Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ.. ಎನ್‌ಹೆಚ್‌ಎಐ ಅಲರ್ಟ್!
ಕರ್ನಾಟಕ ಹಾಗೂ ತಮಿಳುನಾಡುಗಳ ಮಧ್ಯೆ ಸುಲಭ ಸಂಪರ್ಕ ಕಲ್ಪಿಸಲು ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಭಿವೃದ್ಧಿಪಡಿಸುತ್ತಿದೆ. ಸದ್ಯ, ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ಕೋಲಾರದ ಬೇತಮಂಗಲ ಮಧ್ಯೆ ಹಾದು ಹೋಗುವ 71 ಕಿಲೋಮೀಟರ್ ಉದ್ದದ ಹೆದ್ದಾರಿ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಸವಾರರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಎನ್‌ಎಚ್‌ಎಐ ಮಹತ್ವದ ಎಚ್ಚರಿಕೆ ನೀಡಿದೆ. ಹೊಸ ಹೆದ್ದಾರಿ ಇನ್ನೂ ಲೋಕಾರ್ಪಣೆಗೊಂಡಿಲ್ಲ. ಆದರೆ, ಇದು ನೋಡಲು ಸುಂದರವಾಗಿ ಕಂಡರೂ ಹೆಚ್ಚಿನ ಅಪಾಯಕ್ಕೂ ಕಾರಣವಾಗಬಹುದು ಎಂದಿದೆ.
ನೂತನ ಎಕ್ಸ್‌ಪ್ರೆಸ್‌ವೇಯನ್ನು ವಾಹನಗಳು ಗಂಟೆಗೆ 120 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸುವಂತೆ ಸಿದ್ದಪಡಿಸಲಾಗಿದೆ. ಅಧಿಕೃತವಾಗಿ ಉದ್ಘಾಟಿಸುವವರೆಗೂ ಈ ಹೆದ್ದಾರಿಯಿಂದ ವಾಹನ ಸವಾರರು ಆದಷ್ಟು ದೂರವಿರುವಂತೆ ಎನ್‌ಎಚ್‌ಎಐ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಮುಕ್ತಾಯಗೊಂಡಿದ್ದರೂ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 2025ರ ಆಗಸ್ಟ್‌ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಹಿಂದೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಕಾಮಗಾರಿ ನಡೆಯುತ್ತಿರುವಾಗಲೇ ವಿವಿಧ ಭಾಗಗಳಲ್ಲಿ ವಾಹನ ಚಾಲನೆ ಆರಂಭವಾಗಿತ್ತು. ಸವಾರರು ಅತಿವೇಗ & ಅಜಾಗರೂಕವಾಗಿ ಚಾಲನೆ ಮಾಡಿದ್ದರು. ಇದರಿಂದ ಅನೇಕ ಅಪಘಾತಗಳು ಸಂಭವಿಸಿದ್ದವು. ಮತ್ತೆ ಅಂತಹದ್ದೇ ಘಟನೆಗಳು ಮರುಕಳಿಸಲು ಬಯಸುವುದಿಲ್ಲ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಾದುಹೋಗುವ ನೂತನ ಎಕ್ಸ್‌ಪ್ರೆಸ್‌ವೇಯನ್ನು ವಾಹನ ಸವಾರರು ಉಪಯೋಗಿಸಲು ಶುರು ಮಾಡಿದ್ದು, ಖಾಲಿ ರಸ್ತೆಯಲ್ಲಿ
ಭಾರೀ ವೇಗವನ್ನು ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇದರಿಂದ ಪ್ರಾಣಾಪಾಯ ಸಂಭವಿಸಬಹುದು. ಟೋಲ್ ಶುಲ್ಕ ನಿಗದಿ ಹಾಗೂ ಸಾರ್ವಜನಿಕ ವಾಹನ ಸಂಚಾರಕ್ಕೆ ಅಧಿಕೃತವಾಗಿ ಒಪ್ಪಿಗೆ ನೀಡದ ನಂತರವಷ್ಟೇ ಈ ಹೆದ್ದಾರಿಯನ್ನು ಬಳಕೆ ಮಾಡುವಂತೆ ಎನ್‌ಹೆಚ್‌ಎಐ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ವಿಶೇಷತೆಗಳೇನು: ಈ ಹೆದ್ದಾರಿ 262 ಕಿಲೋಮೀಟರ್ ಉದ್ದವಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಹಾದುಹೋಗುತ್ತದೆ. ಈ ರಸ್ತೆ ಉದ್ಘಾಟನೆಗೊಂಡ ಮೇಲೆ ಈಗಿರುವ 5 - 6 ಗಂಟೆ ಪ್ರಯಾಣದ ಅವಧಿಯು 2 ಗಂಟೆಗಳಿಗೆ ಕಡಿಮೆಯಾಗುವ ಸಾಧ್ಯತೆಯಿದೆ.
ನೂತನ ಹೆದ್ದಾರಿ ನಿರ್ಮಾಣಕ್ಕೆ 2022ರಲ್ಲಿ ಅಡಿಗಲ್ಲು ಹಾಕಲಾಗಿತ್ತು. ಈ ಹೆದ್ದಾರಿಯನ್ನು ರೂ.17,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಹೊಸ ಎಕ್ಸ್‌ಪ್ರೆಸ್‌ವೇಯನ್ನು 4 ಪಥಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ವಾಹನ ದಟ್ಟಣೆ ಹೆಚ್ಚಾದಂತೆ 8 ಪಥಗಳಿಗೆ ವಿಸ್ತರಣೆ ಮಾಡಬಹುದು. ಇದು 17 ಮೇಲ್ಸೇತುವೆಗಳು ಮತ್ತು 41 ಕೆಳ ಸೇತುವೆಗಳನ್ನು ಒಳಗೊಂಡಿದೆ.
ಇನ್ನು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಕರ್ನಾಟಕದಲ್ಲಿ ಬಹುತೇಕ ಮುಕ್ತಾಯಗೊಂಡಿದೆ. ಆದರೆ, ಸವಾರರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಲ್ಲ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸಿ, ಪ್ರಾಣಾಪಾಯಗಳು ಉಂಟಾಗಬಹುದು. ವಾಹನ ಸವಾರರು ನೂತನ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳುವರೆಗೂ ಆದಷ್ಟು ಈ ಹೆದ್ದಾರಿ ಬಳಕೆ ಮಾಡದಿರುವುದೇ ಒಳಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications