ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ AI ಚಾಲಿತ ಸ್ಮಾರ್ಟ್ ಹೆಲ್ಮೆಟ್ ತಯಾರಿಕೆ!
ಬೆಂಗಳೂರಿನಲ್ಲಿ 'ಟ್ರಾಫಿಕ್' ಎಂಬುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಅದಕ್ಕೆ ತಕ್ಕಂತೆ ಕೆಲವರು ಸಂಚಾರಿ ನಿಯಮಗಳನ್ನು ಕೂಡ ಪಾಲಿಸುವುದಿಲ್ಲ. ಇದು ಅಪಘಾತಕ್ಕೂ ಕಾರಣವಾಗಬಹುದು. ಸದ್ಯ, ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಟೆಕ್ಕಿಯೊಬ್ಬರು ಯತ್ನಿಸಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಶಿಷ್ಟವಾದ 'ಸ್ಮಾರ್ಟ್ ಹೆಲ್ಮೆಟ್'ನ್ನು ಸಿದ್ದಪಡಿಸಿದ್ದಾರೆ. ಈ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿರುವ ಟೆಕ್ಕಿ ಪಂಕಜ್ ತನ್ವರ್ ಅವರು, 'ನಾನು ರಸ್ತೆಯಲ್ಲಿ ಮೂರ್ಖ ಜನರಿಂದ ಬೇಸತ್ತು ಹೋಗಿದ್ದೇನೆ. ಹೀಗಾಗಿ ಹೆಲ್ಮೆಟ್‌ನ್ನು ಪೊಲೀಸ್ ಟ್ರಾಫಿಕ್ ಸಾಧನವಾಗಿ ಪರಿವರ್ತಿಸಿದ್ದೇನೆ. ಇದು ನೈಜ ಸಮಯದಲ್ಲಿ ಕೆಲಸ ಮಾಡುತ್ತದೆ. ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಗುರುತಿಸುತ್ತಿದೆ. ಸ್ಥಳ ಹಾಗೂ ನಂಬರ್ ಪ್ಲೇಟ್‌ನ ಮಾಹಿತಿಯನ್ನು ಪೊಲೀಸರಿಗೆ ಕಳುಹಿಸುತ್ತದೆ' ಎಂದು ಹೇಳಿದ್ದಾರೆ. ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸದೇ ಸ್ಕೂಟರ್‌ನ್ನು ಓಡಿಸಿದ್ದಾರೆ. ತಕ್ಷಣವೇ ಅದನ್ನು ರಿಪೋರ್ಟ್ ಮಾಡಲಾಗಿದ್ದು, ಆ ಪೋಟೋವನ್ನು ಹಂಚಿಕೊಂಡಿದ್ದಾರೆ.

ಕೆಲವೇ ದಿನಗಳಲ್ಲಿ ಟೆಕ್ಕಿ ಪಂಕಜ್ ತನ್ವರ್ ಅವರ ಈ ಪೋಸ್ಟ್, 23 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬರು, ಇದು ತುಂಬಾ ಇಷ್ಟ ಆಯ್ತು. ವಾಹನಗಳು ಈ ತಂತ್ರಜ್ಞಾನದೊಂದಿಗೆ ಬರಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು 'ನೀವು ಆಂದೋಲನವನ್ನು ಶುರು ಮಾಡಿದ್ದೀರಿ. ಸಾರ್ವಜನಿಕ ಸುರಕ್ಷತೆಗಾಗಿ ಈ ವಿಚಾರಗಳು ಮುಖ್ಯವಾಹಿನಿಗೆ ಬರುವ ಸಮಯವಿದು' ಎಂದಿದ್ದಾರೆ.
ಹೆಲ್ಮೆಟ್ ಹೇಗೆ ಕಾರ್ಯನಿರ್ವಹಿಸುತ್ತದೆ:
ವಿಶೇಷವಾಗಿ ಈ ಹೆಲ್ಮೆಟ್‌ನಲ್ಲಿ 'ಎಐ' ಸಾಫ್ಟ್‌ವೇರ್‌ನ್ನು ಬೆಂಬಲಿಸಬಲ್ಲ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ಇದು ರಸ್ತೆಯಲ್ಲಿ ಸಿಗ್ನಲ್ ಜಂಪ್ ಮತ್ತು ಹೆಲ್ಮೆಟ್ ರಹಿತ ಚಾಲನೆ ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ಪತ್ತೆ ಹಚ್ಚುತ್ತದೆ. ಫೋಟೋ ಸಹಿತ ವಿವರಗಳನ್ನು ಇಮೇಲ್ ಮೂಲಕ ಪೊಲೀಸರಿಗೆ ರವಾನಿಸುತ್ತದೆ.
i was tired of stupid people on road so i hacked my helmet into a traffic police device 🚨
— Pankaj (@the2ndfloorguy) January 3, 2026
while i ride, ai agent runs in near real time, flags violations, and proof with location & no plate goes straight to police.
blr people - so now ride safe… or regret it. pic.twitter.com/lWaRO01Jaq
ಬೆಂಗಳೂರ ಪೊಲೀಸರ ಮೆಚ್ಚುಗೆ:
ಪಂಕಜ್ ತನ್ವರ್ ಅವರ ಪ್ರಯತ್ನವನ್ನು ಬೆಂಗಳೂರು ಪೊಲೀಸರು ಶ್ಲಾಘಿಸಿದ್ದಾರೆ. 'ನಿಮ್ಮ ಇತ್ತೀಚಿನ ಹೆಲ್ಮೆಟ್ ಆಧಾರಿತ ಸಂಚಾರಿ ನಿಯಮ ಉಲ್ಲಂಘನೆ ಪತ್ತೆ ಹಚ್ಚುವಿಕೆಯ ಪರಿಕಲ್ಪನೆ ಕುರಿತ ಪೋಸ್ಟ್‌ನ್ನು ನೋಡಿದ್ದೇವೆ. ಇದು ರಸ್ತೆ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಆಸಕ್ತಿದಾಯಕವಾಗಿದೆ. ನಾವು ಸಹ ಪ್ರಶಂಶಿಸುತ್ತೇವೆ' ಎಂಬ ಪ್ರತಿಕ್ರಿಯೆ ಬಂದಿದೆ.
ಅಪಘಾತ ತಪ್ಪಿಸಲು ನಾವೇನು ಮಾಡಬೇಕು:
ಮೊದಲಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಯಾವುದೇ ಸಾಮಾನ್ಯ ರಸ್ತೆ ಅಥವಾ ಹೆದ್ದಾರಿಯೇ ಆಗಿರಲಿ ಗೊತ್ತುಪಡಿಸಿದ ವೇಗ ಹಾಗೂ ನಿರ್ದಿಷ್ಟ ಪಥದಲ್ಲಿ ವಾಹನಗಳನ್ನು ಚಲಾಯಿಸಿ. ವಾಹನಗಳನ್ನು ಓಡಿಸುವಾಗ ಮೊಬೈಲ್ & ಇಯರ್ ಫೋನ್‌ನ್ನು ಎಂದಿಗೂ ಬಳಕೆ ಮಾಡದಿರಿ.
ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಹೆಲ್ಮೆಟ್‌ನಂತಹ ಸುರಕ್ಷತಾ ಉಪಕರಣಗಳನ್ನು ತಪ್ಪದೇ ಉಪಯೋಗಿಸಿರಿ. ಕಾರುಗಳನ್ನು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಬಳಸುವುದನ್ನು ಮರೆಯದಿರಿ. ಮದ್ಯಪಾನ ಮಾಡಿ, ವಾಹನಗಳನ್ನು ಓಡಿಸಬೇಡಿ. ಇದರಿಂದ ರಸ್ತೆ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಆಗುವುದಿಲ್ಲ. ಈ ರೀತಿಯ ಹಲವು ಮುನ್ನೆಚ್ಚರಿಕೆ ಕ್ರಮಗಳಿಂದ ಸಂಭಾವ್ಯ ಕಠಿಣ ಅಪಘಾತಗಳನ್ನು ತಪ್ಪಿಸಬಹುದಾಗಿದೆ.
ಒಟ್ಟಾರೆಯಾಗಿ, ಬೆಂಗಳೂರು ಟೆಕ್ಕಿಯು ಕೃತಕ ಬುದ್ಧಿಮತ್ತೆ ಆಧಾರಿತ 'ಸ್ಮಾರ್ಟ್ ಹೆಲ್ಮೆಟ್'ನ್ನು ತಯಾರಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇಂತಹ ಕ್ರಮವನ್ನು ಸರ್ಕಾರವೇ ಸ್ವತಃ ಅನುಷ್ಠಾನಗೊಳಿಸಿದರೆ, ಸಂಚಾರ ನಿಯಮ ಉಲ್ಲಂಘನೆಗಳ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಕಡಿಮೆಗೊಳಿಸಬಹುದು. ಜೊತೆಗೆ ಅಪಘಾತಗಳ ಸಂಖ್ಯೆಯನ್ನು ನಿಯಂತ್ರಿಸಬಹುದು.


Click it and Unblock the Notifications








