ಮುಂಬೈಗಿಂತ ಹೆಚ್ಚಾಗಿ ಲೂಟಿ ಮಾಡ್ತಾರೆ ಬೆಂಗಳೂರು ಆಟೋ ಚಾಲಕರು... ಉದ್ಯಮಿ ಹೇಳಿಕೆ ವೈರಲ್
ಬೆಂಗಳೂರಿನ ಆಟೋ ಚಾಲಕರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಮುಂಬೈ ಮೂಲದ ಕಂಪನಿಯೊಂದರ ಸಿಇಒ ಆಟೋ ಚಾಲಕನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡಿದ್ದಾರೆ. ಈ ಕುರಿತು ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ಆಟೋ ಚಾಲಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ 500 ಮೀಟರ್ ಆಟೋ ಸವಾರಿಗೆ 100 ರೂ. ಪಾವತಿಸಿದ ಕಂಪನಿಯೊಂದರ ಸಿಇಒ ತಮ್ಮ ಅನುಭವವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಆಟೋ ಚಾಲಕರು ಮೀಟರ್ ಆಧರಿಸಿ ದರ ವಿಧಿಸುವುದಿಲ್ಲ. ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ 500 ಮೀಟರ್ ಸವಾರಿಗೆ 100 ರೂ. ಪಡೆದಿದ್ದಾರೆ. ಇದು ಮುಂಬೈನಂತಹ ಮಹಾಗರಕ್ಕಿಂತ ತುಂಬಾ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯೂರಲ್ ಗ್ಯಾರೇಜ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಮಂದರ್ ನಾಟೇಕರ್ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಅವರು ಆಟೋದ ಮೀಟರ್‌ನ ಫೋಟೋವನ್ನು ಪೋಸ್ಟ್ ಮಾಡಿ ಇದು "ಬೆಂಗಳೂರಿನ ಅತ್ಯಂತ ಅಲಂಕಾರಿಕ ವಸ್ತು" ಎಂದು ಹಾಸ್ಯಮಯವಾಗಿ ಉಲ್ಲೇಖಿಸಿದ್ದಾರೆ. ಅಂದರೆ ಇದರರ್ಥ ಬೆಂಗಳೂರಿನಲ್ಲಿ ಆಟೋ ಚಾಲಕರು ಮೀಟರ್ ಅನ್ನು ತುಂಬಾ ವಿರಳವಾಗಿ ಬಳಸುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಅವರ ಪೋಸ್ಟ್‌ನಲ್ಲಿ ಹೀಗುತ್ತು, ಈ ಫೋಟೋದಲ್ಲಿ ನೀವು ಬೆಂಗಳೂರಿನ ಅತ್ಯಂತ ಅಲಂಕಾರಿಕ ವಸ್ತುವನ್ನು ನೋಡುತ್ತೀದಿರಿ. ದೊಡ್ಡ ಆಟೋ ಮೀಟರ್. ಎಷ್ಟು ದುಬಾರಿ ಎಂದರೆ ಅದು ಎಂದಿಗೂ ಬಳಕೆಯಾಗುವುದಿಲ್ಲ. ನಾನು ಕೇವಲ 500 ಮೀಟರ್ ರೈಡ್‌ಗೆ 100 ರೂ. ಪಾವತಿಸಿದ್ದೇನೆ. ಮುಂಬೈನಲ್ಲಿ 9 ಕಿ.ಮೀಗಳಿಗೆ 100 ರೂ. ಮೀಟರ್ ದರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗಿದ್ದು, ಜನರು ತಮ್ಮದೇ ಆದ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಆಟೋ ಚಾಲಕರು ಕೆಲವೊಮ್ಮೆ ಪ್ರಯಾಣಿಕರನ್ನು ನಿರಾಕರಿಸುವುದರಿಂದ ಆಟೋ ಹತ್ತಲು ಅವಕಾಶ ಸಿಕ್ಕಿರುವುದೇ ಅದೃಷ್ಟ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಈ ಘಟನೆಯು ವಿವಿಧ ನಗರಗಳಲ್ಲಿನ ವಿಭಿನ್ನತೆಯನ್ನು ಎತ್ತಿ ತೋರಿಸುತ್ತದೆ.
ಸದ್ಯ ಬೆಂಗಳೂರಿನಲ್ಲಿ ಸರ್ಕಾರಿ ಬಸ್‌ಗಳದ್ದೇ ಹವಾ, ದಿನವಿಡಿ ಬಸ್‌ಗಳು ಮಹಿಳೆಯರಿಂದ ತುಂಬಿಕೊಡಿರುತ್ತವೆ. ಇದು ಯಾಕೆ ಎಂದು ಎಲ್ಲರಿಗೂ ತಿಳಿದೇ ಇದೆ. ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಓಡಾಡುವುದರಿಂದ ಖಾಸಗಿ ಬಸ್‌ಗಳು, ಆಟೋ, ಕ್ಯಾಬ್‌ಗಳಿಗೆ ದೊಡ್ಡ ಹೊಡೆತವಾಗಿದೆ. ಸಾಮಾನ್ಯವಾಗಿ ಆಟೋಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆರೇ ಪ್ರಯಾಣಿಸುತ್ತಾರೆ.
ಈಗಾಗಲೇ ಆಟೋ ಚಾಲಕರು ಬಾಡಿಗೆಗಳಿಲ್ಲದೇ ಕಣ್ಣೀರಿಟ್ಟಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಹಾಗಾಗಿಯೇ ಆಟೋ ಚಾಲಕರು ಈ ರೀತಿ ಮನಬಂದಂತೆ ಪ್ರಯಾಣ ದರವನ್ನು ವಸೂಲಿ ಮಾಡುತ್ತಿದ್ದಾರೆ ಎಂಬುದು ಕೆಲವರ ವಾದ. ಮೊದಲಿನಿಂದಲೂ ಆಟೋ ಚಾಲಕರು ಹೀಗೆಯೇ ಇದ್ದಾರೆ ಎಂದು ಇನ್ನೂ ಕೆಲವರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಆದ್ರೆ ಒಂದಂತು ಸತ್ಯ, ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಾರಿಗೆ ಘೋಷಣೆಯಾದಾಗಿನಿಂದಲೂ ಖಾಸಗಿ ಸಾರಿಗೆ ವಲಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಹಾಗೆಂದು ಆಟೋ ಚಾಲಕರು ಪ್ರಯಾಣಿಕರಿಂದ ಹೀಗೆ ವಸೂಲಿ ಮಾಡುವುದು ಸರಿಯಲ್ಲ. ಎಲ್ಲಾ ಆಟೋ ಚಾಲಕರು ಹೀಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಿಲ್ಲ. ಬದಲಾಗಿ ಕೆಲವರನ್ನು ಮಾತ್ರ ಇಲ್ಲಿ ಉದ್ದೇಶಿಸಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಯಾಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications