Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಬಗ್ಗೆ ಬಿಗ್ ಅಪ್‌ಡೇಟ್, 2 ಗಂಟೆ ಪ್ರಯಾಣ!
ದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಹೆದ್ದಾರಿಗಳು ಮಹತ್ತರವಾದ ಪಾತ್ರ ವಹಿಸುತ್ತವೆ. ಹೊಸ ರಸ್ತೆಗಳ ನಿರ್ಮಾಣದಿಂದ ಸಾರಿಗೆ ಸಂಪರ್ಕ ವೃದ್ಧಿಗೊಂಡು ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳು ದೊಡ್ಡಮಟ್ಟದಲ್ಲಿ ಅಭಿವೃದ್ದಿಗೊಳ್ಳಲಿವೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ನೂತನ ಹೆದ್ದಾರಿ ಉದ್ಘಾಟನೆಗೆ ಕರ್ನಾಟಕ ಹಾಗೂ ತಮಿಳುನಾಡಿನ ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ ಸಂಬಂಧ ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, 'ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ವರ್ಷದ ಡಿಸೆಂಬರ್‌ಗೂ ಮುನ್ನ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲಿದ್ದಾರೆ. ಈ ಹೆದ್ದಾರಿಯಲ್ಲಿ 2 ಗಂಟೆಗಳಲ್ಲಿ ಚೆನ್ನೈನಿಂದ ಬೆಂಗಳೂರಿಗೆ ತಲುಪಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.

ಪ್ರಸ್ತುತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (BCE) ನಿರ್ಮಾಣ ಹಂತದಲ್ಲಿದೆ. ಸರಿ ಸುಮಾರು 258 ಕಿ.ಮೀ. ಉದ್ದವಿರುವ ಈ ಹೆದ್ದಾರಿಯು ಮೂರು ರಾಜ್ಯಗಳ ಏಳು ಜಿಲ್ಲೆಗಳನ್ನು ಹಾದುಹೋಗುತ್ತದೆ. ಕರ್ನಾಟಕದ ಮೂರು (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ) ಆಂಧ್ರಪ್ರದೇಶದ ಒಂದು (ಚಿತ್ತೂರು) ಹಾಗೂ ತಮಿಳುನಾಡಿನ ಮೂರು (ವೆಲ್ಲೂರು, ಕಾಂಚೀಪುರಂ, ತಿರುವಳ್ಳೂರು) ಜಿಲ್ಲೆಗಳಿಗೆ ಕೊಂಡಿಯಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಹೆಚ್‍ಎಐ), ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಭಾಗವಾಗಿ ನೂತನ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ನಡೆಸುತ್ತಿದೆ. 2022ರ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 4 ಪಥಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಹೊಸ ಹೆದ್ದಾರಿಯು ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು.
ಬೆಂಗಳೂರು-ಚೆನ್ನೈ ಮಧ್ಯೆ ನಿರ್ಮಾಣವಾಗುತ್ತಿರುವ ಈ ಎಕ್ಸ್‌ಪ್ರೆಸ್‌ವೇ ದೇಶದ ಮೊದಲ 'ಹಸಿರು ಹೆದ್ದಾರಿ' ಎಂಬ ಹೆಗ್ಗಳಿಕೆಗೂ ಭಾಜನವಾಗಲಿದೆ. ರಸ್ತೆ ನಿರ್ಮಾಣಕ್ಕೆ 33 ಕಿ.ಮೀ. ಅರಣ್ಯ ಜಾಗವನ್ನು ಮಾತ್ರ ಬಳಸಲಾಗುತ್ತಿದ್ದು, 41 ವೆಹಿಕಲ್ ಅಂಡರ್‌ಪಾಸ್‌ಗಳು, 17 ಫ್ಲೈಓವರ್‌ಗಳನ್ನು ಹೊಂದಿರಲಿದೆ. ನೂತನ ರಸ್ತೆಯು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಆರಂಭವಾಗಲಿದ್ದು, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯಗೊಳ್ಳಲಿದೆ.
ಸದ್ಯ ಬೆಂಗಳೂರಿಂದ ಚೆನ್ನೈ ತೆರಳಲು 2 ಪ್ರಮುಖ ಹೆದ್ದಾರಿಗಳಿದ್ದು, 5-6 ಗಂಟೆ ಪ್ರಯಾಣಿಸಬೇಕಾಗಿದೆ. ನೂತನ ಎಕ್ಸ್‌ಪ್ರೆಸ್‌ವೇಯಿಂದ ಪ್ರಯಾಣದ ಅವಧಿಯು ದೊಡ್ಡಮಟ್ಟದಲ್ಲಿ ಇಳಿಕೆಯಾಗಲಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ತೂರು, ವೆಲ್ಲೂರು, ಕಾಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲಿ ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕೋದ್ಯಮಗಳು ಬೆಳವಣಿಗೆಯಾಗಲಿವೆ. ಈ ಹೆದ್ದಾರಿಯ ಸಂಪೂರ್ಣ ನಿರ್ಮಾಣಕ್ಕೆ ರೂ.17,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ (Bengaluru-Pune Expressway) ನಿರ್ಮಾಣಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿಯನ್ನು ನಡೆಸುತ್ತಿದೆ. ಸುಮಾರು 700 ಕಿಲೋಮೀಟರ್ ಉದ್ದದ ಈ ಹೆದ್ದಾರಿಯು ಕರ್ನಾಟಕದ 9 ಹಾಗೂ ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಹಾದುಹೋಗುತ್ತದೆ. ಬಹುತೇಕ 2028 ಉದ್ಘಾಟನೆಗೊಳ್ಳುವ ನಿರೀಕ್ಷೆಯಿದ್ದು, ರಾಷ್ಟ್ರೀಯ ಹೆದ್ದಾರಿ 4ಕ್ಕೆ ಪರ್ಯಾಯವಾಗಲಿದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications