಕಟ್ಟಡವನ್ನು ಅಭಿವೃದ್ಧಿಪಡಿಸಲು ಸಹ ಉದ್ದೇಶಿಸಲಾಗಿದೆ. 2030 - 2032ರ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಓಡಾಟ ನಡೆಸುವ ವಾರ್ಷಿಕ ಪ್ರಯಾಣಿಕರ ಸಂಖ್ಯೆ 8.5 ಕೋಟಿಗೆ (85 ಮಿಲಿಯನ್) ಹೆಚ್ಚಾಗುವ ಸಾಧ್ಯತೆಯಿದೆ.
ಬಿಎಂಆರ್‌ಸಿಎಲ್ ಕೂಡ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಕಲ್ಪಿಸಲು ನೀಲಿ ಮಾರ್ಗದ (Blue Line) ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಇದು 58.19 ಕಿಲೋಮೀಟರ್ ಉದ್ದವಿರಲಿದೆ. ಈ ಮಾರ್ಗದಲ್ಲಿ 2026 ರಲ್ಲಿ ಮೆಟ್ರೋ ರೈಲುಗಳ ಸಂಚಾರ ಶುರುವಾಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನ ಆಯ್ದ ಭಾಗದಲ್ಲಿ ನೂತನ ಸುರಂಗ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, 'ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಸುರಂಗ ರಸ್ತೆ ನಿರ್ಮಾಣ ಯೋಜನೆ ಪರಿಹಾರವಾಗಲಿದೆ. ಮೆಟ್ರೋ ರೈಲುಗಳ ಸಂಚಾರದ ಹೊರತಾಗಿಯೂ ಟ್ರಾಫಿಕ್ ಎಂಬುದು ಕಡಿಮೆಯಾಗಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಸುರಂಗ ರಸ್ತೆ ನಿರ್ಮಾಣದ ಕೆಲಸಗಳನ್ನು ಶುರು ಮಾಡಲು ರಾಜ್ಯ ಸರ್ಕಾರ ಯೋಜಿಸಿದೆ' ಎಂದು ಹೇಳಿದ್ದರು.
ಅದಕ್ಕೂ ಮೊದಲು ಸುರಂಗ ರಸ್ತೆ ನಿರ್ಮಾಣ ಸಂಬಂಧ ಜನವರಿಯಲ್ಲಿ ಟೆಂಡರ್ ಕರೆಯಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಬಿಬಿಎಂಪಿ ಮೊದಲ ಹಂತವಾಗಿ ಹೆಬ್ಬಾಳದಲ್ಲಿರುವ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕಿಸಲು 18 ಕಿಲೋಮೀಟರ್ ಉದ್ದದ 6 ಪಥಗಳ ಸುರಂಗ ರಸ್ತೆ ನಿರ್ಮಾಣಕ್ಕೆ ಯೋಜಿಸಿದೆ ಎಂದು ತಿಳಿದುಬಂದಿದೆ.
ಸದ್ಯ ಹೆಬ್ಬಾಳದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಪ್ರಯಾಣಿಸಲು ಬರೋಬ್ಬರಿ 1 ಗಂಟೆ ಬೇಕಾಗುತ್ತದೆ. ಹೊಸ ಸುರಂಗ ರಸ್ತೆ ಉದ್ಘಾಟನೆಗೊಂಡ ಬಳಿಕ, ಅದು 20 ರಿಂದ 25 ನಿಮಿಷಗಳಿಗೆ ಕಡಿಮೆಯಾಗಲಿದೆ. ಈ ಸುರಂಗವು 10 ಮೀಟರ್ ಎತ್ತರವಿರಲಿದ್ದು, ವಾಹನಗಳು ಗಂಟೆಗೆ 40 ರಿಂದ 60 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲು ಅವಕಾಶ ನೀಡಬಹುದು ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications