Vande Bharat Express: ಕರ್ನಾಟಕದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಇಲ್ಲಿ ನಿಲುಗಡೆ ನೀಡಿ
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಹೈ - ಸ್ವೀಡ್ ರೈಲುಗಳಾಗಿ ಕಾರ್ಯಚರಣೆ ನಡೆಸುತ್ತಿವೆ. ಕರ್ನಾಟಕದ 3 ಮಾರ್ಗದಲ್ಲಿ ಈ ರೈಲುಗಳು ಓಡಾಟವನ್ನು ನಡೆಸುತ್ತಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಧಾರವಾಡ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲಾಗಿದೆ.
ಕೆಲವೇ ದಿನಗಳಲ್ಲಿ ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಇತ್ತೀಚೆಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಯನ್ನು ಸಲ್ಲಿಸಿದ್ದು, ಅವುಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಸದ್ಯ, ಕೆಎಸ್ಆರ್ ಬೆಂಗಳೂರು - ಧಾರವಾಡ ಮಧ್ಯೆ ಓಡಾಡುವ ವಂದೇ ಭಾರತ್ ರೈಲನ್ನು ಬೀರೂರು ಜಂಕ್ಷನ್‌ನಲ್ಲಿ ನಿಲುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಈ ರೈಲನ್ನು ಬೀರೂರಿನಲ್ಲಿ ನಿಲ್ಲಿಸುವುದರಿಂದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಇದೇ ವರ್ಷದ ಜೂನ್ 27ರಂದು ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಲೋಕಾರ್ಪಣೆ ಮಾಡಿದ್ದರು. ಈ ರೈಲು ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಲಿದ್ದು, ತುಮಕೂರು, ಚಿಕ್ಕಜಾಜೂರಿನಲ್ಲಿಯೂ ನಿಲ್ಲಿಸಬೇಕು ಎಂದು ಅಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಅವರು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೀರೂರಿನಲ್ಲಿ ನಿಲುಗಡೆ ನೀಡಬೇಕೆಂಬುದರ ಜೊತೆಯಲ್ಲಿ ಹಲವು ಬೇಡಿಕೆ ಈಡೇರಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ. ಆ ಬಗ್ಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರೇಣಿಗುಂಟಾ ಮಾರ್ಗವಾಗಿ ಶಿವಮೊಗ್ಗ ಮತ್ತು ಚೆನ್ನೈ ನಡುವೆ ಪ್ರಸ್ತುತ ಸ್ಥಗಿತಗೊಂಡಿರುವ ರೈಲು ಸೇವೆಯನ್ನು ಪುನರಾರಂಭಬೇಕು ಎಂದು ಮನವಿ ಮಾಡಿದ್ದಾರೆ.

ಕೋಟೆಗಂಗೂರು ಬಳಿಯಿರುವ ರೈಲ್ವೆ ಕೋಚಿಂಗ್ ಡಿಪೋವನ್ನು ಮೇಲ್ದರ್ಜೆಗೇರಿಸಿ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಣೆ ಮಾಡುವ ರೀತಿಯಲ್ಲಿ ಸಜ್ಜುಗೊಳಿಸಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಶಿವಮೊಗ್ಗದಿಂದ ವಂದೇ ಭಾರತ್ ರೈಲು ಓಡಿಸಲು ಸಾಧ್ಯವಾಗುತ್ತದೆ. ಅಮೃತ್ ಯೋಜನೆಯಡಿಯಲ್ಲಿ ಮೇಲ್ದರ್ಜೆಗೇರಿಸಲಾಗುವ ನಿಲ್ದಾಣಗಳೊಂದಿಗೆ ಭದ್ರಾವತಿ ರೈಲು ನಿಲ್ದಾಣವನ್ನು ಸೇರಿಸಿ ಎಂದು ಕೇಳಿಕೊಂಡಿದ್ದಾರೆ.
ಮಲೆನಾಡು ಮತ್ತು ಕರಾವಳಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತಾಳಗುಪ್ಪಾ - ತಡಸ - ಹೊನ್ನಾವರ - ಶಿರಸಿ - ಹುಬ್ಬಳ್ಳಿ ರೈಲು ಮಾರ್ಗದ ಕಾಮಗಾರಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಆದಷ್ಟು ಬೇಗ ಮಂಜೂರಾತಿ ನೀಡಿರಿ. ತಾಳಗುಪ್ಪ - ಮೈಸೂರು ರೈಲು ಇತ್ತೀಚಿನ ದಿನಗಳಲ್ಲಿ 30 ನಿಮಿಷ ತಡವಾಗಿ ಚಲಿಸುತ್ತಿದ್ದು, ಸರಿಯಾದ ಸಮಯಕ್ಕೆ ಹೊರಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಬೆಂಗಳೂರು - ಶಿವಮೊಗ್ಗ - ಬೆಂಗಳೂರು (ರೈಲು ಸಂಖ್ಯೆ 12089/90) ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಮೈಸೂರು - ತಾಳಗುಪ್ಪ - ಮೈಸೂರು (ರೈಲು ಸಂಖ್ಯೆ 16227/28) ರೈಲಿನ ಬೋಗಿಗಳು ಸಾಕಷ್ಟು ಹಳೆಯದಾಗಿದೆ. ಅತ್ಯಾಧುನಿಕ ಎಲ್‌ಹೆಚ್‌ಬಿ ಕೋಚ್‌ಗಳೊಂದಿಗೆ ಮೇಲ್ದರ್ಜೆರಿಸುವಂತೆ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಅನುಕೂಲಕರವಾಗುವ ರೀತಿಯಲ್ಲಿ ಕೆಲಸ ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ ಎಂದು ರಾಘವೇಂದ್ರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications