Bengaluru Tunnel Road: ದೊಡ್ಡ ಸಿಹಿಸುದ್ದಿ.. ಶೀಘ್ರ ಬೆಂಗಳೂರು ಸುರಂಗ ರಸ್ತೆ ಕಾಮಗಾರಿ ಶುರು, ಎಲ್ಲಿ ಗೊತ್ತಾ?
ಬೆಂಗಳೂರು (Bengaluru) ನಗರದಲ್ಲಿ ಸಂಚಾರ ದಟ್ಟಣೆ ಎಂಬುದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. 18 ಕಿಲೋಮೀಟರ್ ಉದ್ದದ ಸುರಂಗ ರಸ್ತೆ (Tunnel Road) ನಿರ್ಮಿಸಲು ತಯಾರಿ ನಡೆಸುತ್ತಿದೆ. ಈಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರು, ಈ ಸುರಂಗ ರಸ್ತೆ ಕುರಿತಂತೆ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಉಪ ಮುಖ್ಯಮಂತ್ರಿ ಡಿಕೆಶಿ, ಶಾಲಾ ಮಕ್ಕಳೊಂದಿಗೆ ವಿಶೇಷ ಸಂವಾದ ನಡೆಸಿದರು. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವೇನು ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು, 'ಪ್ರತಿ ವರ್ಷ ನಗರದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತವೆ. ಆದರೆ, ರಸ್ತೆಗಳು ಮಾತ್ರ ವರ್ಷಗಳಿಂದ ಹಾಗೆಯೇ ಇವೆ' ಎಂದು ಹೇಳಿದರು.

'ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಸುರಂಗ ರಸ್ತೆ ನಿರ್ಮಾಣ ಯೋಜನೆ ಪರಿಹಾರವಾಗಲಿದೆ. ಮೆಟ್ರೋ ರೈಲುಗಳ ಓಡಾಟದ ಹೊರತಾಗಿಯೂ ಟ್ರಾಫಿಕ್ ಎಂಬುದು ನಿರಿಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. ಮುಂದಿನ ವರ್ಷದ (2025) ಆರಂಭದಲ್ಲಿ ಸುರಂಗ ರಸ್ತೆ ಕಾಮಗಾರಿ ಶುರು ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಯೋಜನೆ ಎಲ್ಲ ಸಮಸ್ಯೆಗೂ ಮುಕ್ತಿ ನೀಡುತ್ತದೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಹಿಂದೆ, ಸುರಂಗ ರಸ್ತೆ ನಿರ್ಮಾಣ ಸಂಬಂಧ ಜನವರಿಯಲ್ಲಿ ಟೆಂಡರ್ ಕರೆಯಲು ಬೆಂಗಳೂರು ಮಹಾನಗರ ಪಾಲಿಕೆ ಯೋಜಿಸಿದೆ ಎಂದು ವರದಿಯಾಗಿತ್ತು. ಮೊದಲ ಹಂತವಾಗಿ ಬಿಬಿಎಂಪಿ ಹೆಬ್ಬಾಳದಲ್ಲಿರುವ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸಲು 18-ಕಿಲೋಮೀಟರ್ ಉದ್ದದ 6 ಪಥದ ಸುರಂಗ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಿದೆ.

ಸುರಂಗ ರಸ್ತೆ ಯೋಜನೆಗೆ ರೂ.16,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಹೆಚ್ಚಿನ ಸಂಚಾರ ದಟ್ಟಣೆಯಿದ್ದು, ಈ ರಸ್ತೆಯಲ್ಲಿ ವಾಹನಗಳು ಓಡಾಟ ನಡೆಸಲು 1 ಗಂಟೆಗೂ ಅಧಿಕ ಕಾಲಾವಕಾಶ ಬೇಕಾಗುತ್ತದೆ. ನೂತನ ಸುರಂಗ ರಸ್ತೆ ಲೋಕಾರ್ಪಣೆಗೊಂಡ ನಂತರ, ಇದು 20 ರಿಂದ 25 ನಿಮಿಷಗಳಿಗೆ ಇಳಿಕೆಯಾಗಲಿದೆ.
ಭೂಸ್ವಾಧೀನ ಪ್ರಕ್ರಿಯೆ ಹಾಗೂ ಹೆಚ್ಚಿನ ಮರಗಳನ್ನು ಕಡಿಯುವ ಅಗತ್ಯವಿಲ್ಲದಿರುವುದರಿಂದ ಸುರಂಗ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೂಡ ಆಸಕ್ತಿ ತೋರಿದೆ ಎಂದು ಹೇಳಲಾಗಿದೆ. ಈ ಸುರಂಗದ ಎತ್ತರವು 10 ಮೀಟರ್ ಇರಲಿದ್ದು, ವಾಹನಗಳು ಗಂಟೆಗೆ 40 ರಿಂದ 60 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಡಬಹುದು. ಜೊತೆಗೆ ಸುರಂಗ ರಸ್ತೆ ಬಳಕೆಗೆ ವಾಹನ ಸವಾರರಿಗೆ ಶುಲ್ಕವು ವಿಧಿಸಬಹುದು ಎನ್ನಲಾಗಿದೆ.

ಇನ್ನು, ಸುರಂಗ ರಸ್ತೆ ನಿರ್ಮಾಣದಿಂದ ವಾಹನ ಸವಾರರಿಗೆ ದೊಡ್ಡ ಮಟ್ಟದ ಅನುಕೂಲವಾಗುತ್ತದೆ. ಅದರಲ್ಲೂ ಸಂಚಾರ ದಟ್ಟಣೆ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆಯುತ್ತದೆ. ಆದರೆ ಈ ರಸ್ತೆ ನಿರ್ಮಿಸಲು ಸಾಕಷ್ಟು ಅನುದಾನ ಬೇಕಿದ್ದು, ಇದೇ ಖರ್ಚಿನಲ್ಲಿ ಹೊಸ ಮೆಟ್ರೋ ಮಾರ್ಗ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೂ ಹೆಚ್ಚಿನ ಉಪಯೋಗವಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications