Expressway: ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಬಗ್ಗೆ ಬಿಗ್ ಅಪ್ಡೇಟ್.. ಏನದು?
ದೇಶದ ಆರ್ಥಿಕ ಅಭಿವೃದ್ಧಿಗೆ ಹೆದ್ದಾರಿಗಳು ಬಹುದೊಡ್ಡ ಕೊಡುಗೆ ನೀಡುತ್ತವೆ. ಹೊಸ ರಸ್ತೆಗಳ ನಿರ್ಮಾಣದಿಂದ ಸಾರಿಗೆ ಸಂಪರ್ಕ ಉತ್ತಮಗೊಂಡು ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಹೊಂದಲಿವೆ. ಸದ್ಯ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಕಾಮಗಾರಿ ನಡೆಯುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದಾಗ್ಯೂ ಹಲವೆಡೆ ರಸ್ತೆ ನಿರ್ಮಾಣದ ಕೆಲಸಗಳು ತಡವಾಗಿರುವುದರಿಂದ 2025ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಿಗದಿತ ಸಮಯದಲ್ಲಿ ಮುಕ್ತಾಯಗೊಳ್ಳುವುದಿಲ್ಲ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಂಸತ್ತಿಗೆ ತಿಳಿಸಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. 262 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಕರ್ನಾಟಕದಲ್ಲಿ 71 ಕಿಲೋಮೀಟರ್, ಆಂಧ್ರಪ್ರದೇಶದಲ್ಲಿ 85 ಕಿಲೋಮೀಟರ್ ಹಾಗೂ ತಮಿಳುನಾಡಿನಲ್ಲಿ 106 ಕಿಲೋಮೀಟರ್ ಹಾದುಹೋಗಿದೆ.

ಕರ್ನಾಟಕದಲ್ಲಿ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದ್ದು, ಆಂಧ್ರ ಮತ್ತು ತಮಿಳುನಾಡಿನಲ್ಲಿ ಕುಂಟುತ್ತಾ ಸಾಗುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ), ಹೊಸ ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಡೆಸುತ್ತಿದೆ. 2022ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು 4 ಪಥಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು. ನೂತನ ರಸ್ತೆಯು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಶುರುವಾಗಲಿದ್ದು, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ. ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರಪ್ರದೇಶದ ಚಿತ್ತೂರು ಮತ್ತು ತಮಿಳುನಾಡಿನ ವೆಲ್ಲೂರು, ಕಾಂಚೀಪುರಂ, ತಿರುವಳ್ಳೂರು ಜಿಲ್ಲೆಗಳಿಗೂ ಸಂಪರ್ಕ ಕೊಂಡಿಯಾಗಿದೆ.
ಬೆಂಗಳೂರು (Bengaluru) - ಚೆನ್ನೈ (Chennai) ಮಧ್ಯೆ ನಿರ್ಮಾಣವಾಗುತ್ತಿರುವ ಈ ಎಕ್ಸ್‌ಪ್ರೆಸ್‌ವೇ ದೇಶದ ಮೊಟ್ಟ ಮೊದಲ 'ಹಸಿರು ಹೆದ್ದಾರಿ' ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ರಸ್ತೆ ನಿರ್ಮಾಣಕ್ಕೆ 33 ಕಿಲೋಮೀಟರ್ ಅರಣ್ಯ ಜಾಗವನ್ನು ಮಾತ್ರ ಬಳಸಲಾಗುತ್ತಿದ್ದು, 41 ವೆಹಿಕಲ್ ಅಂಡರ್‌ಪಾಸ್‌ಗಳು, 17 ಫ್ಲೈಓವರ್‌ಗಳನ್ನು ಹೊಂದಿರಲಿದೆ.
ಸದ್ಯ ಬೆಂಗಳೂರಿಂದ ಚೆನ್ನೈಗೆ ಹೋಗಲು 2 ಹೆದ್ದಾರಿಗಳಿದ್ದು, 5 ರಿಂದ 6 ಗಂಟೆ ಸಂಚರಿಸಬೇಕು. ಹೊಸ ಎಕ್ಸ್‌ಪ್ರೆಸ್‌ವೇಯಿಂದ ಪ್ರಯಾಣದ ಅವಧಿ ದೊಡ್ಡಮಟ್ಟದಲ್ಲಿ ಇಳಿಕೆಯಾಗಲಿದ್ದು, ಕೇವಲ 2 ಗಂಟೆಯಲ್ಲಿ ಪ್ರಯಾಣಿಸಬಹುದು. ಈ ಹೆದ್ದಾರಿಯ ಸಂಪೂರ್ಣ ನಿರ್ಮಾಣಕ್ಕೆ ರೂ.17,000 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು - ಪುಣೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ) ತಯಾರಿ ಮಾಡಿಕೊಳ್ಳುತ್ತಿದೆ. ಸುಮಾರು 700 ಕಿಲೋಮೀಟರ್ ಉದ್ದದ ಈ ಹೆದ್ದಾರಿ, ಕರ್ನಾಟಕದ 9 ಮತ್ತು ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಹಾದುಹೋಗುತ್ತದೆ. ಬಹುತೇಕ 2028 ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಇದು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಪರ್ಯಾಯವಾಗಲಿದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications